Kannada NewsLatestPolitics

ಕೆಎಲ್ಇಯಿಂದ ಅಸಾಧ್ಯವಾದುದನ್ನು ಸಾಧಿಸಿ ದೇಶ ಕಟ್ಟುವ ಕಾರ್ಯ -ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕೆಎಲ್‌ಇ ಸಪ್ತರ್ಷಿಗಳ ತ್ಯಾಗದ ಫಲವಾಗಿ ಬೆಳೆದಿರುವ ಸಂಸ್ಥೆ ಇಂದು ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದು ಹೆಮ್ಮೆಯನ್ನುಂಟು ಮಾಡಿದೆ ಎಂದು ಶಾಸಕರು ಹಾಗೂ ಮಾಜಿ ಸಚಿವರಾದ  ಎಸ್. ಸುರೇಶ ಕುಮಾರ ಅವರು ನುಡಿದರು.

ಬೆಂಗಳೂರಿನ ರಾಜಾಜಿನಗರದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಕೆಎಲ್‌ಇ ದಿ ಬ್ಯಾನಿಯನ್ ಶಾಲೆಯನ್ನು  ಇಂದು ಉದ್ಘಾಟಿಸಿ ಮಾತನಾಡಿದರು.
ಸಪ್ತರ್ಷಿಗಳು ಕೆಎಲ್‌ಇ ಸಂಸ್ಥೆಯನ್ನು ಹುಟ್ಟು ಹಾಕಿದರೆ ಡಾ.ಪ್ರಭಾಕರ ಕೋರೆ  ಸಂಸ್ಥೆಯನ್ನು ಹೆಮ್ಮರವನ್ನಾಗಿಸಿದರು. ಇಂದು ಸಂಸ್ಥೆ ಶಿಕ್ಷಣ ಹಾಗೂ ಆರೋಗ್ಯ ಎಲ್ಲ ಕ್ಷೇತ್ರಗಳಲ್ಲಿ ವಿಸ್ತಾರಗೊಂಡಿದೆ. ನವನವೀನವಾದ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವ ಮೂಲಕ ಇಂದಿನ ಬೇಡಿಕೆಗಳಿಗೆ ಸ್ಪಂದಿಸುತ್ತಿರುವುದು ಹೆಮ್ಮೆಯನ್ನುಂಟು ಮಾಡಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ  ಈ ಸಂಸ್ಥೆಗೆ ಭೇಟಿ ನೀಡಿ, ಬೆಳವಣಿಗೆಯನ್ನು ಕಂಡು ಅಭಿನಂದಿಸಿರುವುದು ಇದಕ್ಕೆ ಸಾಕ್ಷಿ. ಇಂತಹ ಸಂಸ್ಥೆಯಲ್ಲಿ ಮಕ್ಕಳು ಕಲಿಯುವುದೇ ಒಂದು ಸೌಭಾಗ್ಯ ಎಂದರು.

ಡಾ.ಕೋರೆಯವರು ಸಂಸ್ಥೆಯ ಮೂಲಕ ಎಲ್ಲವನ್ನು ಸಾಧಿಸಿ ತೋರಿಸಿದ್ದಾರೆ. ಅವರ ಕೊಡುಗೆ ಅಪಾರ ಹಾಗೂ ಅನನ್ಯವೆನಿಸಿದೆ. ದೇಶದ ಬೆಳವಣಿಗೆಯಲ್ಲಿ ತನ್ನದೇ ವಿಶಿಷ್ಟ ಕೊಡುಗೆ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ನೋಬೆಲ್ ಪ್ರಶಸ್ತಿಗೆ ಭಾಜನರಾಗಲೆಂದು ಶುಭಹಾರೈಸಿದರು.

ಅದೇ ತಾನೇ ಪುಟ್ಟ ಹೆಜ್ಜೆಗಳಿಡುವ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ದಿ ಬ್ಯಾನಿಯನ್ ಶಾಲೆಯು ಮೂಲಾಧಾರವಾಗಲಿದೆ. ಈ ನೆಲೆಯಲ್ಲಿ ಡಾ.ಪ್ರಭಾಕರ ಕೋರೆ ಅವರ ತಂಡ ಹಲವಾರು ಸೌಲಭ್ಯಗಳನ್ನು ಈ ಶಾಲೆಯಲ್ಲಿ ಒದಗಿಸಿರುವುದು ನನಗೆ ಸಂತೋಷವೆನಿಸಿದೆ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ  ಗಂಗಾಬಿಕೆ ಮಲ್ಲಿಕಾರ್ಜುನ ಅವರು ಮಾತನಾಡುತ್ತ, ವಿಶೇಷ ಕಾಳಜಿಯಿಂದ ನಿರ್ಮಾಣಗೊಂಡಿರುವ ಈ ಶಾಲೆ ಪುಟ್ಟ ಮಕ್ಕಳ ಭವಿಷ್ಯಕ್ಕೆ ಅತ್ಯುತ್ತಮವಾದ ಮುನ್ನಡೆ ಬರೆಯಲಿದೆ. ಕೆಎಲ್‌ಇ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು, ಬೆಂಗಳೂರಿನಲ್ಲಿ ಮತ್ತೊಂದು ಗರಿಯನ್ನು ಮುಡಿಸಿರುವುದು ಹೆಮ್ಮೆಯನ್ನುಂಟು ಮಾಡಿದೆ ಎಂದು ಹೇಳಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರು ಸೆಂಟ್ರಲ್ ಸಂಸದ  ಪಿ.ಸಿ.ಮೋಹನ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆಯು ಶತಮಾನೋತ್ಸವವನ್ನು ಆಚರಿಸಿಕೊಂಡಿದೆ. ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಕೆಎಲ್‌ಇ ವಿದ್ಯಾರ್ಥಿಗಳ ಶೈಕ್ಷಣಿಕ ಹಸಿವನ್ನು ನೀಗಿಸಿರುವುದು ಅಭಿನಂದನೀಯ. ಭವಿಷ್ಯತ್ತಿನಲ್ಲಿಯೂ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇಡಲಿದೆ ಎಂದು  ಶುಭ ಹಾರೈಸಿದರು.
ಇನ್ನೋರ್ವ ಗೌರವ ಅತಿಥಿ, ಮಾಜಿ ಸಚಿವರು ಹಾಗೂ ಶಾಸಕರಾದ  ವಿ.ಸೋಮಣ್ಣ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆಗೂ ನನಗೂ ೪೦ ವರ್ಷಗಳ ಸಂಬಂಧವಿದೆ. ಡಾ.ಕೋರೆಯವರನ್ನು ಅಷ್ಟೆ ಹತ್ತಿರದಿಂದ ನಾನು ನೋಡುತ್ತ ಬಂದಿದ್ದೇನೆ. ಜಾಗತಿಕ ಮಟ್ಟದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ಕೆಎಲ್‌ಇ ಇಂದು ಮತ್ತಷ್ಟು ವಿಸ್ತರಿಸುತ್ತಿರುವುದು ನನಗೆ ಅಭಿಮಾನ ಹೆಚ್ಚಿಸಿದೆ. ಪುಟ್ಟ ಮಕ್ಕಳಿಂದ ಉನ್ನತ ಶಿಕ್ಷ ಣದ ವರೆಗೆ ಕೆಎಲ್‌ಇ ಆಲೋಚಿಸುತ್ತಿರುವುದು ವಿಶೇಷವೆನ್ನಬೇಕು. ಈ ನಿಟ್ಟಿನಲ್ಲಿ ಕೆಎಲ್‌ಇಯ ಎಲ್ಲ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಹೇಳಿದರು.

ಸ್ವಾಗತಪರ ಮಾತುಗಳನ್ನಾಡಿದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ  ಡಾ.ಪ್ರಭಾಕರ ಕೋರೆ, ೧೯೧೬ರಲ್ಲಿ ಏಳು ಜನ ಶಿಕ್ಷಕರಿಂದ ಪ್ರಾರಂಭಗೊಂಡ ಕೆ.ಎಲ್.ಇ.ಸಂಸ್ಥೆ ಇಂದು ಜಾಗತಿಕವಾಗಿ ಬೆಳೆದುನಿಂತಿದೆ. ೨೬೯ ಅಂಗಸಂಸ್ಥೆಗಳನ್ನು ೧,೨೫,೦೦೦ ವಿದ್ಯಾರ್ಥಿಗಳನ್ನು, ೧೬,೦೦೦ ಸಿಬ್ಬಂದಿ  ಹೊಂದಿರುವ ಬೃಹತ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂಬ ಅಭಿದಾನಕ್ಕೆ ಪಾತ್ರವಾಗಿದೆ. ಕೆ.ಎಲ್.ಇ. ಸಂಸ್ಥೆಯು ೧೦೩ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದೆ ಎಂದರು.

ಸಂಸ್ಥಾಪಕರ ಪುಣ್ಯದ ಫಲವೆನ್ನುವಂತೆ ಸಂಸ್ಥೆ ಇಂದು ಗಮನಾರ್ಹ ಸಾಧನೆ ಮಾಡಿ ಅಭಿಮಾನದಿಂದ ತಲೆ ಎತ್ತಿದೆ, ಗ್ರಾಮೀಣ ಭಾಗದ ಹಾಗೂ ಗಡಿಭಾಗದ ರೈತ ಮಕ್ಕಳ ಕಲ್ಯಾಣಕ್ಕೆ ನಾಂದಿಹಾಡಿದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಕೆ.ಎಲ್.ಇ.ಸಂಸ್ಥೆ ಜಗತ್ತಿನಲ್ಲಿ ನೂರುವರ್ಷಗಳನ್ನು ಪೂರೈಸಿರುವ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಒಂದೆಂಬುವುದು ನಮಗೆ ಹಾಗೂ ದೇಶಕ್ಕೆ ಹೆಮ್ಮೆಯ ಸಂಗತಿ ಎಂದು ಕೋರೆ ಹೇಳಿದರು.

ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಯಿಂದ ಮುಂಚೂಣಿಯಲ್ಲಿರುವುದು ನಮ್ಮ ಕೆ.ಎಲ್.ಇ.ಸಂಸ್ಥೆ ಎಂಬುದು ಅಭಿಮಾನದ, ಗೌರವದ ವಿಚಾರವೆಂಬುದನ್ನು ನಾನು ಎದೆತುಂಬಿ ಹೇಳುತ್ತೇನೆ. ತನ್ನ ಶಿಕ್ಷಣ-ಆರೋಗ್ಯ- ಸಂಶೋಧನೆ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಗಳಿಸಿದೆ. ಅಸಾಧ್ಯವಾದುದನ್ನು ಸಾಧಿಸಿ ದೇಶ ಕಟ್ಟುವ, ಸಮಾಜ ನಿರ್ಮಾಣ ಮಾಡುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ, ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅವರು ಸಂಸ್ಥೆಯ ಬೆಳವಣಿಗೆಯ ಕುರಿತು ಹೇಳುತ್ತ ಕೆಎಲ್‌ಇ ದಾನಿಗಳನ್ನು ಸ್ಮರಿಸಿದರು. ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರೂ, ಕೆಎಲ್ಇ ನಿರ್ದೇಶಕರೂ ಆಗಿರುವ ಮಹಾಂತೇಶ ಕವಟಗಿಮಠ,  ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷರುಗಳು, ಉಪಕಾರ್ಯಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಆಜೀವ ಸದಸ್ಯರು ಹಾಗೂ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.
ದಿ ಬ್ಯಾನಿಯನ್ ಶಾಲೆಯ ಸೆಂಟರ್ ಹೆಡ್‌  ಉಮಾದೇವಿ ವಂದಿಸಿದರು.  ಮಂಜುಳಾ ಅವರು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button