ಇಂದು 3 ಪ್ರಮುಖ ರಾಜಕೀಯ ಬೆಳವಣಿಗೆಗಳು

ಇಂದು 3 ಪ್ರಮುಖ ರಾಜಕೀಯ ಬೆಳವಣಿಗೆಗಳು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಕರ್ನಾಟಕ ರಾಜ್ಯ ರಾಜಕಾರಣ ಇಂದು ಮತ್ತೊಂದು ಪ್ರಮುಖ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಕಳೆದ ಸುಮಾರು 25 ದಿನದಿಂದ ನಡೆಯುತ್ತಿದ್ದ ರಾಜಕೀಯ ಚದುರಂಗದಾಟ ಹೊಸ ಘಟ್ಟಕ್ಕೆ ತಲುಪಲಿದೆ.

11 ಗಂಟೆಗೆ ವಿಧಾನಸಭೆ ಸಮಾವೇಶಗೊಳ್ಳಲಿದ್ದು, ಇಂದಿನ ಅಧಿವೇಶನದಲ್ಲಿ ಹಲವು ಪ್ರಮುಖ ಘಟನೆಗಳು ನಡೆಯಲಿವೆ. ಇಂದು ರಾಜ್ಯ ರಾಜಕೀಯದಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ನಡೆಯಲಿವೆ.

ಮೊದಲನೆಯದು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದೆ. ಬಹುತೇಕ 5 ಮತಗಳ ಅಂತರದಿಂದ ವಿಶ್ವಾಸಮತ ಗೆಲ್ಲುವ ಸಾಧ್ಯತೆ ಇದೆ.

ಇದಾದ ನಂತರ ಸದನದಲ್ಲಿ ಯಡಿಯೂರಪ್ಪ ಹಣಕಾಸು ವಿಧೇಯಕ ಮಂಡಿಸಲಿದ್ದಾರೆ. ಹಣಕಾಸು ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಲಿದೆ.

ಎರಡನೆಯದಾಗಿ, ಸ್ಪೀಕರ್ ರಮೇಶ ಕುಮಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಹೊಸ ಸ್ಪೀಕರ್ ಆಯ್ಕೆಗೆ ಅನುವು ಮಾಡಿಕೊಡಬಹುದು. ತಾವು ನಿರ್ಗಮಿಸುವ ಸುಳಿವನ್ನು ಅವರು ನಿನ್ನೆ ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ನೀಡಿದ್ದಾರೆ.

ಒಂದೊಮ್ಮೆ ಅವರಾಗಿಯೇ ರಾಜಿನಾಮೆ ನೀಡದಿದ್ದರೆ ಬಿಜೆಪಿ ಅವರ ವಿರುದ್ಧ ಅವಿಶ್ವಾಸಮತ ಮಂಡಿಸುವ ಸಾಧ್ಯತೆ ಇದೆ. ಹಾಗಾಗಿ ಅದಕ್ಕೆ ಅವಕಾಶ ನೀಡದಂತೆ ತಾವಾಗಿಯೇ ರಾಜಿನಾಮೆ ಸಲ್ಲಿಸುವ ಸಾಧ್ಯತೆ ಹೆಚ್ಚು.

ಮೂರನೆಯದಾಗಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕ ವಿರೋಧ ಪಕ್ಷದ ನಾಯಕನಾಗಲಿದ್ದಾರೆ. ಸಿದ್ದರಾಮಯ್ಯ ಈವರೆಗೂ ಶಾಸಕಾಂಗ ಪಕ್ಷದ ನಾಯಕರಾಗಿದ್ದರು. ಈಗ ಜಿ.ಪರಮೇಶ್ವರ, ಡಿ.ಕೆ.ಶಿವಕುಮಾರ ಸಹ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರತಿನಿಧಿಯಾಗಿ ಗುಲಾಂನಬಿ ಆಝಾದ್ ಆಗಮಿಸಲಿದ್ದಾರೆ.

ನಿರ್ಗಮನ ಮುನ್ನ ಕಳಂಕ ಹೊತ್ತರೇ?

ಸ್ಪೀಕರ್ ರಮೇಶ ಕುಮಾರ ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಸದಸ್ಯರು. ಜನತಾಪರಿವಾರದಿಂದ ಬಂದ ಅವರು ಸ್ಪೀಕರ್ ಆಗುವ ಮುನ್ನ ಕಾಂಗ್ರೆಸ್ ಪಕ್ಷದಲ್ಲಿದ್ದರು. ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಕ್ಷಾತೀತವಾಗಿ ಅವರು ಗೌರವ ಹೊಂದಿದ್ದರು.

ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆ ಸಂದರ್ಭದಲ್ಲಿ ರಮೇಶ ಕುಮಾರ ಅವರ ಹಲವು ನಿರ್ಧಾರಗಳು, ಕಾಂಗ್ರೆಸ್ ಪರ ಮೃಧು ಧೋರಣೆಗಳಿಂದಾಗಿ ಸಾಕಷ್ಟು ಟೀಕೆಗೆ ಒಳಗಾದರು. ಪಕ್ಷಾತೀತವಾಗಿ ವರ್ತಿಸಬೇಕಾದ ಖುರ್ಚಿಯಲ್ಲಿ ಕುಳಿತು ಒಂದು ಪಕ್ಷಕ್ಕೆ ಸಹಾಯ ಮಾಡುವ ರೀತಿಯಲ್ಲಿ ನಡೆದುಕೊಂಡರು ಎಂದು ವಿಪಕ್ಷಗಳಿಂದಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಾಕಷ್ಟು ಟೀಕೆಗೆ ಒಳಗಾದರು.

ಅವೆಲ್ಲಕ್ಕಿಂತ ಹೆಚ್ಚಾಗಿ, ಭಾನುವಾರ ತರಾತುರಿಯಲ್ಲಿ 14 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಸ್ಪೀಕರ್ ಇನ್ನಷ್ಟು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಾಸಕರು ರಾಜಿನಾಮೆ ಸಲ್ಲಿಸುವಾಗ ತರಾತುರಿ ಏಕೆ? ಶನಿವಾರ, ಭಾನುವಾರ ಎಂದೆಲ್ಲ ಮುಂದೂಡಿದ್ದ ರಮೇಶಕುಮಾರ ಇದೀಗ ಭಾನುವಾರ ತರಾತುರಿ ಪತ್ರಿಕಾಗೋಷ್ಠಿ ಕರೆದು ಅನರ್ಹತೆಯನ್ನು ಪ್ರಕಟಿಸುವ ಮೂಲಕ ಹಲವಾರು ಪ್ರಶ್ನೆ, ಅನುಮಾನಗಳು ಮೂಡಲು ಕಾರಣರಾದರು.

ರೋಷನ್ ಬೇಗ್, ಆನಂದ ಸಿಂಗ್, ಶ್ರೀಮಂತ ಪಾಟೀಲ ಅವರು ಗುಂಪಿನೊಂದಿಗೆ ಸೇರದೆಯೂ ಅನರ್ಹಗೊಳ್ಳಬೇಕಾಯಿತು. ಶ್ರೀಮಂತ ಪಾಟೀಲರಂತೆಯೇ ಆಸ್ಪತ್ರೆಗೆ ದಾಖಲಾಗಿ ಸದನಕ್ಕೆ ಗೈರಾದ ನಾಗೇಂದ್ರ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ. ಇವೆಲ್ಲ ಸ್ಪೀಕರ್ ಬಗ್ಗೆ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿದೆ.

ಇಷ್ಟು ವರ್ಷದ ಅವರ ರಾಜಕೀಯ ಜೀವನಕ್ಕೆ ಈಗ ನಿರ್ಗಮಿಸುವ ವೇಳೆ ಕಳಂಕ ಅಂಟಿಕೊಂಡಿತೇ ಎನ್ನುವ ಅನುಮಾನ ಮೂಡುವಂತಾಗಿದೆ. ತಮ್ಮ ಮೇಲೆ ಪಕ್ಷಾತೀತವಾಗಿ ಇದ್ದ ಗೌರವಕ್ಕೆ ಧಕ್ಕೆ ತಂದುಕೊಳ್ಳುವಂತೆಹ ಕೆಲಸವನ್ನು ಅವರೇಕೆ ಮಾಡಿಕೊಂಡರು ಎನ್ನುವ ಪ್ರಶ್ನೆ ಮೂಡಿದೆ.

ಇದರ ಜೊತೆಗೆ ಬಂಡಾಯ ಶಾಸಕರು ಇಂದು ಪತ್ರಿಕಾಗೋಷ್ಠಿ ನಡೆಸಿ ಹಲವಾರು ಸಂಗತಿಗಳನ್ನು ಬಿಚ್ಚಿಡುವ ಸಾಧ್ಯತೆ ಇದೆ.

ಒಟ್ಟಾರೆ, ಇಂದು ರಾಜ್ಯ ರಾಜಕೀಯ ಇನ್ನಷ್ಟು ಕುತೂಹಲಕಾರಿ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button