Kannada NewsKarnataka News

ಅರಭಾವಿ ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್ ವಿತರಣೆ

  ಪ್ರಗತಿವಾಹಿನಿ ಸುದ್ದಿ, ಗೋಕಾಕ : ಅರಭಾವಿ ಮತಕ್ಷೇತ್ರದಲ್ಲಿ ಸಾರ್ವಜನಿಕರಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ 2.50 ಲಕ್ಷ ಮಾಸ್ಕ್ ವಿತರಿಸಲಾಗುತ್ತಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು,  ಸಹಕಾರಿ ಕ್ಷೇತ್ರದ ಮುಂಚೂಣಿಯಲ್ಲಿರುವ ಕೆಎಂಎಫ್ ಅಧ್ಯಕ್ಷ ಸ್ಥಾನದಂತಹ ಮಹತ್ತರ ಜವಾಬ್ದಾರಿ ನನ್ನ ಮೇಲಿರುವುದರಿಂದ  ಸ್ಥಾನಿಕವಾಗಿ ಇರಲು ಸಾಧ್ಯವಾಗಿಲ್ಲವೆಂದು ಹೇಳಿದ್ದಾರೆ.

ಕೊರೋನಾ ತಡೆಗಟ್ಟಲು ಟೀಮ್ ಎನ್‌ಎಸ್‌ಎಫ್ ರಚಿಸಲಾಗಿದೆ. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ.

ಜನತೆಯ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ಮನೆಯಿಂದ ಯಾರೂ ಹೊರ ಬರದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶವನ್ನು ಪಾಲಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ನಮ್ಮ ಸಿಬ್ಬಂದಿ ಈ ದಿಸೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೊರೋನಾ ವೈರಸ್ ಸಂಬಂಧ ಅಧಿಕಾರಿಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇನೆ.  ಎಪ್ರೀಲ್ ೧೪ ರವರೆಗೆ ನಮ್ಮ ತಂಡ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ರೈತರು, ಗ್ರಾಹಕರು ಮತ್ತು ಕಾರ್ಮಿಕರ ಜೀವನಾಡಿಯಾಗಿರುವ ಕೆಎಂಎಫ್ ಸಂಸ್ಥೆಯ ಅಭ್ಯುದಯದ ಜೊತೆಗೆ ಅರಭಾವಿ ಕ್ಷೇತ್ರದ  ಋಣ ನನ್ನ ಮೇಲಿದೆ. ಕೋರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ನಿರ್ಲಕ್ಷ್ಯ ವಹಿಸಿದರೆ ದೊಡ್ಡ ಗಂಡಾತರವನ್ನು ನಾವೆಲ್ಲ ಎದುರಿಸಬೇಕಾಗುತ್ತದೆ. ಸಾರ್ವಜನಿಕರಲ್ಲಿ ಕೋರೋನಾ ಸೊಂಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಲಾಕ್‌ಡೌನ್ ಎಲ್ಲರೂ ಪಾಲಿಸಲೇಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ೧೪ ಜಿಲ್ಲಾ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಕಾರ್ಮಿಕರ ವರ್ಗವಿದೆ. ಜೊತೆಗೆ ನಮ್ಮ ಸಂಸ್ಥೆಯನ್ನು ನಂಬಿ ೧೩ ಲಕ್ಷ ಕುಟುಂಬಗಳು ಬದುಕುತ್ತಿವೆ. ಈ ಕುಟುಂಬಗಳಿಗೆ ಆಸರೆಯಾಗಿ ಕೆಲಸ ಮಾಡಲಾಗುತ್ತಿದೆ. ಕೋರೋನಾ ಎದುರಿಸಲು ಬೆಂಗಳೂರಿನಲ್ಲಿದ್ದುಕೊಂಡು ಸತತ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಅಧಿಕಾರಿಗಳ ಮೂಲಕ ರೈತರು ಗ್ರಾಹಕರ ಆಗುಹೋಗುಗಳನ್ನು ಗಮನಿಸಲಾಗುತ್ತಿದೆ. ಕಾರ್ಮಿಕರ ಸಮಸ್ಯೆಗಳ ಮಧ್ಯೆಯೂ ರಾಮನಗರದಲ್ಲಿ ಮಾರ್ಚ ೩೦ ರಂದು ೧೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಹಾಲಿನ ಪುಡಿ ಘಟಕವನ್ನು ಲೋಕಾರ್ಪಣೆಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button