
ಪ್ರಗತಿವಾಹಿನಿ ಸುದ್ದಿ, ಜೈಪುರ: ಸುಮ್ಮನಿದ್ದಲ್ಲಿ ಸಮಸ್ಯೆಗಳು ಯಾವ್ಯಾವ ರೂಪದಲ್ಲಿ ಬಂದು ವಕ್ಕರಿಸಿಕೊಳ್ಳುತ್ತವೆಂದು ಹೇಳಲಾಗದು. ಅದಕ್ಕೊಂದು ಉದಾಹರಣೆ ಇಲ್ಲಿದೆ. ಸರಿಯಾಗಿ ತಿಂಗಳಿಗೆ ಹತ್ತಿಪ್ಪತ್ತು ಸಾವಿರ ರೂ. ಆದಾಯ ನೀಡದ ಕಿರಾಣಿ ಅಂಗಡಿ ನಡೆಸಿಕೊಂಡಿರುವ ವ್ಯಾಪಾರಿಗೆ ಕೋಟಿಗಟ್ಟಲೆ ತೆರಿಗೆ ಭರಿಸುವಂತೆ ಜಾರಿಗೊಳಿಸಲಾದ ತೆರಿಗೆ ಇಲಾಖೆ ನೋಟಿಸ್ ತಲೆಬಿಸಿ ತಂದಿಟ್ಟಿದೆ.
ರಾಜಸ್ಥಾನದ ಭಿಲ್ವಾರಾದ ಗೋಪಾಲ ಚಪರ್ವಾಲ್ ಎಂಬುವವರೇ ಇಂಥದ್ದೊಂದು ಆಘಾತಕ್ಕೆ ಒಳಗಾದವರು. ಗೋಪಾಲ ವಿಕಲಚೇತನರಾಗಿದ್ದು ಕಷ್ಟಪಟ್ಟು ಸಾಲ ಮಾಡಿ ಸಣ್ಣದೊಂದು ಕಿರಾಣಿ ಅಂಗಡಿ ನಡೆಸಿಕೊಂಡಿದ್ದಾರೆ. ಇದರಿಂದ ತೀರ ಕನಿಷ್ಠ ಆದಾಯ ಗಳಿಸುತ್ತಿರುವ ಗೋಪಾಲ ಆಗಾಗ ಮದುವೆ ಮನೆಗಳಲ್ಲಿ ಫೋಟೊಗ್ರಾಫಿ ಮಾಡಿ ಒಂದಿಷ್ಟು ಹಣ ಸಂಪಾದಿಸುತ್ತಾರೆ. ಈ ಎಲ್ಲ ಆದಾಯ ಸೇರಿ ಅವರ ಕುಟುಂಬದ ತಿಂಗಳ ಜೀವನಕ್ಕೆ ಸಾಕಾಗಿದೆ.
ಆದರೆ ಇತ್ತೀಚೆಗೆ ತಮ್ಮ ಪಾಡಿಗೆ ತಾವು ವ್ಯಾಪಾರ ಮಾಡಿಕೊಂಡಿದ್ದ ಗೋಪಾಲ್ ಗೆ ತೆರಿಗೆ ಇಲಾಖೆಯಿಂದ ಶೋಕಾಸ್ ನೋಟಿಸ್ ಕಳುಹಿಸಲಾಗಿದೆ. ಅವರು ಭಾರೀ ಪ್ರಮಾಣದ ವ್ಯಾಪಾರ ವಹಿವಾಟು ನಡೆಸಿದ್ದು 12.23 ಕೋಟಿ ರೂ. ತೆರಿಗೆ ಭರಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಇದನ್ನು ಕಂಡ ಗೋಪಾಲ ಅವರು ಕಂಗಾಲಾಗಿದ್ದಾರೆ.
ನಿಜವಾಗಿ ನಡೆದಿದ್ದೇನು?:
ತೆರಿಗೆ ಇಲಾಖೆ ನೋಟಿಸ್ ಸ್ವೀಕರಿಸಿದ ಗೋಪಾಲ ಅವರು ಕೂಡಲೆ ಚಾರ್ಟರ್ಡ್ ಅಕೌಂಟಂಟ್ ಒಬ್ಬರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿದಾಗ ಅವರಿಗೆ ತಿಳಿಯದಂತೆ ಅವರ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳನ್ನು ಬೇರೆಯವರು ದುರ್ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಮುಂಬೈ ಮತ್ತು ಸೂರತ್ನಲ್ಲಿ 2 ಡೈಮಂಡ್ ವಹಿವಾಟಿನ ನಕಲಿ ಕಂಪನಿಗಳು ಅವರ ಪ್ಯಾನ್ಕಾರ್ಡ್ ದುರ್ಬಳಕೆ ಮಾಡಿಕೊಂಡಿರುವುದು ತಿಳಿದುಬರುತ್ತಲೇ ಗೋಪಾಲ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈವರೆಗೆ ಸರಿಯಾಗಿ ಲಕ್ಷವನ್ನೇ ಎಣಿಸಿರದ ವ್ಯಕ್ತಿಗೆ ಹತ್ತಾರು ಕೋಟಿ ರೂ. ತೆರಿಗೆ ಕಟ್ಟುವಂತೆ ಬಂದ ನೋಟಿಸ್ ಇಡೀ ಕುಟುಂಬದವರನ್ನೇ ಕಂಗೆಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ