Kannada NewsKarnataka NewsLatest

ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡೆ ಕಾಲುವೆಗೆ 2 ಟಿಎಮ್‌ಸಿ ನೀರು

 ಪ್ರಗತಿವಾಹಿನಿ ಸುದ್ದಿ, ಗೋಕಾಕ: ಸಾರ್ವಜನಿಕರಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದ ಮೂಲಕ ಘಟಪ್ರಭಾ ಬಲದಂಡೆ ಕಾಲುವೆಗೆ ಗುರುವಾರ ಸಂಜೆಯಿಂದ ಮುಂದಿನ ೧೦ ದಿನಗಳ ವರೆಗೆ ನೀರನ್ನು ಹರಿಸಲಾಗುತ್ತಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.
ಇಂದು ಸಂಜೆ ಆರು ಗಂಟೆಯಿಂದ ಘಟಪ್ರಭಾ ಬಲದಂಡೆ ಕಾಲುವೆಗೆ ೨ ಟಿಎಂಸಿ ಮತ್ತು ಸಿಬಿಸಿ ಕಾಲುವೆಗೆ ೫೫೦೦ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಏ. ೧೬ ರಿಂದ ೨೬ ರ ವರೆಗೆ ಒಟ್ಟು ೧೦ ದಿನಗಳವರೆಗೆ ಪ್ರತಿ ದಿನ ೨ ಸಾವಿರ ಕ್ಯೂಸೆಕ್ಸ್‌ನಂತೆ ಎರಡು ಟಿಎಂಸಿ ನೀರು ಮತ್ತು ದಿನಾಲೂ ೫೫೦ ಕ್ಯೂಸೆಕ್ಸ್ ನಂತೆ ೧೦ ದಿನಗಳ ವರೆಗೆ ಚಿಕ್ಕೋಡಿ ಬ್ರ್ಯಾಂಚ್ ಕಿನಾಲಗೆ ನೀರನ್ನು ಹರಿಸಲು ಜಲ ಸಂಪನ್ಮೂಲಗಳ ಸಚಿವ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈ ಕ್ರಮಕೈಗೊಳ್ಳಲಾಗಿದ್ದು, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೀರನ್ನು ಹರಿಸಲಾಗುತ್ತಿದೆ. ಈ ನೀರನ್ನು ಘಟಪ್ರಭಾ ಬಲದಂಡೆ ಕಾಲುವೆಯ ವ್ಯಾಪ್ತಿಯ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಚಟುವಟಿಕೆಗಳ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ವಿನಂತಿಸಿಕೊಂಡಿರುವ ಅವರು, ರೈತಾಪಿ ವರ್ಗಕ್ಕೆ ಮತ್ತು ದನ-ಕರುಗಳಿಗೆ ಅನುಕೂಲ ಮಾಡಿಕೊಟ್ಟು ಕಾಲುವೆಗಳಿಗೆ ನೀರು ಹರಿಸಿರುವ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಬಾಲಚಂದ್ರ ಜಾರಕಿಹೊಳಿ ಅವರು  ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button