ಡಾ.ಸರಜೂ ಕಾಟ್ಕರ್ ಅವರ 12 ಪುಸ್ತಕಗಳ ಬಿಡುಗಡೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅವರ 12 ಪುಸ್ತಕಗಳ ಬಿಡುಗಡೆ ಸಮಾರಂಭ ಬೆಳಗಾವಿಯಲ್ಲಿ ಇಂದು ನಡೆಯಿತು.
ಗೌರೀಪುರ, ಹೊಕ್ಕಳು ಮತ್ತು ಹೂವು, ಶಬ್ದ ಪ್ರಮಾಣ, ನಾನು ಹಿಂದೂ ಆಗಿ ಹುಟ್ಟಿದ್ದರೂ ಹಿಂದೂ ಆಗಿ ಸಾಯುವುದಿಲ್ಲ , ಮುಟ್ಟಿಸಿಕೊಳ್ಳದವರನ್ನು ನಾವೇಕೆ ಮುಟ್ಟಬೇಕು, ಕಂಬಾರ ಕಾವ್ಯ ಕಾರಣ, ಸರಜೂ ಕಾಟ್ಕರ್ ಅವರ ಭಾಷಾಂತರ ಸಾಹಿತ್ಯ, ಮೂರನೆಯ ಮಂತ್ರ, ಸವ್ಯ ಸಾಚಿ, ಸಾವಿತ್ರಿಬಾಯಿ ಫುಲೆ (2ನೇ ಮುದ್ರಣ), ವಾಜಪೇಯಿ ಕವಿತೆಗಳು (ಮೂರನೇ ಮುದ್ರಣ), ಬಸವ ಮತ್ತು (ಮೂರನೇ ಮುದ್ರಣ), ಸುಪ್ರಸಿದ್ಧ ಭಾಷಣಗಳು (ಮೂರನೇ ಮುದ್ರಣ) ಬಿಡುಗಡೆಗೊಂಡ ಪುಸ್ತಕಗಳು.
ಪುಸ್ತಕಗಳನ್ನು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ್ ಬಿಡುಗಡೆ ಮಾಡಿದರು.
ಸಾಹಿತ್ಯ ಬದುಕಿಗೆ ಪೂರಕವಾಗಬೇಕು. ಹಿಂದಿನ ಸಾಹಿತಿಗಳು ಸಾಹಿತ್ಯದ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದಾದರೆ. ಅವು ಬದುಕಿಗೆ ಹತ್ತಿರವಾಗಿದ್ದವು. ಅವುಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಮೇಘಣ್ಣವರ್, ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯವನ್ನು ಬಿತ್ತಿ ಬೆಳೆಸಿದವರು ಡಾ. ಸರಜೂ ಕಾಟ್ಕರ್ ಎಂದರು.
ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ಸಾಮಾಜಿಕ ಸಂಬಂಧ ಮತ್ತು ಕೌಟುಂಬಿಕ ಸಂಬಂಧ ತೂಗಿಸಿಕೊಂಡು ಹೋಗುವುದೇ ಕಷ್ಟದ ಕೆಲಸವಾಗಿದೆ. ಮನೆಯಲ್ಲಿ ಸಿಗದ ಅಂತಹ ಸಂಬಂಧಗಳನ್ನು ಹೊರಗಡೆ ಗುರುತಿಸಬೇಕು. ಸಮಾಜದಲ್ಲಿರುವವರನ್ನೇ ಅಣ್ಣ, ತಮ್ಮ ಎಂದು ಪ್ರೀತಿಸಬೇಕು. ಹಿರಿಯ ತಲೆಮಾರಿನ ಅನುಭವಗಳನ್ನು ಕೇಳುವುದೇ ರೋಮಾಂಚನ. ಅವುಗಳು ಉಪಯುಕ್ತವಾಗಿರುತ್ತವೆ. ಅಂತವುಗಳನ್ನು ಉಳಿಸಿಕೊಳ್ಳಬೇಕು ಎಂದರು.
ಸುಬ್ರಾವ್ ಎಂಟೆತ್ತಿನವರ್ ಬರೆದ ಡಾ.ಸರಜೂ ಕಾಟ್ಕರ್ ಅವರ ಅನುವಾದ ಸಾಹಿತ್ಯ ಪಿಎಚ್ ಡಿ ಪ್ರಬಂಧವನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ರಂಗರಾಜ ವನದುರ್ಗ ಮತ್ತು ಸಾಹಿತಿ ಶಿರೀಷ್ ಜೊಷಿ ಪುಸ್ತಕಗಳನ್ನು ಪರಿಚಯಿಸಿದರು. ಎಂ.ಕೆ.ಜೈನಾಪುರ, ರವಿಕೊಟಾರಗಸ್ತಿ, ರಾಮಕೃಷ್ಣ ಮರಾಠೆ, ಸುಬ್ರಹ್ಮಣ್ಯ ಭಟ್ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ