ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕೃಷ್ಣಾ ಜಲಾನಯನ ರೈತರಿಗೆ ನ್ಯಾಯ ನೀಡುವ ತೀರ್ಮಾನ ಮಾಡಿ 2800 ಕೋಟಿ ರೂ.ಗಳ ನೀರಾವರಿ ಯೋಜನೆ ಪ್ರಾರಂಭಿಸಲಾಗಿದೆ. ಹಾಗೂ ಬಾಗಲಕೋಟೆ ನವನಗರಕ್ಕೆ 2500 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಬಾಗಲಕೋಟೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಇಲ್ಲಕಲ್ಲನ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ವೀರಮಣಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಹುನಗುಂದ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿನ ವಿವಿಧ ಅಭಿವೃದ್ಧಿ ಕಾಮಕಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಹಾಗೂ ಫಲಾನುಭವಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ದಾಖಲೆ ಪ್ರಮಾಣದಲ್ಲಿ ಅಭಿವೃದ್ಧಿ
ಹುನಗುಂದ ಪ್ರಮುಖ ಕ್ಷೇತ್ರ. ಇಳಕಲ್ ಸೀರೆ ಮಾತ್ರವಲ್ಲದೆ ಇಲ್ಲಿನ ಗ್ರಾನೈಟ್ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೋಗಿದೆ. ಕಳೆದ ಮೂರು ವರ್ಷಗಳಲ್ಲಿ ಔದ್ಯೋಗಿಕ ವಾಗಿ, ಕೃಷಿಗೆ ಪ್ರಸಿದ್ಧವಾಗಿರುವ ಕ್ಷೇತ್ರದ ಸಮಗ್ರ ಅಭಿವೃದ್ಧಿ ದಾಖಲೆ ಪ್ರಮಾಣದಲ್ಲಿ ಆಗಲು ಕಾರಣ ನಮ್ಮ ಸರ್ಕಾರ ಎಂದರು.
ಹುನಗುಂದ ದಲ್ಲಿ 36,598 ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿದೆ . ರಾಜ್ಯದಲ್ಲಿ ಕಿಸಾನ್ ಸಮ್ಮಾನ್ ಅಡಿ 2 ನೇ ಕಂತಿನಲ್ಲಿ 47 ಲಕ್ಷ ರೈತರಿಗೆ 975 ಕೋಟಿ ರೂ.ಗಳ ಆರ್ಥಿಕ ನೆರವನ್ನು ರೈತರ ಖಾತೆಗಳಿಗೆ ಡಿಬಿಟಿ ಮೂಲಕ ತಲುಪಿಸಲಾಗಿದೆ ಎಂದರು.
ಎಲ್ಲಾ ವರ್ಗಗಳ ಜನರಿಗೆ ನ್ಯಾಯ
ಮುಧೋಳದಲ್ಲಿ 800 ಕೆಲಸಗಳು ಜನರನ್ನು ಮುಟ್ಟಿವೆ. ಜನ ಇದನ್ನು ಸ್ಮರಿಸುತ್ತಾರೆ. ಅಭಿವೃದ್ಧಿಯಲ್ಲಿ ಬೇಧ ಮಾಡಿಲ್ಲ. ಎಲ್ಲಾ ವರ್ಗಗಳ ಜನರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತಿದ್ದೇವೆ ಎಂದರು. ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಇದರಿಂದ ಅಲ್ಪಸಂಖ್ಯಾತ ರಿಗೆ ಹೆಚ್ಚಿನ ಲಾಭವಾಗಿದೆ ಎಂದರು.
ಹಾಸ್ಟೆಲ್ ಗಳಲ್ಲಿ ಅವಕಾಶ
30 ಸಾವಿರ ಕೋಟಿ ರೂ.ಗಳನ್ನು ಎಸ್.ಸಿ ಎಸ್.ಪಿ / ಟಿ. ಎಸ್.ಪಿ ಅಡಿ ಮೀಸಲಿಡಲಾಗಿದೆ. 100 ಅಂಬೇಡ್ಕರ್ ಹಾಗೂ 50 ಕನಕದಾಸ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. 5 ಮೆಗಾ ಹಾಸ್ಟೆಲ್ ಗಳನ್ನು ನಿರ್ಮಾಣ. ಮಾಡಲಾಗುತ್ತಿದೆ. 1 ಲಕ್ಷ ವಿದ್ಯಾರ್ಥಿ ಗಳಿಗೆ ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಅವಕಾಶ ಕಲ್ಪಿಸಿ ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಮೀಸಲಾತಿ ಹೆಚ್ಚಿಸಲಾಗಿದೆ ಎಂದರು.
ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಶಾಸಕ ದೊಡ್ದನಗೌಡ ಪಾಟೀಲ, ಹಾಲಪ್ಪ, ಶಾಸಕ ವೀರಣ್ಣ ಚರಂತಿಮಠ, ಸಂಗಣ್ಣ ಕರಡಿ ಆಚಾರ್ ಸಂಸದ ಪಿ.ಸಿ.ಗದ್ದಿಗೌಡರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ