Kannada NewsKarnataka News

ಪ್ರತಿ ಟನ್ ಕಬ್ಬಿಗೆ 2700 ರೂ. : ಬಾಲಚಂದ್ರ ಜಾರಕಿಹೊಳಿ

 ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಲ್ ಪಾವತಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಪ್ರಸಕ್ತ ಹಂಗಾಮಿನಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ೨೭೦೦ ರೂ.ಗಳನ್ನು ನೀಡುವುದಾಗಿ ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಕಟಿಸಿದರು.
ಸೋಮವಾರದಂದು ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು, ಒಂದೇ ಕಂತಿನಲ್ಲಿ ರೈತರಿಗೆ ಬಿಲ್ಲನ್ನು ಪಾವತಿಸಲಾಗುವುದು ಎಂದು ಹೇಳಿದರು.
ಪ್ರಸಕ್ತ ೨೦೨೧-೨೨ನೇ ಸಾಲಿನ ಹಂಗಾಮಿನಲ್ಲಿ ಕಾರ್ಖಾನೆಗೆ ಉತ್ತಮ ಇಳುವರಿಯ ಕಬ್ಬನ್ನು ಪೂರೈಕೆ ಮಾಡುವಂತೆ ರೈತರಲ್ಲಿ ಕೋರಿಕೊಂಡಿರುವ ಅವರು, ರೈತರ ಸಹಕಾರದಿಂದ ನಮ್ಮ ಕಾರ್ಖಾನೆಯು ಪ್ರಗತಿಪಥದತ್ತ ಸಾಗುತ್ತಿದೆ. ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ೪ ಲಕ್ಷ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ೨೦ ದಿನಗಳಿಗೊಮ್ಮೆ ಅವರ ಬ್ಯಾಂಕ್ ಖಾತೆಗಳಿಗೆ ಬಿಲ್ಲನ್ನು ಸಂದಾಯ ಮಾಡಲಾಗುವುದು. ನಮ್ಮ ನೆರೆ ಹೊರೆಯ ಕಾರ್ಖಾನೆಗಳು ನೀಡುವ ದರವನ್ನು ನಾವು ನೀಡುತ್ತೇವೆ ಎಂದು ಈ ಹಿಂದೆಯೇ ರೈತರ ಸಭೆಯಲ್ಲಿ ಹೇಳಲಾಗಿತ್ತು. ಅದರಂತೆಯೇ ಜಿಲ್ಲೆಯ ಬಹುತೇಕ ಕಾರ್ಖಾನೆಗಳು ಈಗಾಗಲೇ ದರವನ್ನು ಘೋಷಿಸಿದ್ದು, ಅದರನ್ವಯ ಈ ಬಾರಿ ಪ್ರತಿ ಟನ್ ಕಬ್ಬಿಗೆ ರೂಪಾಯಿ ೨೭೦೦ ಗಳನ್ನು ಆಡಳಿತ ಮಂಡಳಿಯ ನಿರ್ಣಯದಂತೆ ಘೋಷಿಸಲಾಗಿದೆ. ರೈತರ ಸಹಕಾರವೇ ನಮ್ಮ ಕಾರ್ಖಾನೆಗೆ ಶ್ರೀರಕ್ಷೆಯಾಗಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಖಾನೆಯಲ್ಲಿ ಆಯೋಜಿಸಿದ್ದ ಪೂಜಾ ಸಮಾರಂಭದಲ್ಲಿ ಭಾಗವಹಿಸಿದರು. ನಂತರ ಕಾರ್ಖಾನೆಯ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಅಭಿನಂದನ ಪಾಟೀಲ, ಉತ್ತಮ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಕಾರ್ಖಾನೆಯ ಸಿಇಓ ನಿತೀನ ಪಾಟೀಲ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಮಂಗಳವಾರ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button