CrimeKannada NewsKarnataka NewsLatest

*ಎರಡು ವರ್ಷದ ಕಂದಮ್ಮ ಅನುಮಾನಾಸ್ಪದವಾಗಿ ಸಾವು*

ಪ್ರಗತಿವಾಹಿನಿ ಸುದ್ದಿ: ಎರಡು ವರ್ಷದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಣಸವಾಡಿಯ ಇಂದಿರಾ ಸ್ಟ್ರೀಟ್‌ನಲ್ಲಿ ನಡೆದಿದೆ.

ಮಗು ಸಾವಿಗೆ ಲಿವ್ ಇನ್‌ ಸಂಬಂಧದಲ್ಲಿದ್ದ ತಂದೆ, ತಾಯಿ ಮೇಲೆ ಶಂಕೆ ವ್ಯಕ್ತವಾಗಿದೆ. ಲಿವ್ ಇನ್‌ನಲ್ಲಿದ್ದ ಜೇಸನ್ ಆಂಥೋನಿ ಮತ್ತು ರೋಸ್ಲಿನ್‌ಯ ಮಗಳು 2 ವರ್ಷದ ಕಾರ್ಲೆಟ್ ಡೈಸಿ ಮೃತ ಮಗು. ಎರಡು ದಿನಗಳ ಹಿಂದೆ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗು ಸಾವನ್ನಪ್ಪಿರೋದಾಗಿ ಪೋಷಕರು ತಿಳಿಸಿದ್ದಾರೆ.

ಈ ಸಂಬಂಧ ಮಗುವಿನ ತಾಯಿಯ ಸ್ನೇಹಿತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವಿಗೆ ತಾಯಿ ಹೊಡೆಯುತ್ತಿದ್ದರು, ಅದನ್ನು ನಾನು ನೋಡಿದ್ದೆ. ಮಗುವಿನ ಮೈಮೇಲೆ ಕೆಲವೆಡೆ ಗಾಯದ ಗುರುತುಗಳು ಪತ್ತೆಯಾಗಿದೆ. ಹೀಗಾಗಿ ಮಗು ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಗುವಿನ ತಂದೆ ಜೇಸನ್ ಆಂಥೋನಿ ಹೇಳುವ ಪ್ರಕಾರ, ಮಗುವಿಗೆ ಹುಟ್ಟಿದಾಗಿನಿಂದ ಉಸಿರಾಟದ ಸಮಸ್ಯೆ ಇತ್ತು. ನನಗೂ ಉಸಿರಾಟದ ಸಮಸ್ಯೆ ಇದ್ದು, ಅದು ಮಗುವಿಗೆ ಕ್ಯಾರಿ ಆಗಿದೆ. ಊಟ ಮಾಡಿಸುವಾಗ ಉಸಿರಾಟದ ಪೈಪ್ ಒಳಗೆ ಫುಡ್ ಹೋಗಿ ಮಗುವಿಗೆ ಸಮಸ್ಯೆ ಆಗಿ ಸತ್ತಿದೆ. ಆಗ ನಾನು ಮನೆಯಲ್ಲಿ ಇರಲಿಲ್ಲ ಎಂದಿದ್ದಾನೆ. ಇನ್ನು ಮಗುವಿನ ಕೈ ಹಾಗೂ ಮೈ ಮೇಲಿರುವ ಗಾಯ ತಾಯಿ ಹೊಡೆದಿದ್ದು ಎಂದು ಹೇಳಿದ್ದಾರೆ.

ಇನ್ನು ಮಗುವಿನ ಸಾವಿನ ಬಗ್ಗೆ ತಾಯಿ ರೋಸ್ಲಿನ್ ಹೇಳುವ ಪ್ರಕಾರ ದೂರುದಾರೆ ಸಮೃದ್ಧಿ ನನ್ನ ಜೊತೆ ಜಗಳ ಆಡಿದ್ದರು. ಮಗುವಿಗೆ ಮೆಡಿಸನ್ ನೀಡಿದಾಗ ಮಗು ಗಾಬರಿಯಾಯ್ತು.‌ ಮಗುವಿಗೆ ಪ್ಯಾನಿಕ್ ಅಟ್ಯಾಕ್ ಆಯ್ತು. ಮೊದಲಿಂದಲೇ ಉಸಿರಾಟ ಸಮಸ್ಯೆ ಇದ್ದಿದ್ದರಿಂದ ಈ ರೀತಿಯಾಯ್ತು ಎಂದು ದೂರಿದ್ದಾರೆ. ಮಗುವಿನ ತಂದೆ-ತಾಯಿ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ಕಂದಮ್ಮನ ಸಾವಿನ ಬಗ್ಗೆ ಅನುಮಾನ ಮೂಡಿಸಿದೆ.

ಸದ್ಯ ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಳಿಕ ಸತ್ಯಾಸತ್ಯತೆ ಹೊರಬರಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button