
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯ ‘ಬಳ್ಳಾರಿ ಚಲೋ’ ಪಾದಯಾತ್ರೆ ವೇಳೆ ನಿಯಮ ಮೀರಿ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ 22 ಬಿಜೆಪಿ ನಾಯಕರ ವಿರುದ್ಧ ಎಪ್ಐಆರ್ ದಾಖಲಾಗಿದೆ.
ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ತೆರವುಗೊಳಿಸಿದ್ದನ್ನು ಖಂಡಿಸಿ ಸೆಪ್ಟೆಂಬರ್ 9ರಂದು ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ರಸ್ತೆ ತಡೆದು ಸಾರ್ವಜನಿಕರಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 22 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕಮ್ಮರಚೇಡು ಗ್ರಾಮದಿಂದ ಬಳ್ಳಾರಿ ನಗರದವರೆಗೆ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಪಾದಯಾತ್ರೆಯು ಸೆಪ್ಟೆಂಬರ್ 9 ರಂದು ಬಳ್ಳಾರಿ ನಗರವನ್ನು ತಲುಪಿ ಸಮಾರೋಪ ಗೊಂಡಿತ್ತು. ಪಾದಯಾತ್ರೆಯ ಮಾರ್ಗದುದ್ದಕ್ಕೂ ಪೂರ್ವಾನುಮತಿಯಿಲ್ಲದೆ ಬಿಜೆಪಿ ಬಾವುಟ ಮತ್ತು ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಬಿಐಟಿಎಂ ಕಾಲೇಜುವರೆಗೆ ಮಾತ್ರ ಬಾವುಟ ಅಳವಡಿಕೆಗೆ ಅವಕಾಶ ನೀಡಿದ್ದ ಬಳ್ಳಾರಿ ಜಿಲ್ಲಾಧಿಕಾರಿಗಳು, ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಸದಂತೆ ನಿಷೇಧಾಜ್ಞೆ ಹೊರಡಿಸಿದ್ದರು.
ಬಿಜೆಪಿ ಸಮಾರೋಪ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿಯೇ ನಿಯಮ ಮೀರಿ ಅಳವಡಿಸಲಾಗಿದ್ದ ಬ್ಯಾನರ್ ಮತ್ತು ಬಾವುಟಗಳನ್ನು ಬಳ್ಳಾರಿ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು.




