ಪ್ರಗತಿವಾಹಿನಿ ಸುದ್ದಿ, ಅಥಣಿ – ವ್ಯಕ್ತಿಯೋರ್ವರ ಗಂಟಲು ದ್ರವ ಪರೀಕ್ಷೆ ಮಾಡಿದ ಆರೋಗ್ಯ ಇಲಾಖೆ ಅವರೊಂದಿಗೆ ವಿಚಿತ್ರ ರೀತಿಯಲ್ಲಿ ನಡೆದುಕೊಂಡು ಗಂದಲಕ್ಕೆ ನೂಕಿದ ವಿದ್ಯಮಾನ ಅಥಣಿಯಲ್ಲಿ ನಡೆದಿದೆ.
ಜುಲೈ 15ರಂದು ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಿದ್ದ ಇಲಾಖೆ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆಗೆ ದಾಖಲಿಸಿತ್ತು. ನಾಲ್ಕೇ ದಿನದಲ್ಲಿ 19ರಂದು ಮತ್ತೊಮ್ಮೆ ಟೆಸ್ಟ್ ಮಾಡಿ ನೆಗೆಟಿವ್ ಬಂದಿದೆ, ಮನೆಗೆ ಹೋಗಿ ಎಂದು ಕಳಿಸಿತ್ತು.
ಮನೆಗೆ ಹೋಗಿ ಎಲ್ಲರೊಂದಿಗೆ ಬೆರೆತಿದ್ದ ವ್ಯಕ್ತಿಗೆ 25ರಂದು ಶಾಕ್ ಕಾದಿತ್ತು. ಆರೋಗ್ಯ ಇಲಾಖೆಯಿಂದ ಮತ್ತೆ ಕರೆ ಮಾಡಿ, 15ರಂದು ಪಡೆದಿದ್ದ ನಿಮ್ಮ ಗಂಟಲು ದ್ರವದ ವರದಿ ಬಂದಿದೆ. ಅದು ಪಾಸಿಟಿವ್ ಬಂದಿದೆ. ಅಂಬುಲೆನ್ಸ್ ಕಳಿಸುತ್ತೇವೆ. ಆಸ್ಪತ್ರೆಗೆ ಬನ್ನಿ ಎಂದು ತಿಳಿಸಲಾಯಿತು.
ಇದರಿಂದ ಕಂಗೆಟ್ಟ ವ್ಯಕ್ತಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯೇ, ತನ್ನ ಸುಪರ್ಧಿಯಲ್ಲಿರುವ ಸರಕಾರ ಲ್ಯಾಬ್ ನಲ್ಲಿಯೇ ಟೆಸ್ಟ್ ಮಾಡಿದೆ. ವಾರದಲ್ಲಿ ಈ ರೀತಿ ಎರಡೆರಡು ಫಲಿತಾಂಶ ನೀಡಿದೆ. ಈ ಮಧ್ಯೆ ನಾನು ಎಷ್ಟೋ ಜನರೊಂದಿಗೆ ಬೆರೆತಿದ್ದೇನೆ. ಇದೆಂತಹ ವ್ಯವಸ್ಥೆ ಎಂದು ಕಿಡಿಕಾರಿದ್ದಾರೆ.
ಅವರು ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ