ಲೇಖನ: ಕಲಾನಿಧಿ
” ಗಮಕ” ಕರ್ನಾಟಕದ ಅತ್ಯಂತ ಪ್ರಾಚೀನ ಹೆಮ್ಮೆಯ ಕಲೆ. ಸಾಹಿತ್ಯ ಮತ್ತು ಸಂಗೀತ ಎರಡೂ ಸಮ್ಮಿಳಿಸಿದ ಸುಂದರ ಕಲೆ. ಕನ್ನಡದ ಶ್ರೇಷ್ಠ ಕಾವ್ಯಗಳನ್ನು ಕನ್ನಡಿಗರ ಮನೆಮನಕ್ಕೆ ತಲುಪಿಸುವ ಏಕೈಕ ಕಲೆ. ಪಂಪರನ್ನರಿಂದ ಕುಮಾರವ್ಯಾಸ, ಲಕ್ಷ್ಮೀಶರತನಕದ ಕವಿಕಾವ್ಯ ನಮ್ಮ ಕನ್ನಡ ನೆಲದ ಭವ್ಯ ಸಾಹಿತ್ಯ ಪರಂಪರೆಯ ಪ್ರತೀಕ. ಗಮಕದಲ್ಲಿ ಕಾವ್ಯಕ್ಕೆ ಹೆಚ್ಚಿನ ಮಹತ್ವ. ಸಂಗೀತದ ರಾಗಗಳನ್ನು ಬಳಸಿ ಕಾವ್ಯದ ಸೊಗಸನ್ನು , ಭಾಷೆಯ ಸೊಬಗನ್ನು, ಅರ್ಥದ ಸೊಗಡನ್ನು ಕೇಳುಗರಿಗೆ ತಲುಪಿಸಿ , ಕಾವ್ಯಾಭಿರುಚಿಯನ್ನು ಬೆಳೆಸುವದೇ ಗಮಕ ಕಲೆಯ ಘನ ಉದ್ದೇಶ. ಶತಮಾನದ ಹಿಂದೆ ಕನ್ನಡ ನಾಡಿನ ಮನೆ ಮಠ ಮಂದಿರಗಳಲ್ಲೆಲ್ಲ ವಿವಿಧ ಕಾವ್ಯ ವಾಚನ , ಕಾವ್ಯ ಪ್ರವಚನಗಳು ನಡೆಯುತ್ತಿದ್ದವು. ಅದು ಸಮಾಜದಲ್ಲಿ ಸದಭಿರುಚಿಯನ್ನು ಬೆಳೆಸುವ ಒಂದು ಮಾಧ್ಯಮವೂ ಆಗಿತ್ತು.
ಕರ್ನಾಟಕದಲ್ಲಿ ಗಮಕ ಕಲೆಗೆ ಬಹಳ ದೀರ್ಘ ಹಿನ್ನೆಲೆ ಇದೆ. ಗಮಕ ವಾಚನ ಮತ್ತು ವ್ಯಾಖ್ಯಾನ ಮಾಡುವ ವಿದ್ವಾಂಸರ ಮತ್ತು ಕಲಾಪರಿಣಿತರ ಒಂದು ದೊಡ್ಡ ಪರಂಪರೆಯೇ ಇದೆ. ಮುಳಿಯೆ ತಿಮ್ಮಪ್ಪಯ್ಯನವರು, ಮತ್ತೂರು ಕೃಷ್ಣಮೂರ್ತಿಯವರು, ರಾಘವೇಂದ್ರರಾಯರು, ಬಿ. ಎಸ್. ಕೌಶಿಕ, ನಂ. ಅಶ್ವತ್ಥ ನಾರಾಯಣ, ಲಕ್ಷ್ಮೀಕೇಶವ ಶಾಸ್ತ್ರಿ, ಜಿ. ಶೇಷಾಚಲಯ್ಯ, ಜಿ. ದಕ್ಷಿಣಾಮೂರ್ತಿ, ಸತ್ಯವತಿ ಕೇಶವಮೂರ್ತಿ, ಭುವನಗಿರಿ ಅನಂತಕೃಷ್ಣ ಶರ್ಮಾ ಮೊದಲಾದವರು ಈ ಕಲೆಗೆ ಘನತೆ ಗೌರವ ತಂದುಕೊಟ್ಟ ಹಿರಿಯರು.
ಈ ವಿದ್ವತ್ಪರಂಪರೆಯಲ್ಲೇ ಇಂದು ನಮ್ಮೊಡನಿರುವ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು, ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು, ಶಾಂತಾ ಕೌತಾಳ , ಶಾಂತಾ ಗೋಪಾಲ ಮೊದಲಾದವರ ಕೊಡುಗೆಯೂ ಬಹಳ ದೊಡ್ಡದು.
ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ಟರು:
ಇದೀಗ ಬೆಳಗಾವಿಯಲ್ಲಿ ಏ.16 ಮತ್ತು 17 ರಂದು 13ನೇ ಗಮಕ ಕಲಾ ಸಮ್ಮೇಳನ ಅಖಿಲ ಕರ್ನಾಟಕ ಗಮಕ ಕಲಾ ಪರಿಷತ್ತು, ಅದರ ಜಿಲ್ಲಾ ಘಟಕ ಮತ್ತು ಶ್ರೀ ವಾಗ್ದೇವಿ ಸಂಗೀತ ಕಮಕ ಕಲಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವವರು ಗಮಕ ಕಲಾ ತಜ್ಞರಾದ 76 ವರ್ಷ ವಯಸ್ಸಿನ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ಕಳೆದ ಮೂವತ್ತೈದು ವರ್ಷಗಳಿಂದಲೂ ಈ ಗಮಕ ಕಲಾಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಈಗ ಕೇರಳ ದಲ್ಲಿರುವ ಅಚ್ಚಗನ್ನಡ ನೆಲವಾದ ಪಯಸ್ವಿನೀ ನದೀತೀರದ ಕಾಸರಗೋಡಿನ ತೆಕ್ಕೆಕೆರೆ ಎಂಬಲ್ಲಿ ಜನಿಸಿದ ಅವರು ಮೊದಲು ಅಂಚೆತಂತಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ನಂತರ 16 ವರ್ಷ ಚಿತ್ರದುರ್ಗದಲ್ಲಿ ಕನ್ನಡದ ಗೌರವ ಅಧ್ಯಾಪಕರಾಗಿ ಪಾಠ ಹೇಳಿದವರು. ಬಾಲ್ಯದಿಂದಲೂ ಕಾವ್ಯ, ಸಂಗೀತ, ಯಕ್ಷಗಾನ, ಗಮಕ ಕಲೆಗಳಲ್ಲಿ ಅಭಿರುಚಿ ಹೊಂದಿದ್ದ ಅವರು 1985 ರ ನಂತರ ಪೂರ್ತಿಯಾಗಿ ಗಮಕ ಕ್ಷೇತ್ರಕ್ಕೆ ಧುಮುಕಿದರು. ಗಮಕ ವಾಚಕರಾಗಿ, ವ್ಯಾಖ್ಯಾನಕಾರರಾಗಿ , ಕರ್ನಾಟಕದ ಹಲವು ಜಿಲ್ಲೆಗಳಲ್ಲಿ, ಮಾತ್ರವಲ್ಲದೆ ಮುಂಬಯಿ, ದಿಲ್ಲಿ, ಕೇರಳ ಮೊದಲಾದೆಡೆಯೂ ಗಮಕ ಕಾರ್ಯಕ್ರಮಗಳನ್ನು, ತರಬೇತಿಯನ್ನು ನೀಡಿ ಕಲಾಪ್ರಚಾರ ಮಾಡಿದರು. ಗಮಕ ಕಲೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಬಹಳ ದೊಡ್ಡದು. ಅವರು ವಿದ್ವತ್ಪೂರ್ಣ 14 ಕೃತಿಗಳನ್ನೂ ರಚಿಸಿದ್ದು, ಗಮಕ ಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ರಾಜ್ಯ ಸರಕಾರದ ಕರ್ನಾಟಕ ಕಲಾಶ್ರೀ , ಪರಮದೇವ ಪ್ರಶಸ್ತಿ ಸಹಿತ ಹಲವು ಗೌರವಗಳು ದೊರಕಿವೆ.
ಗಂಗಮ್ಮ ಕೇಶವಮೂರ್ತಿಯವರು:
ಕರ್ನಾಟಕ ಗಮಕ ಕಲಾ ಪರಿಷತ್ತಿನ ಈಗಿನ ಅಧ್ಯಕ್ಷರಾಗಿರುವ ಗಂಗಮ್ಮ ಕೇಶವಮೂರ್ತಿಯವರದು ಈ ಕ್ಷೇತ್ರದಲ್ಲಿ ಒಂದು ಮಹತ್ವದ ಹೆಸರು. 86 ವರ್ಷ ವಯಸ್ಸಿನ ಹಿರಿಯ ಗಮಕ ಕಲಾವಿದರೂ, ವಿದ್ವಾಂಸರೂ ಆದ ಅವರು ಈತನಕ ೧೨ ಸಾವಿರಕ್ಕೂ ಹೆಚ್ಚು ಗಮಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. 9ನೇ ಗಮಕ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದರು. ಕರ್ನಾಟಕ ಕಲಾಶ್ರೀ, ಗಮಕಶ್ರೀ ಸಹಿತ ಹಲವು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾರೆ. ಗಮಕ ಕಲಾಕ್ಷೇತ್ರದಲ್ಲಿ” ಗಂಗಮ್ಮ ಘರಾನಾ” ವನ್ನೇ ನಿರ್ಮಿಸಿದ ಹಿರಿಮೆ ಅವರದು. ಈ ಮೊದಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದರು. ಅವರು ಬೆಳಗಾವಿಯ ಸಮ್ಮೇಳನದಲ್ಲಿ ಪಾಲ್ಗೊಂಡು ಕಾವ್ಯ ವಾಚನ ವ್ಯಾಖ್ಯಾನ ಮಾಡಲಿರುವುದು ಕಾವ್ಯ-ಕಲಾರಸಿಕರಿಗೆ ರಸದೌತಣ ನೀಡಲಿದೆ.
ಭಾರತಿ ಭಟ್ಟ:
ಕಳೆದ 32 ವರ್ಷಗಳಿಂದಲೂ ಬೆಳಗಾವಿಯಲ್ಲಿ ಗಮಕ ಮತ್ತು ಕರ್ನಾಟಕಿ ಸಂಗೀತದ ಶಿಕ್ಷಣ ನೀಡುತ್ತ ಬಂದಿರುವ ಶ್ರೀಮತಿ ಭಾರತಿ ಮಹಾದೇವ ಭಟ್ಟ ಅವರು ಈ ಕಲಾಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಮೂಲತಃ ತೀರ್ಥಹಳ್ಳಿಯವರಾದ ಅವರು ಎಂ. ಎ. ಪದವೀಧರರು. ಗಮಕ ಶಿಕ್ಷಣದಲ್ಲಿ ರ್ಯಾಂಕ್ ಪಡೆದವರು. ವೀಣಾವಾದಕರು. ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮೂರು ದಶಕಗಳ ಹಿಂದೆ ಅವರು ಬೆಳಗಾವಿಯಲ್ಲಿ ಕುಮಾರ ವಾಲ್ಮೀಕಿ ಗಮಕ ಪಾಠಶಾಲೆ ಆರಂಭಿಸಿದರು. ನಮತರ ಅವರ ಶ್ರೀ ವಾಗ್ದೇವಿ ಸಂಗೀತ – ಗಮಕ ಕಲಾ ಶಾಲೆ/ ಸಂಘದ ಆಶ್ರಯದಲ್ಲಿ ಬೆಳಗಾವಿಯ ನೂರಾರು ಮಕ್ಕಳು, ಹಿರಿಯರು ಗಮಕ ಕಲೆಯ ಅಭ್ಯಾಸ ಮಾಡುತ್ತಬಂದಿದ್ದಾರೆ. ಏಳು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಅವರ ಸಂಸ್ಥೆ ಮೂರು ದಿವಸಗಳ ಗಮಕ ಕಲಾ ಸಮ್ಮೇಳನವನ್ನು ಏರ್ಪಡಿಸಿದ್ದನ್ನಿಲ್ಲಿ ಸ್ಮರಿಸಬಹುದು. ಈಗ ಅವರು ಗಮಕ ಕಲಾ ಪರಿಷತ್ತಿನ ಬೆಳಗಾವಿ ಜಿಲ್ಲಾ ಪ್ರತಿನಿಧಿಗಳು. ಈ 13 ನೇ ಸಮ್ಮೇಳನದ ರೂವಾರಿ.
ಜಿನದತ್ತ ದೇಸಾಯಿ:
ಪ್ರಸ್ತುತ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರೂ ಹಿರಿಯ ಕವಿಗಳೂ ಆದ ಶ್ರೀ ಜಿನದತ್ತ ದೇಸಾಯಿಯವರು ಈ ಸಮ್ಮೇಳನಕ್ಕೆ ಮಾರ್ಗದರ್ಶಕರಾಗಿ ತನುಮನಧನಗಳಿಂದ ಸಹಕರಿಸುತ್ತಿದ್ದಾರೆ. 91 ವರ್ಷಗಳ ಇಳಿ ವಯಸ್ಸಿನ , ಕಾವ್ಯ ಸಂಗೀತ ಪ್ರಿಯರಾದ ಜಿನದತ್ತರು ಈ ಸಮ್ಮೇಳನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಎಲ್. ಎಸ್. ಶಾಸ್ತ್ರಿ:
ಸಮ್ಮೇಳನದ ಸ್ವಾಗತ ಸಮಿತಿಯ ಸಂಯೋಜಕರಾದ 80 ವರ್ಷ ವಯಸ್ಸಿನ ಶ್ರೀ ಎಲ್. ಎಸ್. ಶಾಸ್ತ್ರಿಯವರು ಹಿರಿಯ ಸಾಹಿತಿ ಪತ್ರಕರ್ತರು ಮಾತ್ರವಲ್ಲ, ಸ್ವತಃ ಗಮಕಿಗಳೂ ಹೌದು. 109 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ತಾವು ಸ್ಥಾಪಿಸಿದ ಹಲವು ಸಾಹಿತ್ಯ , ಪತ್ರಿಕೆ ಮತ್ತು ಕಲಾಸಂಘಗಳ ಮೂಲಕ ಕಳೆದ 40 ವರ್ಷಗಳಿಂದ ಸಾವಿರಾರು ಕಾರ್ಯಕ್ರಮ ನಡೆಸುತ್ತ ಯುವ ಪತ್ರಕರ್ತರಿಗೆ ಸಾಹಿತಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತ ಬಂದವರು. ಧಾರವಾಡ ಬಾನುಲಿ ಮತ್ತು ಸಾರ್ವಜನಿಕವಾಗಿ 50 ಕ್ಕೂ ಹೆಚ್ಚು ಹಳೆಗನ್ನಡ ಕಾವ್ಯಗಳ ಗಮಕ ಕಾರ್ಯಕ್ರಮವಲ್ಲದೆ ಕನ್ನಡ ಗೀತರಾಮಾಯಣ, ಸಂಸ್ಕೃತ ಗೀತಗೋವಿಂದ, ಬೇಂದ್ರೆಯವರ ಮೇಘದೂತ, ಸಖೀಗೀತ, ಸುಗಮ ಸಂಗೀತ ಇತ್ಯಾದಿ 300 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಪ್ರಸ್ತುತ ಸಮ್ಮೇಳನಕ್ಕೆ ಸಂಯೋಜಕರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಪತ್ರಿಕಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಸಹಿತ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ್ರಪ್ರಥಮ ಗಮಕ ಕಲಾ ಸಮ್ಮೇಳನ ಇನ್ನೂ ಹಲವರ ಸಹಾಯ ಸಹಕಾರಗಳಿಂದ ಎರಡು ದಿವಸಗಳ ಕಾಲ ಅಭೂತಪೂರ್ವವಾಗಿ ನಡೆಯಲು ಸಜ್ಜಾಗಿದೆ. ಅನಗೋಳ ಭಾಗದಲ್ಲಿರುವ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯ ಸಭಾಗೃಹದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಬಂದು ಕಾವ್ಯಾಸಕ್ತರು ಮತ್ತು ಕಲಾಸಕ್ತರು ಗಮಕ ಕಲಾ ರಸಧಾರೆಯನ್ನು ಸವಿದು ಅನುಭವಿಸಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ