
– ರವಿ ಕರಣಂ
ನೀರು ಅಮೂಲ್ಯ. ಅದರ ಸದ್ಬಳಕೆಯು ಕೂಡಾ ಅಷ್ಟೇ ಮಹತ್ವದ್ದು. ಇಂದು ನಾವು ನೀವು ಸೇರಿ ಹನಿ ಹನಿ ಉಳಿಸಬೇಕಾದ ಅವಶ್ಯಕತೆಯಿದೆ. ಕಾರಣ ಇರುವ ಸಿಹಿ ನೀರಿನ ಪ್ರಮಾಣ ಅತೀ ಎಂದರೆ ಅತೀ ಕಡಿಮೆ. ಅದು ಖಾಲಿಯಾದಂತೆಲ್ಲ ಸಮಸ್ಯೆಗಳ ಮಹಾಪೂರ ಉಂಟಾಗಿ ಬಿಡುತ್ತದೆ. ನಮಗಷ್ಟೇ ಅಲ್ಲದೇ ಮುಂದಿನ ಪೀಳಿಗೆಗೆ ಉಳಿಸಿ ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಎಷ್ಟೋ ಜನ ಮಕ್ಕಳು, ಮೊಮ್ಮಕ್ಕಳು, ಮೂರು ನಾಲ್ಕು ತಲೆಮಾರುಗಳಿಗೆ ಸಾಕಾಗುವಷ್ಟು ಚಿನ್ನ, ಬೆಳ್ಳಿ, ಮನೆ, ಜಮೀನು,ಮನೆ ಜಾಗೆಗಳು, ಹಣವೆಲ್ಲವನ್ನು ಸಂಗ್ರಹಿಸಲು ಅದೆಷ್ಟು ಉತ್ಸುಕತೆ ಇದೆಯೆಂದರೆ, ಒಬ್ಬರನ್ನು ತುಳಿದಾದರೂ ಸರಿಯೇ, ಮೋಸದಿಂದ, ವಂಚಿಸಿಯಾದರೂ ಸರಿಯೇ, ಪರರಿಂದ ಕಿತ್ತುಕೊಂಡು ಗಂಟು ಮಾಡುವ ದುರ್ಬುದ್ದಿಗೇನೂ ಕಡಿಮೆ ಇಲ್ಲ. ಅಂತಹದ್ದರಲ್ಲಿ ಜೀವಕ್ಕೆ ಬೇಕಾದ ಅತೀ ಅವಶ್ಯಕ ಅಂಶಗಳ ಕಡೆಗೆ ಕಿಂಚಿತ್ತೂ ಯೋಚಿಸದಿರುವುದು ಚಿಂತೆಗೀಡು ಮಾಡಿದೆ.
ದೇಹಕ್ಕೆ ಬೇಕಾದವುಗಳು ಗಾಳಿ,ನೀರು, ಆಹಾರ,ಬೆಳಕು. ಇವುಗಳಿರದೇ ಆರೋಗ್ಯ ಸುಸ್ಥಿರವಾಗಿರಲು ಅಸಾಧ್ಯ. ನಾವು ಇವುಗಳ ಬಗೆಗೆ ವಿಚಾರ ಮಾಡುವುದಾಗಲೀ, ಇತರರಿಗೆ ತಿಳುವಳಿಕೆ ಹೇಳುವುದಾಗಲೀ ಇಲ್ಲವೇ ಇಲ್ಲ. ಹೇಳಲು ಹೋದರೆ ಕೇಳುವವರು ಯಾರು?ಆಡಂಬರದ ನಡುವೆ ಜೀವನಕ್ಕೆ ಬೇಕಾದವುಗಳ ಬಗ್ಗೆ ಯಾವತ್ತೂ ಯೋಚಿಸುವುದಿಲ್ಲ. ಅವುಗಳ ಕೊರತೆ ಎದುರಾದಾಗ ಮಾತ್ರ, ಅವುಗಳೆಡೆಗೆ ಗಮನ ಹರಿಸುತ್ತೇವೆ. ಪಶ್ಚಾತ್ತಾಪ ಪಡುತ್ತೇವೆ. ಅಂದರೆ “ಕೆಟ್ಟ ಮೇಲೆ ಬುದ್ದಿ ಬಂತು” ಎಂಬ ನಾಣ್ನುಡಿಯಂತೆ ! ಇಲ್ಲವೇ “ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಮುಚ್ಚಿದಂತೆ” ಎಂಬೀ ಮಾತುಗಳು ಅಕ್ಷರಶಃ ಈ ವಿಷಯಕ್ಕೆ ಅನ್ವಯವಾಗುತ್ತದೆ.
ಯಾವುದೇ ವಿಷಯವಾಗಿರಲಿ. ಪ್ರಸ್ತುತ ಸಂದರ್ಭದಲ್ಲಿ ಅದು ಗೌಣ. ಅದಕ್ಕೆ ಮಹತ್ವ ಬರುವುದು ಕಾಲ ಮುಗಿದ ನಂತರವೇ. ಆಗ ತಿದ್ದಿಕೊಳ್ಳಲು ಅವಕಾಶವೇ ಇರುವುದಿಲ್ಲ. ಹಾಗಾಗದಿರಬಾರದೆಂದೇ ಇಂದು ಕಟ್ಟು ನಿಟ್ಟಾಗಿ ಸ್ವಯಂ ನಿಯಮಗಳನ್ನು ಪಾಲಿಸಬೇಕು. ಇದು ನಮ್ಮ ಹೊಣೆಗಾರಿಕೆ. ಐಷಾರಾಮಿ ವಸ್ತುಗಳನ್ನು, ಸುಖ ಭೋಗದ ವಸ್ತುಗಳನ್ನು ಮುಂದಿನ ಪೀಳಿಗೆಗೆ ಬಳುವಳಿ ಕೊಟ್ಟು, ಕುಡಿಯಲು ನೀರಿಲ್ಲ, ಉಸಿರಾಡಲು ಶುದ್ಧ ಗಾಳಿಯಿಲ್ಲವೆಂದರೆ, ಏನಿದ್ದು ಏನು ಪ್ರಯೋಜನ ಹೇಳಿ. ನಾವು ಕೊಡ ಮಾಡಬಹುದಾದ ದೊಡ್ಡ ಸಂಪತ್ತು ಎಂದರೆ ಪರಿಶುದ್ಧ ಪ್ರಕೃತಿಯನ್ನು ಹಾಗೇ ಉಳಿಸಿ ಹೋಗುವುದು.
ನಾವೆಲ್ಲ ನೀರನ್ನು ಯಥೇಚ್ಛವಾಗಿ, ಮನಸೋ ಇಚ್ಛೆ ಬಳಸುತ್ತೇವೆ. ನಮಗೆಷ್ಟು ಅವಶ್ಯವಿದೆ ಎಂಬುದರ ಅರಿವಿಲ್ಲ. ಅದಕ್ಕೊಂದು ಪ್ರಮಾಣವಿಲ್ಲ. ಕೆಲವೊಮ್ಮೆ ಕೈ ಕಾಲು ತೊಳೆಯಲು ಒಂದರಿಂದ ಒಂದೂವರೆ ಬಕೆಟ್ ಬಳಸುತ್ತೇವೆ. ಅರ್ಥಾತ್ 12 ರಿಂದ 15 ಲೀಟರ್ ! ಯಾವುದಕ್ಕೆ ? ಕೇವಲ ಕೈ ಕಾಲುಗಳು, ಕಂಕುಳ ಭಾಗ, ಮುಖ ತೊಳೆಯಲು ಇಷ್ಟು ಪ್ರಮಾಣದ ನೀರೇ ! ನಿಮಗೆ ಉತ್ಪ್ರೇಕ್ಷೆ ಎನಿಸಬಹುದು. ಆದರಿದು ಅಕ್ಷರಶಃ ಸತ್ಯ. ಒಮ್ಮೆ ನಮ್ಮನ್ನು ನಾವೇ ಗಮನಿಸೋಣ. ನಾವು ಒಂದು ದಿನಕ್ಕೆ ಚೆಲ್ಲುವ ನೀರು, ಕನಿಷ್ಟ ಮೂರು ದಿನಗಳಿಗೆ ಸಾಕಾಗುವಷ್ಟಿರುತ್ತದೆ ಎಂದರೆ ನಂಬಲಿಕ್ಕಿಲ್ಲ. ಅದು ದಿಟವೇ.
ನಮಗೆ ನೀರಿನ ಸೌಕರ್ಯವಿರುವುದರಿಂದ ನಮ್ಮ ಲಕ್ಷ್ಯಕ್ಕೆ ಬರದೇ ಹೋಗಬಹುದು. ಅದೇ ಉತ್ತರ ಕರ್ಣಾಟಕದ ಹಲವು ಭಾಗಗಳಲ್ಲಿ ನೀರಿನ ಕೊರತೆ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ.ಕೃಷ್ಣ,ಘಟಪ್ರಭಾ, ಮಲಪ್ರಭಾ,ಭೀಮೆ, ನದಿಗಳಿದ್ದೂ ಸಹ ಅದು ಪೂರ್ಣ ಜನ ವಸತಿಗೆ ತಲುಪುವುದಿಲ್ಲ. ಕೆಲವು ಪ್ರದೇಶಗಳು, ಜಲಾಶಯಗಳ ಮಟ್ಟಕ್ಕಿಂತಲೂ ಭೂಮಿ ಎತ್ತರವಿರುವ ಕಾರಣ ನೀರು ತಲುಪುವುದೇ ಇಲ್ಲ. ಬೀದರ್, ಗುಲಬರ್ಗಾ, ಯಾದಗಿರಿ, ಬಿಜಾಪುರ, ರಾಯಚೂರು, ಬಳ್ಳಾರಿ, ವಿಜಯನಗರ,ಗದಗ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳ ಹಳ್ಳಿಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ವರದಿಗಳನ್ನು ಮಾಧ್ಯಮಗಳೆಲ್ಲ ಬಿತ್ತರ ಮಾಡುವುದನ್ನು ನೋಡಿದ್ದೇವೆ. ಇದು ಕರ್ಣಾಟಕದ ಒಂದು ಭಾಗದ ಕಥೆ ಅಷ್ಟೇ. ರಾಜಸ್ಥಾನ, ಬಿಹಾರ, ಛತ್ತೀಸ್‍ಘಡ್, ಜಾರ್ಖಂಡ್, ಒರಿಸ್ಸಾ, ತೆಲಂಗಾಣ, ಪಂಜಾಬ್ ದ ಕಥೆಗಳು ಭಿನ್ನವೇನಲ್ಲ. ನೂರಾರು ನದಿಗಳೆಲ್ಲ ಹರಿದರೂ, ಅಗಾಧ ಜನಸಂಖ್ಯೆಗೆ ತಲುಪುತ್ತದೆ ಎಂಬುದು ಮಾತ್ರ ಸುಳ್ಳು. ಕಣ್ಣಾರೆ ಕಂಡ ಚಿತ್ರಣಗಳು ಸಾಕಷ್ಟು. ರಾಜಸ್ಥಾನದ ಕೆಲವು ಭಾಗಗಳಲ್ಲಿ ಜನ ವಸತಿ ತುಂಬಾ ವಿರಳ. ಕಾರಣ ಮರಳುಗಾಡು. ನದಿಯಿಲ್ಲ. ಬೋರ್ ವೆಲ್ ಗಳಿಲ್ಲ. ಹೇಗೆ ಜೀವನ ನಡೆಸಬಹುದು?
ಅತೀ ಶ್ರೀಮಂತಿಕೆಯ ಹುಚ್ಚಲ್ಲಿ ಶುದ್ದ ನೀರಿನಲ್ಲಿ ಮೈ ತೊಳೆಯುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ನೀವೆಲ್ಲ ಕಥೆ ಕೇಳಿರುತ್ತೀರಿ. ಸಾದಾ ನೀರಲ್ಲಿ ತೊಳೆದರೂ ಅಷ್ಟೇ, ಶುದ್ಧ, ಸೋಸಿದ ನೀರಲ್ಲಿ ತೊಳೆದರೂ ಅಷ್ಟೇ. ಹೋಗುವ ಕೊಳೆ ಹೋಗುತ್ತದೆ. ಅದಕ್ಕಾಗಿ ಪಕುಡಿಯುವ ನೀರನ್ನು ಜನರಿಗೆ ತಲುಪಿಸಲಾಗದ ಸ್ಥಿತಿಯಲ್ಲಿ ಇಂತಹ ನಡೆವಳಿಕೆಗಳು ಬೇಕೇ?
ಸೌದಿಯಂತಹ ರಾಷ್ಟ್ರಗಳಲ್ಲಿ ಜನರು ನೀರಿಗಾಗಿ ಹಪಹಪಿಸುವುದನ್ನು ಕಂಡರಂತೂ ಭಯವಾಗುತ್ತದೆ. ಆದರೂ ಅಲ್ಲಿ ನೀರಿನ ಸರಬರಾಜಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನಮ್ಮ ದೇಶದ 135 ಕೋಟಿಗೂ ಹೆಚ್ಚು ಜನಸಂಖ್ಯೆಗೆ, ಸರ್ಕಾರಗಳು ಸಾಕಷ್ಟು ಶ್ರಮ ವಹಿಸಿ, ನೀರನ್ನು ಒದಗಿಸುತ್ತಿವೆ. ಆದರೂ ಜನ ತೆಗಳುವುದನ್ನು ನಿಲ್ಲಿಸುವುದಿಲ್ಲ. ಟ್ಯಾಂಕ್ ಗಳು ತುಂಬಿ ಹರಿಯುವುದನ್ನು ನೋಡಿಯೂ ಹಳಿಯುತ್ತೇವೆಯೇ ಹೊರತು ಪರಿಹಾರ ಕಂಡುಕೊಳ್ಳುವುದಿಲ್ಲ. ಇದೇ ನಮ್ಮ ಅಲಕ್ಷ್ಯತನ. ತಪ್ಪು ನಮ್ಮದೇ ಇದೆ. ಹಿತ ಮಿತವಾಗಿ ಬಳಸದ ನಾವು, ನೀರಿನ ಅಭಾವಕ್ಕೆ ಇನ್ನೊಬ್ಬರನ್ನು ಹೊಣೆಗಾರರನ್ನಾಗಿಸುವುದು ಅತೀ ಸುಲಭದ ದಾರಿ ಮಾಡಿಕೊಂಡಿದ್ದೇವೆ.
ಸರಕಾರದಿಂದಲೂ ಕಟ್ಟು ನಿಟ್ಟಿನ ಕ್ರಮಗಳಿಲ್ಲ. ಇದಕ್ಕೆಲ್ಲ ತಜ್ಞರ ಜೊತೆ ಕುಳಿತು, ಅಗತ್ಯ ಬಳಕೆಯ ಪ್ರಮಾಣವನ್ನು ನಿಗದಿಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳು ಘನಘೋರ ಎಂಬುದನ್ನು ಮರೆಯಬಾರದು. ಯಾವತ್ತೂ ಮನಪೂರ್ವಕವಾಗಿ ನಿಸರ್ಗದ ಅಮೂಲ್ಯ ವಸ್ತುಗಳನ್ನು ಕಾಪಾಡಿಕೊಳ್ಳುವುದನ್ನು ನಾವು ಎಲ್ಲಿಯವರೆಗೆ ಕಲಿಯುವುದಿಲ್ಲವೋ ಅಲ್ಲಿಯವರೆಗೆ, ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ ಎಂದರ್ಥ. ಸುಶಿಕ್ಷಿತ ಅಥವಾ ಅನಕ್ಷರಸ್ಥರಾಗಲಿ ಮುಂದಿನ ಜನಾಂಗದ ಬಗ್ಗೆ ಯೋಚಿಸಬೇಕು. ಇದೇ ದೊಡ್ಡ ಬಳುವಳಿಯಾದೀತು. ಅಲ್ಲವೇ ?
ಕೆರಳಿದ ಪಂಚಮಸಾಲಿ ಸಮಾಜ: ರಾತ್ರೋರಾತ್ರಿ ಮುಖಂಡರ ರಹಸ್ಯ ಸಭೆ: ಏನಾಗಲಿದೆ ಗುರುವಾರ?
https://pragati.taskdun.com/angry-panchmasali-comunity-secret-meeting-of-leaders-overnight-what-will-happen-on-thursday/
10 ಸಾವಿರ ಕ್ವಾರಿ, ಕ್ರಷರ್ ಮಾಲೀಕರು, ಸಿಬ್ಬಂದಿ, ಕೂಲಿಕಾರ್ಮಿರಿಂದ ಬೆಳಗಾವಿ ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ
https://pragati.taskdun.com/massive-protest-in-front-of-belagavi-suvarnasoudha-by-10-thousand-quarry-crusher-owners-staff-and-laborers/
ಬೆಳಗಾವಿ ಅಧಿವೇಶನ ಗುರುವಾರ ಮಧ್ಯಾಹ್ನವೇ ಮುಕ್ತಾಯ; ಸಂಜೆ ಸಚಿವ ಸಂಪುಟ ಸಭೆ
https://pragati.taskdun.com/massive-protest-in-front-of-belagavi-suvarnasoudha-by-10-thousand-quarry-crusher-owners-staff-and-laborers/