*ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ ತಕ್ಷಣ 30 ಲಕ್ಷ ಖಾಲಿ ಹುದ್ದೆಗಳ ಭರ್ತಿ: ರಾಹುಲ್ ಗಾಂಧಿ*
ಪ್ರಗತಿವಾಹಿನಿ ಸುದ್ದಿ: ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜುಲೈ 5 ರಂದು ಬಡ ಮಹಿಳೆಯರ ಬ್ಯಾಂಕ್ ಖಾತೆಗೆ 8500 ರೂ ಜಮಾ ಮಾಡುತ್ತೇವೆ ಎಂದಿದ್ದ ರಾಹುಲ್ ಗಾಂಧಿ ಇದೀಗ ದೇಶದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಶಿಮ್ಲಾದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಎರಡು ಕೋಟಿ ಜನರಿಗೆ ಉದ್ಯೋಗ ಒದಗಿಸುವುದಾಗಿ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿದ್ದರು. ಆದರೆ ಇಂಡಿಯಾ ಒಕ್ಕೂಟವು ಅಧಿಕಾರಕ್ಕೆ ಬಂದ ತಕ್ಷಣ 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ ಎಂದರು.
ಅಷ್ಟೇ ಅಲ್ಲ ರೈತರ ಕೃಷಿ ಸಾಲ ಮನ್ನಾ ಮತ್ತು ಯೋಧರನ್ನು ನೌಕರರಂತೆ ಮಾಡಿರುವ ಅಗ್ನಿಪಥ್ ಯೋಜನೆಯನ್ನು ರದ್ದುಗೊಳಿಸುತ್ತೇವೆ. ಕಳೆದ ವರ್ಷ ಬರ ಹಾಗೂ ನೆರೆಯಂತಹ ಭೀಕರ ದುರಂತದಿಂದ ಹಿಮಾಚಲಪ್ರದೇಶದಲ್ಲಿ 22,000 ಕುಟುಂಬಗಳು ಬೀದಿಗೆ ಬಿದ್ದವು. ಇದರಿಂದ ಚೇತರಿಸಿಕೊಳ್ಳಲು ಇಲ್ಲಿನ ಸರ್ಕಾರ 9,000 ಕೋಟಿ ರೂಪಾಯಿ ಬೇಡಿಕೆ ಇಟ್ಟಿತ್ತು ಆದರೆ ಮೋದಿ ಅವರು ಎಷ್ಟು ಕೋಟಿ ಬಿಡುಗಡೆ ಮಾಡಿದರು..? ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿಯವರ ಕೊಡುಗೆ ಸೊನ್ನೆ ಎಂದು ರಾಹುಲ್ ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ