
ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೊರೊನಾ ವಾರಿಯರ್ ಗಳು ಕೂಡ ಸೋಂಕಿಗೆ ಬಲಿಯಾಗುತಿದ್ದಾರೆ. ಈ ನಡುವೆ ಆಂಬುಲೆನ್ಸ್ ಚಾಲಕನೊಬ್ಬ ಕೊವಿಡ್ ಗೆ ಬಲಿಯಾಗಿದ್ದು, ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಆಂಬುಲೆನ್ಸ್ ಚಾಲಕನಾಗಿ ಕಾರ್ಯನಿರ್ವಹಿಸುತಿದ್ದ ಜಗದೀಶ್ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.
ಕೊರೊನಾ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಮಯದಲ್ಲಿ ಕೂಡ ಆರೋಗ್ಯ ಇಲಾಖೆ ಆಂಬುಲೆನ್ಸ್ ಚಾಲಕನಿಗೆ ಯಾವುದೇ ಆರೋಗ್ಯ ಸಲಕರಣೆಗಳನ್ನು ನೀಡಿಲ್ಲ. ಹೀಗಾಗಿ ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಜಗದೀಶ್ ಗೆ ಸೋಂಕು ತಗುಲಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಾಲಕ ಬಲಿಯಾಗಿದ್ದಾನೆ ಎಂದು ಆಂಬುಲೆನ್ಸ್ ಸಿಬ್ಬಂದಿಗಳು ಆರೋಪಿಸಿದ್ದಾರೆ.
ಕೊವಿಡ್ ನಂತಹ ಈ ಕಠಿಣ ಸಂದರ್ಭದಲ್ಲಿ ಕೂಡ ಆರೋಗ್ಯ ಇಲಾಖೆ ಆಂಬುಲೆನ್ಸ್ ಚಾಲಕರಿಗೆ ಸೂಕ್ತವಾದ ಮುನ್ನೆಚ್ಚರಿಕಾ ಸಲಕರಣೆ ನೀಡುತ್ತಿಲ್ಲ. ಯಾವುದೇ ಮಾಸ್ಕ್, ಪಿಪಿಇ ಕಿಟ್ ಏನನ್ನೂ ನೀಡುತ್ತಿಲ್ಲ. ನಮ್ಮ ಜೀವ ಪಣಕ್ಕಿಟ್ಟು ಕೊವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ. ನಮ್ಮ ಜೀವಕ್ಕೆ ಬೆಲೆಯಿಲ್ಲದಾಗಿದೆ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.