ಪ್ರಗತಿವಾಹಿನಿ ಸುದ್ದಿ, ಗೋಕಾಕ – ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ, ಯರಗಟ್ಟಿ ಗೋಕಾಕ ರಸ್ತೆಯಲ್ಲಿರುವ ಪಂಚನಾಯಕನಹಟ್ಟಿ ಗ್ರಾಮದ ಶ್ರೀ ಲಕ್ಷ್ಮೀದೇವಿಯ ೨೮ ನೇ ಜಾತ್ರಾ ಮಹೋತ್ಸವವು ಇದೇ ಫೆಬ್ರುವರಿ ೬ ರಿಂದ ೮ ರ ವರೆಗೆ ಅದ್ಧೂರಿಯಿಂದ ನೆರವೇರಲಿದೆ.
ಫೆಬ್ರುವರಿ ೬ ರಂದು ಮುಂಜಾನೆ ೬ ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು, ಅಭಿಷೇಕ, ಬುತ್ತಿ ಪೂಜೆ, ನೈವೇಧ್ಯೆ, ಭಜನೆ, ಡೊಳ್ಳು ವಾಧ್ಯ ಕಾರ್ಯಕ್ರಮಗಳು ರಾತ್ರಿ ೧೨ ರ ವರೆಗೆ ನಡೆಯಲಿವೆ. ಶುಕ್ರವಾರ ಫೆಬ್ರುವರಿ ೭ ರ ರಂದು ಮುಂಜಾನೆ ೮ ಗಂಟೆಯಿಂದ ಜೋಡು ಕುದುರೆ ಮತ್ತು ಎತ್ತಿನ ಚಕ್ಕಡಿ ಶರ್ತು ನಡೆಯಲಿವೆ. ಚಕ್ಕಡಿ ಶರ್ತುಗಳಲ್ಲಿ ವಿಜೇತರಾದವರಿಗೆ ೨೮ ಸಾವಿರ, ೨೨ ಸಾವಿರ ಮತ್ತು ೧೬ ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕ ಬಹುಮಾನ ಇಡಲಾಗಿದೆ.
ಜೋಡು ಎತ್ತಿನ ಚಕ್ಕಡಿ ಶರ್ತು ವಿಜೇತರಿಗೆ ೨ ಲಕ್ಷ ರೂ. ನಗದು ಹಾಗೂ ಬೆಳ್ಳಿ ಪದಕದ ಪ್ರಥಮ ಬಹುಮಾನ, ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ನಗದು ಹಾಗೂ ಬೆಳ್ಳಿ ಪದಕದ ದ್ವೀತಿಯ ಬಹುಮಾನ ಹಾಗೂ ಒಂದು ಲಕ್ಷ ರೂಪಾಯಿ ನಗದು ಹಾಗೂ ಬೆಳ್ಳಿ ಪದಕದ ಮೂರನೇ ಬಹುಮಾನ ಇಡಲಾಗಿದೆ. ಕುದರೆ ಚಕ್ಕಡಿ ಶರ್ತಿಗೆ ಪ್ರವೇಶ ಶುಲ್ಕ ೨೮೦೦ ರೂ. ಹಾಗೂ ಎತ್ತಿನ ಚಕ್ಕಡಿ ಶರ್ತಿಗೆ ಇಪ್ಪತ್ತು ಸಾವಿರ ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ.
ನಿವೃತ್ತ ಜಿಲ್ಲಾಧಿಕಾರಿ ಡಿ. ಬಿ. ನಾಯಕ ಅವರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಹರಿಹರದ ಶ್ರೀ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಅಶೋಕ ಬಿ. ನಾಯಕ ಅವರು ವಹಿಸಲಿದ್ದಾರೆ.
ಶುಕ್ರವಾರ ಸಂಜೆ ೪ ಗಂಟೆಗೆ ೧೫ ನೇ ರಥೋತ್ಸವ ಜರುಗಲಿದ್ದು ಅದಕ್ಕೂ ಮೊದಲು ಮಧ್ಯಾಹ್ನ ೧೨ ಗಂಟೆಗೆ ಸಾಮೂಹಿಕ ವಿವಾಹಗಳು ನಡೆಯಲಿವೆ. ರಾತ್ರಿ ೧೦ ಗಂಟೆಗೆ ಚಲನಚಿತ್ರಗಳ ಪ್ರದರ್ಶನ, ಜಾನಪದ ಗೀತೆಗಳು, ಭಕ್ತಿಗೀತೆಗಳ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶನಿವಾರ ಮುಂಜಾನೆ ೮ ಗಂಟೆಗೆ ೩೫ ಸುತ್ತಮುತ್ತಲಿನ ಗ್ರಾಮಗಳ ದೇವರುಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಈ ಜಾತ್ರಾ ಮಹೋತ್ಸವದ ಸ್ಪರ್ಧೆಗಳ ವಿವರಗಳನ್ನು ಲಕ್ಷ್ಮೀದೇವಿ ಜಾತ್ರಾ ಕಮೀಟಿಯಿಂದ ಪಡೆಯಬಹುದಾಗಿಯೆಂದು ಸಂತೋಷ ನಾಯಕ (ಮೊ : ೭೭೬೦೯೩೦೧೧೧) ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ