Belagavi NewsKarnataka News

*ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ನದಿಗಳಿಂದ ಆಲಮಟ್ಟಿ ಜಲಾಶಯಕ್ಕೆ 1.80 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಆಲಮಟ್ಟಿಯಿಂದ ಇಂದಿನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಬೆಳಗಾವಿಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಲ ಸಂಪನ್ಮೂಲ ಹಾಗೂ ಕಂದಾಯ ಇಬ್ಬರು ಅಧಿಕಾರಿಗಳು ಕೋಯ್ನಾ ಜಲಾಶಯದಲ್ಲಿ ಇರುತ್ತಾರೆ. ಜತ್ರಾಟ್ ಬ್ಯಾರೇಜ್ ನಲ್ಲಿಯೂ ರಾಜ್ಯದ ಒಬ್ಬ ಅಧಿಕಾರಿ ಇರುತ್ತಾರೆ. ಕೊಲ್ಹಾಪುರದ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಯ ಮೇಲೆ ನಿಗಾ ವಹಿಸಲಾಗಿದೆ. ರಾಜಾಪುರದಿಂದ 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿಯಿಂದ 1.5 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಘಟಪ್ರಭಾ ಜಲಾಶಯದಲ್ಲಿ ಪ್ರತಿದಿನ ಮೂರು ಟಿಎಂಸಿ ನೀರು ಸಂಗ್ರಹ ಆಗುತ್ತಿದೆ. ಇಂದು ಸಂಜೆಯಿಂದ ಘಟಪ್ರಭಾ ನದಿಯಿಂದ ನೀರು ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.

ಲೋಳಸೂರು ಬ್ರಿಡ್ಜ್ ಬಳಿ 35 ಸಾವಿರ ಕ್ಯೂಸೆಕ್ ನೀರು ಹರಿದು ಹೋಗಲಿದೆ. ಆಲಮಟ್ಟಿಯಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಇಂದು ಸಭೆ ಮಾಡಿದ್ದೇವೆ.ಕೃಷ್ಣ ನದಿ ವ್ಯಾಪ್ತಿಯಲ್ಲಿ ಯಾವುದೇ ತೊಂದರೆ ಇಲ್ಲ. ಒಂದೆರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಹಶಿಲ್ದಾರಗಳಿಗೆ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ. ಕಾಗವಾಡ ತಾಲೂಕಿನ ಎರಡು ಗ್ರಾಮಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ಘಟಪ್ರಭಾ ನದಿ ವ್ಯಾಪ್ತಿಯ ಹುಕ್ಕೇರಿ, ಗೋಕಾಕ್, ಮೂಡಲಗಿ ತಾಲೂಕು ಬರುತ್ತದೆ‌. ಸಂಕೇಶ್ವರದಲ್ಲಿ ಸಹ ನೀರು ಬರುವ ಬಗ್ಗೆ ಎಚ್ಚರ ವಹಿಸಲಾಗಿದೆ. ಬಳ್ಳಾರಿ ನಾಲಾದಿಂದ ಕುಂದರಗಿ, ಪಾಶ್ಚಾಪುರ ಗ್ರಾಮದ ತೋಟಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ರೈತರಿಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಗೋಕಾಕ್ ನಗರದಲ್ಲಿ ಯಾವುದೇ ತೊಂದರೆ ಇಲ್ಲ. ಅಂಕಲಗಿ ಗ್ರಾಮದ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. ಕುಂದರಗಿ ಅಡವಿ ಸಿದ್ದೇಶ್ವರ ಮಠದಲ್ಲಿ ಇರೋ ಎಲ್ಲರನ್ನೂ ಶಿಫ್ಟ್ ಮಾಡಲಾಗಿದೆ. ಅಂಕಲಗಿಯ ಮಠಕ್ಕೆ ಶಿಫ್ಟ್ ಮಾಡಲಾಗಿದೆ. ಮೂಡಲಗಿಯ ಹಲವು ಗ್ರಾಮಗಳಿಗೆ ಎಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಖಾನಾಪುರ ತಾಲೂಕಿನಲ್ಲಿ ಸತತವಾಗಿ ಮಳೆ ಆಗುತ್ತಿದೆ. ಮಾಚೋಳಿ, ಸಾಥೋಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಾಲಿನ ಪುಡಿ ಸೇರಿ ಸಾಮಗ್ರಿ ಒದಗಿಸಲಾಗಿದೆ‌. ಹಾಲಾತ್ರಿ ಹಳ್ಳ ಪ್ರವಾಹದಿಂದ ಮಂತುರ್ಗಾ ಸೇತುವೆ ಮುಳಗುಡೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಎಸ್ ಡಿ ಆರ್ ಎಫ್ ತಂಡ ಇಂದಿನಿಂದ ಖಾನಾಪುರದಲ್ಲಿ ಇರಲಿದೆ. ಹಾಗಾಗಿ, ಜಿಲ್ಲೆಯಲ್ಲಿ ಸದ್ಯಕ್ಕೆ ತೊಂದರೆ ಇಲ್ಲ. ಸಿಎಂ, ಸಚಿವರು, ಅಧಿಕಾರಿಗಳು ಸ್ವತಃ ಬೆಳಗಾವಿ ಜಿಲ್ಲೆಯ ಮಾಹಿತಿಯನ್ನು ಕೇಳುತ್ತಿದ್ದಾರೆ.

ಖಾನಾಪುರ ತಾಲ್ಲೂಕಿನ ಅಮಗಾಂವ್ ನಲ್ಲಿ ಮಹಿಳೆಗೆ ತೀವ್ರ ಅನಾರೋಗ್ಯ ಹಿನ್ನೆಲೆ ಕಟ್ಟಿಗೆ ಸ್ಟ್ರೇಚರ್ ಮೇಲೆ ಹೊತ್ತೊಯ್ದ ವಿಚಾರಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿಗಳು, ಅರಣ್ಯ ಪ್ರದೇಶದಲ್ಲಿನ ಜನರಿಗೆ ಔಷಧಿ ನೀಡಲು ಸೂಚನೆ ನೀಡಲಾಗಿದೆ. ಮಳೆ ಕಡಿಮೆಯಾದ ಮೇಲೆ ಕಾಡಂಚಿನ ಜನರಿಗೆ ಪುನರ್ವಸತಿ ಒದಗಿಸಲು ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹದ ಹಿನ್ನೆಲೆಯಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಗುರುತಿಸಲಾಗಿರುವ 427 ಕಾಳಜಿ ಕೇಂದ್ರಗಳಿಗೆ ಎಲ್ಲ ತಹಶೀಲ್ದಾರರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಬೇಕು. ತುರ್ತು ಸಂದರ್ಭದಲ್ಲಿ ಗ್ರಾಮಸ್ಥರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.

ಜಿಲ್ಲೆಯಲ್ಲಿ‌ 25 ಸೇತುವೆಗಳ ಮುಳುಗಡೆ: ಎಸ್‌ಪಿ

ಬೆಳಗಾವಿ ಜಿಲ್ಲೆಯಲ್ಲಿ‌ 83 ಸೇತುವೆಗಳ ಪೈಕಿ 25 ಸೇತುವೆಗಳು ಮುಳುಗಡೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.

ಲೋಂಡಾ-ಸಾತ್ನಳ್ಳಿ ಮತ್ತು ಮಂಚೊಳ್ಳಿ ಎರಡು ಸೇತುವೆಗಳನ್ನು ಬಿಟ್ಟು‌ ಇನ್ನುಳಿದ 23 ಸೇತುವೆಯಲ್ಲಿ ಸಂಚರಿಸಲು‌ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಿದ್ದೇವೆ. ಮಳೆ ಕಡಿಮೆಯಾದರೆ ಯಥಾ ಪ್ರಕಾರ ಮತ್ತೆ ಈ ಸೇತುವೆಗಳ ಮೇಲೆ ಓಡಾಡಲು ಸಾಧ್ಯವಾಗುತ್ತದೆ. ಇನ್ನು ತಹಶೀಲ್ದಾರ ಮತ್ತು ಪೊಲೀಸರು ಅನೇಕ ಗ್ರಾಮಗಳಿಗೆ ತೆರಳಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. 

ಅಥಣಿ, ಚಿಕ್ಕೋಡಿ, ಕಾಗವಾಡ, ಸದಲಗಾ, ನಿಪ್ಪಾಣಿಯಲ್ಲಿ ಸೇತುವೆ ಮುಳಗಡೆಯಾಗಿರುವ ಪ್ರದೇಶಗಳಿಗೆ ನಿನ್ನೆ ಭೇಟಿ ನೀಡಿದ್ದೇವೆ. ನದಿತೀರದ ಅನೇಕ ಗ್ರಾಮಗಳಿಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಲಾಗಿದ್ದು, ಎನ್.ಡಿ.ಆರ್.ಎಫ್., ಅಗ್ನಿಶಾಮಕ‌ದಳ‌ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇನ್ನು ಹುನ್ನರಗಿ ಗ್ರಾಮದ ಬಳಿ ಮೊಸಳೆ ಕಾಣಿಸಿಕೊಂಡಿದೆ. ಹಾಗಾಗಿ, ಕೃಷ್ಣಾ ನದಿ ಹಿನ್ನೀರು, ವೇದಗಂಗಾ, ದೂಧಗಂಗಾ ನದಿಗಳಲ್ಲಿ ಯಾರೂ ನೀರಿಗೆ ಇಳಿಯಬಾರದು. ನೀರಿನ ಪ್ರಮಾಣ ಕಡಿಮೆ ಇದ್ದರೂ ಸೆಳೆತ ಹೆಚ್ಚಿದೆ. ಹಾಗಾಗಿ, ಎಲ್ಲರೂ ಎಚ್ಚರಿಕೆ ವಹಿಸುವಂತೆ ಡಾ. ಭೀಮಾಶಂಕರ ಗುಳೇದ ಕೇಳಿಕೊಂಡರು.

ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳ ಜೊತೆಗೆ ಮಾತಾಡಿ ಎಲ್ಲಾ ಹಂಪ್ಸ್ ಮತ್ತು ಪಾಟೂಲ್ ಗಳನ್ನು ಫಿಲ್ ಮಾಡುವಂತೆ ತಿಳಿಸಿದ್ದೇವೆ. ಇನ್ನು ತವನಿಧಿ ಘಾಟ್ ನಲ್ಲಿ ನಡೆಯುತ್ತಿದ್ದ ಬ್ಲಾಸ್ಟಿಂಗ್ ಪ್ರಕ್ರಿಯೆ ತಕ್ಷಣವೇ ಸ್ಥಗಿತಗೊಳಿಸಿದ್ದೇವೆ. ಗುಡ್ಡ ಕುಸಿತ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಡಾ. ಭೀಮಾಶಂಕರ ಗುಳೇದ, ಅದೇ ರೀತಿ ಎಲ್ಲಾ ನದಿ ತೀರ ಪ್ರದೇಶಗಳಲ್ಲಿ ನಮ್ಮ ಪೊಲೀಸರು ಲೈಫ್ ಜಾಕೇಟ್ ಸೇರಿ ಮತ್ತಿತರ ಸುರಕ್ಷತಾ ಸಾಮಗ್ರಿಗಳೊಂದಿಗೆ ಕರ್ತವ್ಯದಲ್ಲಿದ್ದಾರೆ. ಚಿಕ್ಕೋಡಿ, ಅಥಣಿ ಭಾಗದಲ್ಲಿ ನಮ್ಮ ಪೊಲೀಸರಿಗೆ ಎನ್ ಡಿಆರ್ ಎಫ್ ತಂಡದಿಂದ ಅಗತ್ಯ ತರಬೇತಿ ಸಹ ನೀಡಲಾಗುತ್ತದೆ ಎಂದು ವಿವರಿಸಿದರು‌.

ದತ್ತವಾಡ-ಮಲ್ಲಿಕವಾಡ ಸೇತುವೆ ಮುಳುಗಡೆ ಆಗಿದ್ದರಿಂದ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಸದ್ಯ ನೇರ ಸಂಪರ್ಕ ಇರೋದು ರಾಷ್ಟ್ರೀಯ ಹೆದ್ದಾರಿ. ಇದನ್ನು ಬಿಟ್ಟರೆ ವಿಜಯಪುರ ಜಿಲ್ಲೆ ಮಾರ್ಗವಾಗಿ ಹೋಗಬೇಕಾಗಿದೆ ಎಂದು ಡಾ. ಭೀಮಾಶಂಕರ ಗುಳೇದ ತಿಳಿಸಿದರು‌.

ಜಿಪಂ ಸಿಇಓ ರಾಹುಲ್ ಶಿಂಧೆ ಮಾತನಾಡಿ, ಪ್ರವಾಹದಿಂದ ಬಾಧಿತಗೊಳ್ಳುವ ಗ್ರಾಮಗಳಲ್ಲಿ ಗರ್ಭಿಣಿ‌ ಮಹಿಳೆಯರು ಹಾಗೂ ಹಿರಿಯ ನಾಗರಿಕರ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಅಂಗನವಾಡಿ, ಶಾಲೆಗಳಲ್ಲಿ ಆಹಾರ ಪದಾರ್ಥಗಳ ದಾಸ್ತಾನು ಇರುವುದನ್ನು‌ ಖಚಿತಪಡಿಸಿಕೊಳ್ಳಬೇಕು. ಅದೇ ರೀತಿ ಮಳೆ ನೋಡಿಕೊಂಡು ಅಂಗನವಾಡಿ, ಶಾಲೆಗಳಿಗೆ ರಜೆ ನೀಡಲಾಗಿದೆ. ಅಲ್ಲದೇ ಕೆಲವೆಡೆ ಸೋರುವ ಅಂಗನವಾಡಿ ಕೇಂದ್ರಗಳನ್ನು ಸ್ಥಳೀಯವಾಗಿ ರಜೆ ನೀಡಲು ಸೂಚಿಸಲಾಗಿದೆ. ಅದೇ ರೀತಿ ಜಾನುವಾರುಗಳ ತುರ್ತು ಚಿಕಿತ್ಸೆಗೆ 30 ಆಂಬುಲೇನ್ಸ್ ಗಳು ಲಭ್ಯಯಿವೆ. ಅದೇ ರೀತಿ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಕೇಳಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button