ಕೆಎಂಎಫ್‌ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮತ್ತೆ 2 ಕೋಟಿ ರೂ.
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಇತ್ತೀಚೆಗೆ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಗೀಡಾದ ಸಂತ್ರಸ್ಥರ ಕುಟುಂಬಗಳಿಗೆ ನೆರವಾಗಲು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು 3 ಕೋಟಿ ರೂ.ಗಳ ಪರಿಹಾರ ಧನವನ್ನು ನೀಡಿದೆ.
ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಶನಿವಾರ ಮಧ್ಯಾಹ್ನ ಕೆಎಂಎಫ್ ಆಡಳಿತ ಮಂಡಳಿ ಸಭೆ ನಂತರ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಮುಖ್ಯಮಂತ್ರಿಗಳ ಗೃಹ ಕಛೇರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ 2 ಕೋಟಿ ರೂ.ಗಳ ಚೆಕ್‌ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸಿದರು.
ಕೆಲವು ದಿನಗಳ ಹಿಂದೆ ಕೆಎಂಎಫ್‌ನಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳನ್ನು ನೀಡಿದ್ದು, ಇಂದಿನ 2 ಕೋಟಿ ಸೇರಿ ಒಟ್ಟು 3 ಕೋಟಿ ರೂ.ಗಳನ್ನು ಕೆಎಂಎಫ್‌ನಿಂದ ನೀಡಿದಂತಾಗಿದೆ
-ಬಾಲಚಂದ್ರ ಜಾರಕಿಹೊಳಿ , ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ
ಕಳೆದೊಂದು ತಿಂಗಳಿನಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದ ಸಂತ್ರಸ್ಥರ ಬದುಕು ಚಿಂತಾಜನಕವಾಗಿದೆ. ಸಂತ್ರಸ್ಥರ ನೆರವಿಗೆ ಬಿಜೆಪಿ ಸರ್ಕಾರ ಸಾಕಷ್ಟು ನೆರವಿನ ಹಸ್ತ ನೀಡಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿ ಹಾನಿಯುಂಟಾಗಿದೆ.
ರೈತರ ಏಳ್ಗೆಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ನಮ್ಮ ಕೆಎಂಎಫ್‌ನಿಂದ ಸಂತ್ರಸ್ಥರಿಗೆ ಹೊಸ ಜೀವನ ಆರಂಭಿಸಲು ಅನುಕೂಲವಾಗುವಂತೆ ಮೂರು ಕೋಟಿ ರೂ.ಗಳ ಪರಿಹಾರ ಧನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕೆಎಂಎಫ್‌ನಿಂದ ಪರಿಹಾರ ಧನದ ಚೆಕ್ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತಸ್ನೇಹಿ ಕೆಎಂಎಫ್‌ನ ಕಾಳಜಿಯನ್ನು ಇದೇ ಸಂದರ್ಭದಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ, ಮಾಜಿ ಶಾಸಕ ಎಂ.ವ್ಹಿ. ನಾಗರಾಜ್, ಕೆಎಂಎಫ್ ಆಡಳಿತ ಮಂಡಳಿ ಸದಸ್ಯರಾದ ಹನಮಂತಗೌಡ ಹಿರೇಗೌಡ್ರ, ಶ್ರೀಶೈಲಗೌಡ ಪಾಟೀಲ, ಕಾಪು ಶೆಟ್ಟಿ, ವೀರಭದ್ರಬಾಬು, ಆರ್. ಶ್ರೀನಿವಾಸ, ಕೆ.ಎಸ್. ಕುಮಾರ, ಎಂ.ನಂಜುಂಡಸ್ವಾಮಿ, ಆನಂದಕುಮಾರ, ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ