
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶಾದ್ಯಂತ 4.0 ಲಾಕ್ ಡೌನ್ ನಡೆಯುತ್ತಿದೆ. ಮೇ 31ರವರೆಗೂ ಇದು ಮುಂದುವರಿಯಲಿದ್ದು, ಅಂದಿನ ಪರಿಸ್ಥಿತಿ ನೋಡಿ ಲಾಕ್ ಡೌನ್ ಮುಂದುವರಿಯಲಿದೆಯೋ ಅಥವಾ ಮುಕ್ತಾಯವಾಗಲಿದೆಯೋ ತಿಳಿಯಲಿದೆ.
ಲಾಕ್ ಡೌನ್ 3.0 ಮುಗಿಯುತ್ತಿದ್ದಂತೆ ಎಲ್ಲೆಡೆ ಜನ ರಸ್ತೆಗಿಳಿಯುತ್ತಿದ್ದಾರೆ. ನಗರಗಳಲ್ಲಿ ಸಂಚಾರ ದಟ್ಟಣೆ ಆರಂಭವಾಗಿದೆ. 4.0 ಲಾಕ್ ಡೌನ್ ಇದೆ ಎನ್ನುವ ಸಣ್ಣ ಕುರುಹೂ ಸಿಗದಂತಿದೆ ಬಹುತೇಕ ಪ್ರದೇಶಗಳ ಪರಿಸ್ಥಿತಿ. ಇದು ಕೊರೋನಾ ಹರಡಲು ಮುಕ್ತ ಅವಕಾಶವಾಗಲಿದೆಯೇನೋ ಎನ್ನುವ ಅನುಮಾನ ಹುಟ್ಟಿಸುತ್ತಿದೆ.
ಸಧ್ಯ ದೇಶದಲ್ಲಿ ಶ್ರಮಿಕ್ ರೈಲುಗಳು ಮಾತ್ರ ಓಡಾಡುತ್ತಿವೆ. ಮೇ 1ರಿಂದ ಇಲ್ಲಿ ತನಕ 1595 ಶ್ರಮಿಕ ವಿಶೇಷ ರೈಲುಗಳು ಸಂಚರಿಸಿದ್ದು, 21 ಲಕ್ಷ ವಲಸಿಗರನ್ನು ಅವರವರ ಊರಿಗೆ ತಲುಪಿಸಿದೆ. ಉತ್ತರಪ್ರದೇಶದಲ್ಲಿ 837 ರೈಲು ಹಾಗೂ ಬಿಹಾರದಲ್ಲಿ 428 ರೈಲು ಮತ್ತು ಮಧ್ಯಪ್ರದೇಶದಲ್ಲಿ 100 ವಿಶೇಷ ರೈಲು ಸಂಚರಿಸಿದೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್, ಜೂನ್ 1ರಂದು ದೇಶಾದ್ಯೆತ 200 ರೈಲುಗಳು ಸಂಚರಿಸಲಿವೆ ಎಂದಿದ್ದಾರೆ. 4.0 ಲಾಕ್ ಡೌನ್ ಮುಕ್ತಾಯವಾಗುತ್ತಿದ್ದಂತೆ ರೈಲುಗಳು ಶಬ್ಧಮಾಡುತ್ತ ಓಡಲಿವೆ. ಆದರೆ ಕೇವಲ ನಾನ್ ಎಸಿ ರೈಲುಗಳನ್ನು ಮಾತ್ರ ಓಡಿಸಲಾಗುವುದು. 2ನೇ ದರ್ಜೆಯ ಪ್ರಯಾಣಕ್ಕೆ ಮಾತ್ರ ಅವಕಾಶವಿರಲಿದೆ. ರೈಲ್ವೆ ಆನ್ ಲೈನ್ ಬುಕ್ಕಿಂಗ್ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರೈಲ್ವೆ ಪ್ರಯಾಣ ಕೊರೋನಾ ಸೋಂಕು ಹರಡುವುದಕ್ಕೆ ಅವಕಾಶ ಮಾಡಿಕೊಡದಿರಲಿ ಎನ್ನುವುದೇ ಪ್ರಗತಿವಾಹಿನಿ ಆಶಯ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ