Latest

34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

  ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು
34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊರ್ವನನ್ನು ಬಂಧಿಸುವಲ್ಲಿ ಚನ್ನಮ್ಮನ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.
1984ರಲ್ಲಿ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆಯನ್ನು ಸಾಗಿಸುತ್ತಿದ್ದಾಗ ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ (61) ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆರೋಪಿಯ ಮೇಲೆ ಬೈಲಹೊಂಗಲ ನ್ಯಾಯಾಲಯದಲ್ಲಿ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ
ಆರೋಪಿಯನ್ನು ಬಂಧಿಸಲು ಶೋಧ ಕಾರ್ಯ ಮುಂದುವರೆದಿತ್ತು.
34 ವರ್ಷಗಳ ನಂತರ ಆರೋಪಿ ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿರುವ ಕುರಿತು ಮಾಹಿತಿ ಮೇರೆಗೆ ಕಿತ್ತೂರು ಪೋಲಿಸರು ಸಾಂಗಲಿ ಪಟ್ಟಣದ
ನವ ವಸಂತ ಬಾಲಾಜಿ ಮಿಲ್ ಹತ್ತಿರ ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ
ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.
ಬೆಳಗಾವಿ ಎಸ್.ಪಿ ಸುಧೀರಕುಮಾರ ರೆಡ್ಡಿ, ಡಿವೈ ಎಸ್ ಪಿ ಕರುಣಾಕರ ಶೆಟ್ಟಿ, ಸಿಪಿಐ ರಾಘವೇಂದ್ರ ಹವಾಲ್ದಾರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ವೀರಣ್ಣ ಲಟ್ಟಿ ಇವರ ನೇತೃತ್ವದಲ್ಲಿ ಮುಖ್ಯ ಪೇದೆ ಕೆ.ಎಫ್.ಸನದಿ, ಪೇದೆ ಜೆ.ಆರ್.ಗಿಡಪ್ಪನವರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನಲೆ:
30/07/1984ರಂದು ಅಕ್ರಮವಾಗಿ 900 ಕಿಲೋ ತೂಕದ ಶ್ರೀಗಂಧದ ಕಟ್ಟಿಗೆ ತುಂಡುಗಳನ್ನು (ಆಗಿನ ಅಂದಾಜು 54 ಸಾವಿರ ರೂ. ಮೌಲ್ಯ) ಎಟಿಎಂ 9947 ನಂಬರಿನ ಗೂಡ್ಸ್ ಟೆಂಪೋ ವಾಹನದಲ್ಲಿ ಧಾರವಾಡದಿಂದ ಮಹಾರಾಷ್ಟ್ರದ ಮಿರಜ್ ಕಡೆಗೆ ತೆಗೆದುಕೊಂದು ಹೋಗುತ್ತಿದ್ದಾಗ ದಾರಿ
ಮಧ್ಯದ ಕಿತ್ತೂರಿನ ಸೌದಾಗರ ಪೆಂಟ್ರೋಲ್ ಪಂಪ್ ಹತ್ತಿರ ಖಚಿತ ಮಾಹಿತಿ ಮೇರೆಗೆ ಅಂದಿನ ಪಿಎಸ್ಐ ಕರನಿಂಗ್, ಅರಣ್ಯ ಇಲಾಖೆ ಅಧಿಕಾರಿ ಎ.ಎ.ಹವಾಲ್ದಾರ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ವಾಹನ ಮತ್ತು ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದರು. ವಾಹನವನ್ನು ಆರೋಪಿ
ಚಂದ್ರಕಾಂತ ಲಕ್ಷ್ಮಣ ಸೂರ್ಯವಂಶಿ (37) ಬಿಟ್ಟು ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಲು ಆಗಿನ ಬೈಲಹೊಂಗಲ ಸಿಪಿಐ ಎನ್. ಈಶ್ವರಯ್ಯ ಅವರು ತನಿಖಾ ಅಧಿಕಾರಿಯಾಗಿ ತನಿಖೆ ಕೈಗೊಂಡಿದ್ದರಾದರೂ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ನಂತರ ಬೈಲಹೊಂಗಲ ಜೆ.ಎಂ.ಎಫ್‍ಸಿ ನ್ಯಾಯಾಲಯಕ್ಕೆ ಇಲ್ಲಿಯವರೆಗೆ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿತನ ಮೇಲೆ ನ್ಯಾಯಾಲಯದಿಂದ ವಾರೆಂಟ್ ಜಾರಿ ಮಾಡಲಾಗಿತ್ತು.
—————————————————————————————————————————————————

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button