ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ’ಎ’ ಶ್ರೇಣಿ ಅಧಿಸೂಚಿತ ಸಂಸ್ಥೆಯಾಗಿದೆ. ವಿವಿಧ ಇಲಾಖೆಗಳ ೯೦ ಕೋಟಿ ರೂ. ಅನುದಾನ ಹಾಗೂ ದೇವಾಲಯದ ನಿಧಿಯ ೩೦ ಕೋಟಿ ರೂಪಾಯಿ ಸೇರಿ ಒಟ್ಟು ೧೨೦ ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ ನಿರ್ಮಾಣ, ಸ್ವಚ್ಛತೆ ಹಾಗೂ ವಸತಿ ಸೌಲಭ್ಯಗಳನ್ನು ಮಾಸ್ಟರ್ ಪ್ಲಾನ್‌ನಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ್ ಬಿ.ಪಾಟೀಲ ರಾಜ್ಯ ವಿಧಾನಪರಿಷತ್‌ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶದ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ದೇವಾಲಯ ನಿಧಿಯಿಂದ ೩೦ ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಲೋಕೋಪಯೋಗಿ ಇಲಾಖೆಗಳಿಂದ ೯೦ ಕೋಟಿ ರೂಪಾಯಿ ಅನುದಾನ ಸೇರಿ ಒಟ್ಟು ೧೨೦ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯದಿಂದ ಕುಡಯುವ ಹಾಗೂ ಬಳಕೆ ನೀರನ್ನು ಪೂರೈಸಲಾಗುತ್ತಿದೆ. ಹೆಚ್ಚುವರಿ ನೀರು ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದೆ. ಐದು ಸಮುಚಯಗಳಲ್ಲಿ ಶೌಚಾಲಯ, ಸ್ನಾನಗೃಹಗಳು ಹಾಗೂ ಎಣ್ಣೆ ಹೊಂಡದಲ್ಲಿ ಮಹಿಳೆಯರಿಗೆ ಹಾಗೂ ಪುರಷರಿಗೆ ಪ್ರತ್ಯೇಕ ಸ್ನಾನಗೃಹ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನದ ಆವರಣ ಮತ್ತು ಸುತ್ತಲಿನ ಹತ್ತು ಎಕರೆ ಪ್ರದೇಶದಲ್ಲಿ ದಿನನಿತ್ಯ ೪೫ ಜನ ಕೆಲಸಗಾರರಿಂದ ಹೊರಗುತ್ತಿಗೆ ಅಡಿ ಸ್ವಚ್ಛತೆ ಕಾರ್ಯ ನಿರ್ವಹಿಸಲಾಗುತ್ತಿದೆ. ಭಕ್ತರ ವಸತಿಗೆ ೧೦೬ ಕೊಠಡಿಗಳು ಹಾಗೂ ಡಾರ್ಮೆಟರಿಗಳು ಈಗ ಬಳಕೆಯಲ್ಲಿವೆ. ಇನ್ನೂ ಹೆಚ್ಚಿನ ೨೪೬ ಕೊಠಡಿಗಳ ಅತಿಥಿಗೃಹ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಸಚಿವರು ವಿವರಿಸಿದರು.
ದೇವಾಲಯಗಳ ತಾತ್ಕಾಲಿಕ ನೌಕರರಿಗೆ ವೇತನ ಶ್ರೇಣಿ ನಿಗದಿ
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ೨೦೧೧ರ ೮ನೇ ನಿಯಮಕ್ಕೆ ತಿದ್ದುಪಡಿ ತಂದು ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ೨೫೬೮ ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ ಸರಿಪಡಿಸಲು ಸೂಕ್ತ ವೇತನ ಶ್ರೇಣಿ ನಿಗದಿಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವ ರಾಜಶೇಖರ್ ಬಿ.ಪಾಟೀಲ ರಾಜ್ಯ ವಿಧಾನಪರಿಷತ್‌ನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ಸಿ.ವೇಣುಗೋಪಾಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ದೇವಾಲಯದ ನೌಕರರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಇವರಿಗೆ ವೇತನ ಶ್ರೇಣಿ ನೀಡಲು ನಿಯಮ ರೂಪಿಸಲಾಗಿದೆ. ದೇವಾಲಯದ ವಾರ್ಷಿಕ ಆದಾಯದಲ್ಲಿ ಸಿಬ್ಬಂದಿ ವೆಚ್ಚವು ಶೇಕಡಾ ೩೫ ಮೀರದಂತೆ ವೇತನ ಶ್ರೇಣಿ ನೀಡಬೇಕಾಗಿದೆ. ಈಗಾಗಲೇ ೧೧೧೧ ನೌಕರರುಗಳಿಗೆ ಐದನೇ ವೇತನ ಶ್ರೇಣಿ ನೀಡಲಾಗುತ್ತಿದೆ. ೨೫೬೮ ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ ಸರಿಪಡಿಸಲು ಧಾರ್ಮಿಕ ದತ್ತಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ದಿನಾಂಕ ೦೭-೧೨-೨೦೧೮ ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಪರಿಶೀಲಿಸಿ ದೇವಾಲಯಗಳ ಆದಾಯ ಮತ್ತು ವೆಚ್ಚದ ಪೂರ್ಣ ಅಂಕಿ ಅಂಶ ಪಡೆದು ವೇತನ ಶ್ರೇಣಿ ಜಾರಿಗೊಳಿಸಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ