Latest

22 ಜನರಿಂದ ದೇಹದಾನ, ಇಬ್ಬರಿಂದ ಅಂಗಾಂಗ ದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವದ ನಿಮಿತ್ಯ 22 ಜನ ದೇಹದಾನ 2 ಜನ ಅಂಗಾಂಗ ದಾನವನ್ನು ಮಾಡಿದರು. 
ಹುಕ್ಕೇರಿ ಹಿರೇಮಠದ ಶಾಖೆ ಲಕ್ಷ್ಮಿ ಟೇಕಡಿ ಯಲ್ಲಿರುವ ಶ್ರೀಮಠದಲ್ಲಿ ಮಾಸಿಕ ಸುವಿಚಾರ ಚಿಂತನ ಹಾಗೂ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಯುಗಮಾನೋತ್ಸವದ ಸವಿ ನೆನಪಿನಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.
 ಈ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಇರುವಾಗಲೂ ನಾವು ಜನರಿಗೆ ಉಪಯೋಗವಾಗಬೇಕು, ಸತ್ತ ಮೇಲೂ ಕೂಡ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು. ಜಗದ್ಗುರು ರೇಣುಕಾದಿ ಪಂಚಾಚಾರ್ಯರನ್ನು ನಾನು  ಸೇವೆ ಮಾಡುವವರಲ್ಲಿ ಕಾಣುತ್ತೇನೆ. ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯರು, ಉಜ್ಜಯಿನಿ ಪೀಠದ ಜಗದ್ಗುರು ಮರುಳಾರಾಧ್ಯರು, ಕೇದಾರ ಪೀಠದ ಜಗದ್ಗುರು ಏಕೋರಾಮಾರಾಧ್ಯ, ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯರು, ಕಾಶಿ ಪೀಠದ ಜಗದ್ಗುರು ವಿಶ್ವಾರಾಧ್ಯರು ಅವರ ಹೆಸರಿನಿಂದ ನಡೆಯುವ ಈ ಪಂಚಾಚಾರ್ಯರ ಯುಗಮಾನೋತ್ಸವದ ಸಂದರ್ಭವನ್ನು ನಾನು ಬಹಳ ಸಂತೋಷದಿಂದ ಈ ದೇಹ ದಾನ ಮಾಡಿದವರ ಮತ್ತು ಅಂಗಾಂಗ ದಾನ ಮಾಡಿದವರಲ್ಲಿ ಕಾಣುತ್ತಿದ್ದೇನೆ. ಸಮಾಜಮುಖಿ ಕಾರ್ಯವನ್ನೂ ಮಠ ಮಾನ್ಯಗಳು ಮಾಡುತ್ತ ಬರಬೇಕು ಆ ದೃಷ್ಟಿಕೋನದಿಂದ ಹುಕ್ಕೇರಿ ಹಿರೇಮಠ ನಿರಂತರವಾಗಿ ಇಂತಹ ಕಾರ್ಯಕ್ರಮವನ್ನು ಮಾಡುತ್ತ ಬಂದಿದೆ. ಅದರಲ್ಲಿಯೂ ಇಡೀ ಭಾರತದಲ್ಲಿ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಂದರ್ಭದಲ್ಲಿ ಎಲ್ಲಿಯೂ ಕೂಡ ದೇಹದಾನ ಮಾಡಿದ್ದು ಕಂಡು ಬರುವುದಿಲ್ಲ. ಬಹುಶಃ ಇದು ದಾಖಲೆ ಎಂದು  ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಬಾಗೋಜಿಕೊಪ್ಪದ ಶ್ರೀ ಡಾ. ಶಿವಲಿಂಗ ಮುರುಗರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಹುಕ್ಕೇರಿ ಹಿರೇಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಾವು ನೋಡುತ್ತಾ ಇರುತ್ತೇವೆ. ಇವತ್ತು ಜಯಂತಿ ಉತ್ಸವಗಳು ಕೇವಲ ಪೂಜೆ ಪಾರಾಯಣದಿಂದ ಅಲ್ಲ, ಇಂತಹ ಸಮಾಜಮುಖಿ ಕಾರ್ಯಗಳಿಂದ ಆಗುತ್ತವೆ ಅನ್ನೋದಕ್ಕೆ ಶ್ರೀಮಠ ನಿದರ್ಶನ ಎಂದು ಈ  ಹೇಳಿದರು.
 ತನ್ನ ತಂದೆಯ ಮೃತದೇಹವನ್ನು ವೈದ್ಯ ವಿದ್ಯಾರ್ಥಿಗಳಿಗೆ ಛೇಧ ಮಾಡುವ ಮುಖಾಂತರ ವಿಶ್ವದಾಖಲೆಯನ್ನು ಮಾಡಿರುವ ಡಾ. ಮಹಾಂತೇಶ ರಾಮಣ್ಣವರ ಉಪನ್ಯಾಸ ನೀಡುತ್ತ, ನಾವೆಲ್ಲರೂ ಕೂಡ ದೇಹ ದಾನವನ್ನು ಮಾಡುವುದಷ್ಟೇ ಅಲ್ಲ, ಇರುವಾಗ ರಕ್ತದಾನವನ್ನು ಕೂಡ ಮಾಡುವ ಅವಶ್ಯಕತೆ ಇದೆ. ಮಠ ಮಾನ್ಯಗಳು ಕೂಡ ಇಂತಹ ಕಾರ್ಯ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.
 ಈ ಸಂದರ್ಭದಲ್ಲಿ ಅರವಿಂದ್ ಜೋಶಿ ಅವರು ಪ್ರಸಾದ ಸೇವೆಯನ್ನು ಸಲ್ಲಿಸಿದರು. ಅರವಿಂದ ಜೋಷಿ, ವಿವೇಕ್ ಜೋಶಿ,  ಕಾರ್ತಿಕ ಜೋಶಿ, ಮಹಾಂತೇಶ್ ಜ್ಯೊಷಿ, ಮಂಜುಳಾ ಉದೋಸಿ, ನಿಖಿತಾ ಉದೋಸಿ, ವಿಜಯಾ ನೀರಲಗಿ ಮಠ, ವಿರುಪಾಕ್ಷಯ್ಯ ನೀರಲಗಿ ಮಠ, ಮಲ್ಲಿಕಾರ್ಜುನ ರೊಟ್ಟಿ, ಸುಧಾ ರೊಟ್ಟಿ, ಗದಿಗೆಪ್ಪ ಕೋಟೆವಾಲಿ, ಮೋಹನ್ ಕೋಟೆವಾಲಿ, ಅರವಿಂದ ಪಾಟೀಲ್, ಯೋಗೇಶ್ ತಳವಾರ್, ಜಯಶ್ರೀ ತಳವಾರ್, ಪ್ರಕಾಶ್ ಸರ್ನಾಯಕ್, ಶೈಲಾದೇವಿ ಸರ ನಾಯಕ್, ಅಲಿಕಾ ಕೋಟೆವಾಲಿ, ಸಿದ್ದಲಿಂಗಸ್ವಾಮಿ ಕುಲಕರ್ಣಿ,  ಸುರೇಖಾ ಕುಲಕರ್ಣಿ, ಶಿವಾನಂದ ಜಿರಲಿ ದೇಹ ದಾನ  ಮಾಡಿದವರು. ಕೃಷ್ಣ ಹಂದಿಗುಂದ, ರುಕ್ಮಿಣಿ ಹಂದಿಗುಂದ ಅಂಗಾಂಗದಾನ ಮಾಡಿದರು.
 ನೀರಲಗಿ ಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಹುಕ್ಕೇರಿ ಹಿರೇಮಠದ ಈ ಕಾರ್ಯಕ್ರಮದಲ್ಲಿ ಪಂಚಾಚಾರ್ಯ ಯುಗಮಾನೋತ್ಸವವನ್ನು ಇಂತಹ ವಿಶೇಷ ಕಾರ್ಯಕ್ರಮವನ್ನು ಮಾಡುವುದರ ಮುಖಾಂತರ ಸಾಮಾಜಿಕ ಕಾರ್ಯಕ್ರಮ ಮಾಡಿದ್ದು ತುಂಬಾ ಸಂತೋಷವನ್ನು ಉಂಟು ಮಾಡಿದೆ. ಹುಕ್ಕೇರಿ ಸ್ವಾಮಿಜಿಯವರ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ಮುನ್ನಡೆಯಲಿ ಎಂದು  ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಸಂದೇಶ ನೀಡಿ  ಶುಭಹಾರೈಸಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button