Kannada NewsKarnataka NewsLatest

ಪ್ರತಿ ಟನ್ ಕಬ್ಬಿಗೆ 3050 ರೂ. ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ ೨೪೦೦ ರೂ.ಗಳನ್ನು ಮುಂಗಡ ಹಣವನ್ನಾಗಿ ಪಾವತಿಸಲು ನಿರ್ಧರಿಸಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಹೇಳಿಕೆ ನೀಡಿರುವ ಅವರು, ಪ್ರತಿ ೧೫ ದಿನಗಳಿಗೊಮ್ಮೆ ನಿರಂತರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ನಮ್ಮ ಕಾರ್ಖಾನೆಗೆ ಪ್ರತಿ ಟನ್ ಕಬ್ಬಿಗೆ ೨೮೬೫ ರೂ. ಗಳನ್ನು ನಿಗದಿಪಡಿಸಿದ್ದು, ರೈತರ ಹಿತವನ್ನು ಮನಗಂಡು ಎಫ್‌ಆರ್‌ಪಿಕ್ಕಿಂತಲೂ ಹೆಚ್ಚಿಗೆ ಓಡ್ನಿ-ತೋಡ್ನಿ ಸೇರಿ ಒಟ್ಟಾರೆ ಪ್ರತಿ ಟನ್ ಕಬ್ಬಿಗೆ ೩೦೫೦ ರೂ.ಗಳನ್ನು ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ನಮ್ಮ ನೆರೆ ಹೊರೆಯ ಕಾರ್ಖಾನೆಗಳು ನೀಡುವ ದರವನ್ನು ಆಧರಿಸಿ ಎರಡನೇ ಕಂತಿನ ಬಿಲ್ಲನ್ನು ನೀಡಲು ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಾರಿಗೆ ಮತ್ತು ಮಕ್ತೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಳೆದ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ೬೦೦ ರೂ.ಗಳನ್ನು ನೀಡಿದ್ದು, ಈ ಬಾರಿ ೬೫೦ ರೂ.ಗಳನ್ನು ನೀಡುವ ಮೂಲಕ ೫೦ ರೂ.ಗಳನ್ನು ಹೆಚ್ಚುವರಿಯಾಗಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಕಾರ್ಖಾನೆಯ ಕಬ್ಬು ಅಭಿವೃದ್ಧಿ ಸಿಬ್ಬಂದಿ ಮತ್ತು ಮಕ್ತೆದಾರರಿಗೆ ಸ್ವಚ್ಛ ಹಾಗೂ ಇಳುವರಿ ಕಬ್ಬಿಗೆ ಮಹತ್ವ ನೀಡುವಂತೆ ಸೂಚನೆ ನೀಡಿರುವ ಅವರು, ಎಂದಿನಂತೆ ಕಾರ್ಖಾನೆಗೆ ತಮ್ಮ ಕಬ್ಬನ್ನು ಪೂರೈಕೆ ಮಾಡಿ ಕಾರ್ಖಾನೆಯ ಆರ್ಥಿಕ ಬೆಳವಣಿಗೆಗೆ ಸಹಕರಿಸುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರತಿ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಯು ಪ್ರತಿ ದಿನ ೨೦೦೦ ಮೆಟ್ರಿಕ್ ಟನ್ ಕಬ್ಬು ನುರಿಸುತ್ತಿದ್ದು, ಈ ಹಂಗಾಮಿನಲ್ಲಿ ಪ್ರತಿ ದಿನ ೨೭೦೦ ಮೆಟ್ರಿಕ್ ಟನ್ ಕಬ್ಬು ನುರಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button