*ಬೆಳಗಾವಿಯಲ್ಲಿ ನಡೆದ 39ನೇ ಕಾಂಗ್ರೇಸ್ ಅಧಿವೇಶನ – ಒಂದು ಹಿನ್ನೋಟ*; *ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕಮೇವ ಕಾಂಗ್ರೇಸ್ ಅಧಿವೇಶನ*
(1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ. ಶತಮಾನೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ಸರಕಾರ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಲೇಖನ)
ರವೀಂದ್ರ ದೇಶಪಾಂಡೆ
1923 ರಲ್ಲಿ ಆಗಿನ ಅಖಂಡ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ 38ನೆಯ ಕಾಂಗ್ರೆಸ್ ಅಧಿವೇಶನದಲ್ಲಿ, ಅಧ್ಯಕ್ಷ ಶ್ರೀ ಮೊಹಮ್ಮದಅಲಿಯವರು, ಶ್ರೀ ಜವಾಹರಲಾಲ ನೆಹರು ಹಾಗೂ ಶ್ರೀ ಗಂಗಾಧರರಾವ್ ದೇಶಪಾಂಡೆಯವರನ್ನು ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿದರು. ಅಧಿವೇಶನದ ಕೊನೆಯಲ್ಲಿ, ಮುಂದಿನ ಅಧಿವೇಶನ ಅಂದರೆ 1924 ರ ಅಧಿವೇಶನವನ್ನು ಕರ್ನಾಟಕದಲ್ಲಿ ನಡೆಸುವಂತೆ, ದೇಶಪಾಂಡೆಯವರು ವಿನಂತಿಸಿಕೊಂಡರು. ಅದಕ್ಕೆ ಕಾಂಗ್ರೇಸ್ ವರ್ಕಿಂಗ ಕಮೀಟಿ, ಸರ್ವಾನುಮತದಿಂದ ಒಪ್ಪಿ, ಕರ್ನಾಟಕದಲ್ಲಿ ಅಧಿವೇಶನ ನಡೆಯಬೇಕಾದ ಸ್ಥಳವನ್ನು ನಿರ್ಧರಿಸುವ ಅಧಿಕಾರವನ್ನು ಪ್ರದೇಶ ಕಾಂಗ್ರೇಸ್ ಸಮೀತಿಗೆ ಬಿಟ್ಟುಕೊಟ್ಟಿತು. ಹಾಗೂ ಆ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿಯವರು ವಹಿಸಬೇಕೆಂದು ಗಂಗಾಧರರಾವ್ ದೇಶಪಾಂಡೆಯವರು ವಿನಂತಿಸಿಕೊಂಡರು. ಪ್ರಾರಂಭದಲ್ಲಿ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಳ್ಳಲು ಗಾಂಧೀಜಿ ನಿರಾಕರಿಸಿದರು. ಈ ಬಗ್ಗೆ ಅವರು ತಮ್ಮ ಅಭಿಪ್ರಾಯವನ್ನು ಗಂಗಾದರರಾವ್ ಅವರ ಮುಂದೆ ವ್ಯಕ್ತಪಡಿಸುತ್ತ “ಅಧಿವೇಶನದ ಅಧ್ಯಕ್ಷತೆಯನ್ನು ವಹಿಸುವ ಬಗ್ಗೆ ನನ್ನ ನಿರ್ಣಯವನ್ನು ನೀವು ಒಪ್ಪಲಿಕ್ಕಿಲ್ಲ. ಈ ಕುರಿತು ದೀರ್ಘವಿಚಾರ ವಿಮರ್ಶೆ ಮಾಡಿದ ನಂತರ, ನಾನು ನನ್ನ ಇಚ್ಛೆಯಂತೆ ಪೂರ್ತಿ ಸ್ವತಂತ್ರನಾಗಿರಬಯಸುತ್ತೇನೆ. ಸಮಯ ಬಂದಾಗ ನಾನು ಈ ಎಲ್ಲ ಕ್ರಿಯೆಗಳಿಂದ ನಿವೃತ್ತನಾಗಬೇಕೆಂದು ನನ್ನ ಇಚ್ಛೆ. ಆದರೆ ನಾನು ಈಗ ಅಧಿವೇಶನದ ಅಧ್ಯಕ್ಷತೆ ವಹಿಸಿದರೆ, ನನಗೆ ಅದು ಸಾಧ್ಯವಾಗುವುದಿಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿರಲಿ ಅಥವಾ ಇಲ್ಲದೆ ಇರಲಿ, ನಾವು ನಮ್ಮ ಯೋಜನೆಗಳನ್ನು ಕಾರ್ಯಾಗತಗೊಳಿಸಲು ಯಾವದೇ ನಿರ್ಬಂಧವಿಲ್ಲ”. ಆದರೆ, ಕೊನೆಗೂ ಗಂಗಾದರರಾವ್ ದೇಶಪಾಂಡೆಯವರ ಆಗ್ರಹದ ಮೇರೆಗೆ ಹಾಗೂ ಕಾರ್ಯಕಾರಿ ಸಮೀತಿಯ ನಿರ್ಣಯದಂತೆ, 1924 ರ ಅಧಿವೇಶನದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡರು. ಆದರೆ ಆಗ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಚಿಂತಾಜನಕವಾಗಿತ್ತು.
ಬ್ರಿಟಿಶ್ ಕೌನ್ಸಿಲ್‌ಗೆ ಸ್ಫರ್ಧಿಸಿ, ಸರಕಾರದ ವಿರುದ್ಧ ಸ್ವರಾಜ್ಯ ಆಂದೋಲನ ಮುಂದುವರೆಸಬೇಕೆಂದು ಒಂದು ಗುಂಪಿನ ವಾದವಾದರೆ, ಸರಕಾರದ ಹೊರಗಿದ್ದುಕೊಂಡೇ ಆಂದೋಲನ ಮಾಡುವಂತೆ ಇನ್ನೊಂದು ಗುಂಪಿನ ವಾದವಾಗಿತ್ತು. ಶ್ರೀ ಮೋತಿಲಾಲ ನೆಹರು, ರಾಜಗೋಪಾಲಚಾರಿ, ಚಿತ್ತರಂಜನದಾಸ ಮುಂತಾದವರು ಬ್ರಿಟಿಶ್ ಕೌನ್ಸಿಲ್‌ಗೆ ಸ್ಪರ್ಧಿಸುವತ್ತ ಒಲವು ತೋರಿದ್ದರೆ, ಮಹಾತ್ಮಾ ಗಾಂಧೀ, ಗಂಗಾಧರರಾವ್ ದೇಶಪಾಂಡೆ, ಸರ್ದಾರ ವಲ್ಲಭಾಯಿ ಪಟೇಲ ಮುಂತಾದವರು ಸರಕಾರದ ಹೊರಗಿದ್ದುಕೊಂಡೆ ಸ್ವರಾಜ್ಯ ಆಂದೋಲನ ಮುಂದುವರೆಸುವ ಪರವಾಗಿದ್ದರು.
27 ಜೂನ್ 1924 ರಂದು, ಅಹಮದಾಬಾದ್ ನಲ್ಲಿ ನಡೆದ ಎಐಸಿಸಿನ ಅಧಿವೇಶನದ, ಕೆಲವೇ ದಿನಗಳಲ್ಲಿ ಓರ್ವ ವ್ಯಕ್ತಿ, ನಿರ್ದಿಷ್ಟ ಕೋಮಿನ ಧರ್ಮಗುರುಗಳ ವಿರುದ್ದ ಪತ್ರಿಕೆಯಲ್ಲಿ ಮಾಡಿದ ಟೀಕೆ, ದೇಶದಾದ್ಯಂತ ಹಿಂದೂ , ಮುಸ್ಲಿಂ ಗಲಭೆಗಳಿಗೆ ಕಾರಣವಾಯಿತು. ಗಾಂಧೀಜಿ ಈ ಘಟನೆಯ ಬಗ್ಗೆ ತೀವ್ರ ಮನನೊಂದು 21 ದಿನಗಳ ಉಪವಾಸ ಆರಂಭಿಸಿದರು.
ಗಾಂಧೀಜಿಯವರ 21 ದಿನಗಳ ಉಪವಾಸದ ನಂತರ, ಮತೀಯ ಗಲಭೆಗಳು ಕಡಿಮೆಯಾಗಿದ್ದವು. ತತ್ಕಾಲೀನ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ ಅಲಿಯವರು ಮತೀಯ ಸೌಹಾರ್ದತೆ ಹಾಗೂ ಶಾಂತಿ ಸ್ಥಾಪಿಸಲು, ಸರ್ವಪಕ್ಷ ʼಏಕತಾ ಸಭೆʼಯನ್ನು ಕರೆಯಲು ನಿರ್ಧರಿಸಿದರು. ಈ ಬಗ್ಗೆ ಅವರು ಗಾಧೀಜಿಯವರೊಂದಿಗೆ ಚರ್ಚಿಸಿ, ಸರ್ವಪಕ್ಷ ಸಭೆ ನಡೆದು ಶಾಂತಿ ಹಾಗೂ ಮತೀಯ ಸೌಹಾರ್ದತೆ ಬಗ್ಗೆ ನಿರ್ಣಯ ಸ್ವೀಕರಿಸಲಾಯಿತು. ಅಕ್ಟೊಬರ 8, 1924 ರಂದು ಗಾಂಧೀಜಿ ತಮ್ಮ ಉಪವಾಸವನ್ನು ಕೊನೆಗೊಳಿಸಿದರು. ನಂತರ ಗಾಂಧೀಜಿಯವರು ಅಖಿಲ ಭಾರತ ನೇಕಾರರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹಾಗೂ ಸಿ. ರಾಜಗೋಪಾಲಚಾರಿ ಹಾಗೂ ಗಂಗಾಧರರಾವ್ ದೇಶಪಾಂಡೆ ಅವರು ಟ್ರಸ್ಟಿಗಳಾಗಿ ನೇಮಕಗೊಂಡರು.
1923ರ ಕಾಕಿನಾಡ ಅಧಿವೇಶನದಲ್ಲಿ ನಿರ್ಣಯ ಕೈಗೊಂಡಂತೆ ಗಂಗಾಧರರಾಯರು ಮುಂದಿನ ಅಧಿವೇಶನದ ತಯಾರಿ ಪ್ರಾರಂಭಿಸಿದರು. ಆಗ ಕರ್ನಾಟಕದಲ್ಲಿ ಎಲ್ಲಿ ಅಧಿವೇಶನ ಮಾಡಬೇಕೆಂಬುದನ್ನು ಮೊದಲು ನಿರ್ಧರಿಸಬೇಕಿತ್ತು. ಈ ಬಗ್ಗೆ ಚರ್ಚಿಸಲು ಗಂಗಾಧರರಾವ್ ಅವರು ಬಿಜಾಪುರದಲ್ಲಿ ಶ್ರೀ ಶ್ರೀನಿವಾಸ ಕೌಜಲಗಿ ಅವರ ನಿವಾಸದಲ್ಲಿ ಸಭೆ ಸೇರಿದರು. ಹಾಗೂ ಈ ಸಭೆಯಲ್ಲಿ ಶ್ರೀನಿವಾಸ ಕೌಜಲಗಿಯವರು, ಅಧಿವೇಶನವನ್ನು ಬಿಜಾಪುರದಲ್ಲಿ ಮಾಡುವಂತೆ ಒತ್ತಾಯಿಸಿದರು. ಇದು ಗಂಗಾಧರರಾಯರಿಗೆ ಅನಿರೀಕ್ಷಿತವಾಗಿತ್ತು. ಈ ಬಗ್ಗೆ ಅಂತಿಮ ತಿರ್ಮಾನ ಕೈಗೊಳ್ಳಲು, ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರಾಂತೀಯ ಸಭೆ ಕರೆಯುವುದಾಗಿ ತಿಳಿಸಿದರು. ಅದರಂತೆ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ, ಬಿಜಾಪುರ ಮಾತ್ರವಲ್ಲದೇ ಮಂಗಳೂರು , ಕಾರವಾರ, ಹುಬ್ಬಳ್ಳಿ, ಧಾರವಾಡದ ಪ್ರತಿನಿಧಿಗಳಿಂದಲೂ ಕೂಡ ತಮ್ಮಲ್ಲಿ ಅಧಿವೇಶನ ನಡೆಸುವಂತೆ ಬಿನ್ನಹಗಳು ಬಂದವು. ಗಂಗಾಧರರಾಯರು ಎಲ್ಲವನ್ನು ಶಾಂತ ರೀತಿಯಿಂದ ಆಲಿಸಿ, ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದು ಹೆಚ್ಚು ಸೂಕ್ತವೆಂದು ಹಾಗೂ ಇಂಥ ಅಧಿವೇಶನ ನಡೆಸಲು ಬೆಳಗಾವಿ ಹೇಗೆ ಸೂಕ್ತವಾದ ಸ್ಥಳವೆಂದು ಸಭೆಗೆ ಸಮಜಾಯಿಷಿ ನೀಡಿದರು. ಕೊನೆಗೆ ದೀರ್ಘ ಸಮಾಲೋಚನೆ ನಂತರ ಹಾಗೂ ಈ ವಿ಼ಷಯವನ್ನು ಮತಕ್ಕೆ ಹಾಕಿದಾಗ ಬೆಳಗಾವಿ ಪರವಾಗಿ ಹೆಚ್ಚು ಮತಗಳು ಬಂದಿದ್ದರಿಂದ ಬೆಳಗಾವಿಯನ್ನು ಅಧಿವೇಶನಕ್ಕಾಗಿ ಸೂಕ್ತ ಸ್ಥಳವೆಂದು ಆರಿಸಲಾಯಿತು. ಈ ನಿರ್ಣಯ ತಮ್ಮಲ್ಲಿ ಅಧಿವೇಶನ ನಡೆಯಬೇಕೆಂದು ವಾದಿಸಿದವರಿಗೆ ಕೊಂಚ ಅಸಮಾಧಾನಕ್ಕೆ ಕಾರಣವಾಯಿತು. ಹುಬ್ಬಳ್ಳಿಯ ಸಭೆ ಮುಗಿಸಿಕೊಂಡು ಬಂದ ನಂತರ, ದಕ್ಷಿಣ ಕನ್ನಡ ಕಾಂಗ್ರೇಸಿಗರು ಮತ್ತೆ ಅಧಿವೇಶನದ ಬಗ್ಗೆ ಕ್ಯಾತೆ ತೆಗೆದು, ಹುಬ್ಬಳ್ಳಿಯ ಸಭೆ ಕಾನೂನು ಬಾಹಿರವಾಗಿದೆ ಹಾಗೂ ಈ ಬಗ್ಗೆ ಪುನಃ ಸಭೆ ಕರೆಯಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ಈ ವಿಷಯ ಗಂಗಾಧರ ದೇಶಪಾಂಡಯವರಿಗೆ ತಲೆನೋವಾಗಿ ಪರಿಣಮಿಸಿತ್ತು.
ಆದರೆ ಕೊನೆಗೆ ಗಾಂಗಾಧರರಾಯರು ಈ ವಿಷಯವನ್ನು ಅಲ್ಲಿನ ಕಾಂಗ್ರೇಸಿಗರಿಗೆ ತಿಳಿ ಹೇಳಿ, ಬೆಳಗಾವಿಯಲ್ಲೇ ಕಾಂಗ್ರೇಸ ಅಧಿವೇಶನವನ್ನು ನಡೆಸಲು ಎಲ್ಲರನ್ನು ಒಪ್ಪಿಸಿದರು. ಗಾಂಧೀಜಿಯವರಿಗೆ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇತ್ತು. ಅವರು ಗಂಗಾಧರರಾಯರಿಗೆ 23 ಮಾರ್ಚ 1924 ರಂದು ಪತ್ರ ಬರೆದು, “ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದರ ಬಗ್ಗೆ ಮಂಗಳೂರಿನ ಕಾಂಗ್ರೇಸ ಕಾರ್ಯಕರ್ತರು , ಕಾಂಗ್ರೇಸ ಸಮೀತಿಯ ನಿರ್ಣಯವನ್ನು ವಿರೋಧಿಸಿತ್ತಿದ್ದಾರೆಂದು ಮರಾಠಿ ಪತ್ರಿಕೆಯ ಮೂಲಕ ತಿಳಿದುಕೊಂಡೆ. ಇದು ನಿಜವೇ ? ನಿಜವೆಂದಾದಲ್ಲಿ ಈ ಬಗೆಗಿನ ಪೂರ್ತಿ ವಿವರವನ್ನು ನನಗೆ ಕಳಿಸಬೇಕು. ಈ ಬಗ್ಗೆ ನನ್ನಿಂದೇನಾದರೂ ಸಹಾಯಬೇಕೇ? ಬೆಳಗಾವಿಯ ಸ್ಥಳ ಬದಲಾಣೆಯನ್ನು ವಿರೋಧಿಸುತ್ತಿರುವವರ ಹೆಸರುಗಳನ್ನು ನನಗೆ ಕಳಿಸಿ ಕೊಡಿ”ಎಂದು ಬರೆದರು. ಎಪ್ರೀಲ್ 5, 1924 ಕ್ಕೆ ಶ್ರೀ ಗೋಕರ್ಣ ಎನ್ನುವವರಿಗೆ ಗಾಂಧೀಜಿಯವರು ಒಂದು ಪತ್ರ ಬರೆದು “ ಈ ವಿವಾದ ಶೀಘ್ರ ಕೊನೆಗೊಳ್ಳಲು ನನ್ನಿಂದಾದ ಎಲ್ಲ ಪ್ರಯತ್ನವನ್ನು ನಾನು ಮಾಡುತ್ತೇನೆ” ಎಂದು ಬರೆದರು.
ಆದರೆ ಈ ಸ್ಥಳದ ಬಗೆಗಿನ ವಿವಾದ ಪರಸ್ಪರ ಸೌಹಾರ್ದತೆ ಹಾಗೂ ಮಾತುಕತೆ ಮೂಲಕ ಬಗೆಹರಿದಿದೆ ಎಂದು ತಿಳಿದ ತಕ್ಷಣ ಗಾಂಧೀಜಿಯವರು, ತಾರೀಖ 24 ಎಪ್ರೀಲ್ 1924 ರ ತಮ್ಮ “ಯಂಗ ಇಂಡಿಯಾ” ದಲ್ಲಿ ಬರೆದು, “ ಕರ್ನಾಟಕ ಪ್ರದೇಶ ಕಾಂಗ್ರೇಸ ಸಮೀತಿಯು ಈ ವಿವಾದವನ್ನು ಬಗೆಹರಿಸಿಕೊಂಡಿದೆಯೆಂದು ತಿಳಿದು ನನಗೆ ಸಂತೋಷವಾಯಿತು. ಈ ಬಗ್ಗೆ ನಾನು ಪ್ರದೇಶ ಕಾಂಗ್ರೇಸ್ ಸಮೀತಿಯನ್ನು ಅಭಿನಂಧಿಸುತ್ತೆನೆ. ತಪ್ಪು ಮಾಡುವುದನ್ನು ಒಪ್ಪಿಕೊಳ್ಳುವದು ಮಾನವ ಸಹಜ ಗುಣ, ಆದರೆ ತಿಳಿದೂ ತಪ್ಪು ಮಾಡುವುದನ್ನು ಮುಂದುವರೆಸುವದು ಅಮಾನೀಯವಾದುದು”.
ಹುಬ್ಬಳ್ಳಿ ಸಭೆಯಿಂದ ಬಂದ ನಂತರ ಗಂಗಾಧರರಾಯರು 39 ನೆಯ ಕಾಂಗ್ರೇಸ ಅಧಿವೇಶನದ ತಯಾರಿಗೆ ಧುಮುಕಿದರು.
ಮೊದಲನೆ ಸ್ವಾಗತ ಸಮೀತಿಯ ಸಭೆಯಲ್ಲಿ, ಗಂಗಾಧರರಾಯರು ಸ್ವಾಗತ ಸಮೀತಿಯ ಅಧ್ಯಕ್ಷರಾಗಿಯೂ, ಶ್ರೀ ಬೆಳವಿ ಹಾಗೂ ಶ್ರೀ ಶ್ರೀನಿವಾಸರಾವ್ ಕೌಜಲಗಿಯವರು ಉಪಾಧ್ಯಕ್ಷರಾಗಿಯೂ, ಶ್ರೀ ಮಾಧವರಾವ್ ಕೆಂಭಾವಿ ಹಾಗೂ ಶ್ರೀ ಭೀಮರಾವ್ ಪೋತದಾರ ಹಾಗೂ ಶ್ರೀ ಬಾಬಾಸಾಹೇಬ ಸೋಮನ ಇವರು ಕಾರ್ಯದರ್ಶಿಗಳಾಗಿಯೂ ಆರಿಸಲ್ಪಟ್ಟರು. ಬೇರೆ ಬೇರೆ ವ್ಯವಸ್ಥೆಗಳನ್ನು ನಿರ್ವಹಿಸಲು ಪ್ರತ್ಯೇಕ ಉಪ ಸಮೀತಿಗಳನ್ನು ರಚಿಸಲಾಯಿತು. ಶ್ರೀ ಎನ್.ಎಸ್. ಹರ್ಡೀಕರರು ಸ್ವಯಂ ಸೇವಕರ ಉಸ್ತುವಾರಿ ನೋಡಿಕೊಳ್ಳಬೇಕೆಂದು ತೀರ್ಮಾನಿಸಲಾಯಿತು.
ಅಧಿವೇಶನದ ಪೂರ್ವ ತಯಾರಿಯ ಪ್ರತಿ ಕೆಲಸದಲ್ಲಿ ಮಿತವ್ಯಯ ಅನುಸರಿಸಬೇಕೆಂಬುದು ಗಂಗಾಧರರಾಯರ ಇಚ್ಛೆಯಾಗಿತ್ತು. ಅಧಿವೇಶನದ ಯಾವ ಕೆಲಸಗಳನ್ನೂ ಗುತ್ತಿಗೆದಾರರಿಗೆ ನೀಡಬಾರದೆಂದು ಗಂಗಾಧರರಾಯರು ನಿರ್ಧರಿಸಿದ್ದರು. ಎಲ್ಲ ಕೆಲಸಗಳನ್ನು ಸ್ವತಃ ಸ್ವಯಂ ಸೇವಕರೇ ಇದೊಂದು “ರಾಷ್ಟ್ರಿಯ ಸೇವೆ” ಎಂದು ತಿಳಿದು ಕಾರ್ಯನಿರ್ವಹಿಸಿದರು. ಅಧಿವೇಶನದ ಕೆಲಸ ಭರದಿಂದ ಸಾಗುತ್ತಿದ್ದಂತೆ ಎಲ್ಲ ವರ್ಗದ ಜನರು ತಮ್ಮ ಮೊದಲಿನ ಜಡತ್ವ ತೊರೆದು ತುಂಬಾ ಹುರುಪಿನಿಂದ ಗಂಗಾಧರರಾಯರ ಜೊತೆ ಕೆಲಸದಲ್ಲಿ ಧುಮುಕಿದರು. ಬೆಳಗಾವಿಯ ʼತಿಲಕವಾಡಿʼ ಎಂಬ ಹೊಸ ಬಡಾವಣೆಯಲ್ಲಿ ʼವಿಜಯ ನಗರʼ ಎಂಬ ಹೆಸರಿನ ಹೊಸ ಕಾಂಗ್ರೇಸ್ ನಗರ ಎದ್ದು ನಿಂತಿತು. ಮಿತವ್ಯಯದ ದೃಷ್ಟಿಯಿಂದ ಅಧಿವೇಶನಕ್ಕೆ ಬೇಕಾದ ಕಟ್ಟಿಗೆ ಹಾಗೂ ಬಿದಿರನ್ನು ಹತ್ತಿರದ ಅರಣ್ಯಗಳಿಂದ ಸಂಗ್ರಹಿಸಲಾಯಿತು. ಅಧಿವೇಶನದ ಖರ್ಚು ವೆಚ್ಚಗಳಿಗಾಗಿ, ಹಣ ಸಂಗ್ರಹಣೆಗಾಗಿ ಸಾರ್ವಜನಿಕರಲ್ಲಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಜನರಿಂದ ಅಭೂತ ಪೂರ್ವ ಸ್ಪಂದನೆ ದೊರೆಯಿತು. ಬಳ್ಳಾರಿ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಗಳಿಂದ, ನೀರೀಕ್ಷೆ ಮೀರಿ ಹಣ ಸಂದಾಯವಾಯಿತು. ಈ ಮನವಿಗೆ ಸ್ಪಂದಿಸಿದ ಸರ್ದಾರ ವಲ್ಲಭಾಯಿ ಪಟೇಲ ಹಾಗೂ ಅವರ ಬಂಧು ಶ್ರೀ ವಿಠ್ಠಲಭಾಯಿ ಪಟೇಲ ಇವರು, ತಾವು ಏನಾದರೂ ಸಹಾಯ ಮಾಡಬಹುದೇ? ಎಂದು ಗಂಗಾಧರರಾಯರಿಗೆ ವಿಚಾರಿಸಿದರು. ಅದಕ್ಕೆ ಗಂಗಾಧರರಾಯರು ಉತ್ತರಿಸಿ, ಕರ್ನಾಟಕದಲ್ಲೇ ಸಾಕಷ್ಟು ಹಣ ಸಂಗ್ರಹವಾಗಿರುವದಾಗಿಯೂ, ಹಾಗೂ ಅವರ ಸಹಾಯದ ಅವಶ್ಯಕತೆಯಿಲ್ಲವೆಂದು ಅತಂತ್ಯ ಸೌಜನ್ಯವಾಗಿ ಉತ್ತರಿಸಿದರು. ಮುಂಬಯಿಯ ಜುಹೂ ಆಸ್ಪತ್ರೆಯಲ್ಲಿ, 21 ದಿನಗಳ ಉಪವಾಸ ನಂತರ ಚಿಕಿತ್ಸೆ ಪಡೆಯುತ್ತಿದ್ದ ಗಾಂಧೀಜಿಯವರನ್ನು, ಗಂಗಾಧರರಾಯರು ಭೇಟಿಯಾಗಿ ಬೆಳಗಾವಿ ಅಧಿವೇಶನದ ಬಗ್ಗೆ ಅವರ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಈಗಾಗಲೇ ತಿಳಿಸಿರುವಂತೆ, ಕಾಂಗ್ರೇಸ್ ಪಕ್ಷವು ಬದಲಾವಣೆಯ ಪರವಾಗಿ ಹಾಗೂ ವಿರುದ್ದವಾಗಿ ಹೀಗೆ ಎರಡು ಗುಂಪುಗಳಾಗಿ ವಿಭಜನೆ ಗೊಂಡಿತ್ತು. ಅಂದರೆ ಬ್ರಿಟಿಶ್ ಕೌನ್ಸಿಲ್ ಗೆ ಸ್ಪರ್ಧಿಸಬೇಕೆಂಬುದು ಒಂದು ಗುಂಪಿನ ವಾದವಾದರೆ, ಅದನ್ನು ವಿರೋದಿಸುವ ಇನ್ನೊಂದು ಗುಂಪು ಇತ್ತು. ಆದರೆ ಈ ಬಗ್ಗೆ ಯಾವುದೇ ಉಲ್ಲೇಖ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಗದಂತೆ ನೋಡಿಕೊಳ್ಳಬೇಕೆಂದು ಗಾಂಧೀಜಿ ತಿಳಿಸಿದರು. ಕಾಂಗ್ರೇಸ್ ಇಬ್ಬಾಗವಾಗುವುದನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಎ.ಐ.ಸಿ.ಸಿ ಅಧಿವೇಶನ ತಾರೀಖ 27 ಜೂನ್ 1924 ರಂದು ಅಹಮ್ಮದಾಬಾದ್ ನಲ್ಲಿ ನಡೆಯಿತು. ಈ ಅಧಿವೇಶನದಲ್ಲಿ ಗಾಂಧೀಜಿ ನಾಲ್ಕು ಅಂಶಗಳನ್ನೊಳಗೊಂಡ ತಮ್ಮ ಸ್ವರಾಜ್ಯ ಯೋಜನೆಯನ್ನು ಸಭೆಯ ಮುಂದಿಟ್ಟರು. 1) ಎಲ್ಲ ಕಾಂಗ್ರೇಸಿಗರು ಕಡ್ಡಾಯವಾಗಿ ನೂಲಬೇಕು. 2) ಎಲ್ಲಾ ಆದೇಶಗಳನ್ನು ಕೆಳಹಂತದಲ್ಲಿ ಅನುಷ್ಠಾನಕ್ಕೆ ತರುವುದು. 3) ಮಿಲ್ ಬಟ್ಟೆ, ಕೋರ್ಟಗಳು, ಶಾಲೆ-ಕಾಲೇಜುಗಳು ಹಾಗೂ ಶಾಸನ ಸಭೆಗಳ ಬಹಿಷ್ಕಾರ. 4) ರಾಜಕೀಯ ಹತ್ಯೆಗಳನ್ನು ಖಂಡಿಸುವುದು. ಖಾದಿ ಹಾಗೂ ಸ್ವರಾಜ್ಯದ ಬಗ್ಗೆ ತಮಗಿರುವ ಅತೀವ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. ಈ ಬಗ್ಗೆ ಅವರು ಮಾತನಾಡುತ್ತ, “ನಾನು ನೂಲಿನ ಚರಕವನ್ನು ನಂಬುತ್ತೇನೆ. ಇದಕ್ಕೆ ಎರಡು ಕಾರಣಗಳಿವೆ, ಒಂದು ಭಯಂಕರ ಪರಿಣಾಮ ಉಂಟುಮಾಡುವಂತಹುದು ಹಾಗೂ ಎರಡನೆಯದು ವೈಚಾರಿಕತೆಯದು. ಮೊದಲನೆಯದು, ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸುವ ಏಕಮೇವ ಉದ್ದೇಶಹೊಂದಿದ್ದು, ಇದರಿಂದಾಗಿ ನಮ್ಮ ಸ್ವತಂತ್ರ ರಾಷ್ಟ್ರೀಯ ಇರುವಿಕೆಯನ್ನು ಬಲಪಡಿಸುವದು. ಇದೊಂದು ಮಾತ್ರ ಬ್ರಿಟಿಶ್ ಸ್ವ ಹಿತಾಸಕ್ತಿಯನ್ನು ನಾಶಪಡಿಸಬಲ್ಲದು. ಇನ್ನು ಎರಡನೆಯ ಕಾರಣ ಇದರಿಂದಾಗಿ ಹಳ್ಳಿಯ ಜನತೆಗೆ ಹೊಸ ಜೀವ ಮತ್ತು ಆಸೆಯನ್ನು ಚಿಗುರಿಸುವುದು. ಇದು ಲಕ್ಷಗಟ್ಟಲೆ ಜನರ ಹೊಟ್ಟೆಯನ್ನು ತುಂಬುವ ಸಾಮರ್ಥ್ಯ ಹೊಂದಿದೆ. ಇದು ಮಾತ್ರ ನಮ್ಮನ್ನು ಹಳ್ಳಿಗರ ಜೊತೆ ನೇರ ಸಂಪರ್ಕ ಮತ್ತು ತನ್ಮಯತೆಯನ್ನು ಸಾಧಿಸಲು ನೆರವಾಗುವದು. ಇದು ನಾವು ಲಕ್ಷಾಂತರ ಗ್ರಾಮದ ಜನರಿಗೆ ಶಿಕ್ಷಣ ನೀಡಿದಂತಾಗುವುದು. ಇದು ಜೀವ ನಾಡಿಯಾಗಿದೆ. ಕಾಂಗ್ರೇಸ್ ಪಕ್ಷವು ರಾಷ್ಟ್ರೀಯತೆಯನ್ನು ಸಾಧಿಸಿ, ರಾಷ್ಟ್ರವನ್ನು ಶೀಘ್ರ ಸ್ವರಾಜ್ಯದೆಡೆಗೆ ಕೊಂಡೊಯ್ಯುವ ಸಾಧನವಾಗಿದೆ. ಏಕೆಂದರೆ ನಾನು ಖಾದಿಯು ಸ್ವರಾಜ್ಯವನ್ನು ತಂದು ಕೊಡುವ ಸಾಮರ್ಥ್ಯದ ಬಗ್ಗೆ ಬಲವಾದ ನಂಬಿಕೆಯುಳ್ಳವಾಗಿದ್ದೇನೆ. ಆದ್ದರಿಂದ ಇದಕ್ಕೆ ನಾನು ನನ್ನ ಯೋಜನೆಯಲ್ಲಿ ಪ್ರಮುಖವಾದ ಸ್ಥಾನವನ್ನು ನೀಡಿದ್ದೇನೆ”. ಸ್ವರಾಜ್ಯವಾದಿಗಳು, ಪ್ರಾರಂಭದಲ್ಲಿ ಈ ಯೋಜನೆಗೆ ಸಂಪೂರ್ಣ ಸಹಮತ ತೋರದಿದ್ದರೂ, ಗಾಂಧೀಜಿಯವರ ಹೃದಯ ಪೂರ್ವಕ ಚರ್ಚೆಯ ನಂತರ ತಮ್ಮ ಒಪ್ಪಿಗೆ ಸೂಚಿಸಿದರು. ಗಾಂಧೀಜಿಯವರು ಈ ಅಂಶಗಳ ಯೋಜನೆಯೊಂದಿಗೆ, ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಲು ಒಪ್ಪಿಕೊಂಡರು. ಗಾಂಧೀಜಿಯವರ ಈ ನಿರ್ಣಯ, ಸ್ವಾಗತ ಸಮೀತಿಗೂ ಹಾಗೂ ಎಲ್ಲಾ ಕಾಂಗ್ರೇಸಿಗರಿಗೂ ಮತ್ತು ಎಲ್ಲಾ ಜನರಿಗೂ ಹುರುಪು ತಂದುಕೊಟ್ಟಿತು. ಹಾಗೂ ಎಲ್ಲರನ್ನೂ ಬೆಳಗಾವಿಯತ್ತ ಸೆಳೆಯಿತು. ಸ್ವಾಗತ ಸಮೀತಿಯು ಈ ಕಾರಣಕ್ಕಾಗಿ ತುಂಬಾ ಶ್ರಮಿಸಿದ್ದಲ್ಲದೆ, ಆಧಿವೇಶನವು ಅಭೂತಪೂರ್ವವಾಗುವಂತೆ ಮಾಡುವಲ್ಲಿ ಕಾರಣಿಭೂತವಾಯಿತು.
1923 ರಲ್ಲಿ ಕಾಕಿನಾಡ ಕಾಂಗ್ರೇಸ್ ಅಧಿವೇಶನದಲ್ಲಿ ಹಾಕಿದ ಪೆಂಡಾಲನ್ನೇ ಬೆಳಗಾವಿಯಲ್ಲೂ ಹಾಕಲಾಯಿತು. ಆದರೆ ಅದರ ಎತ್ತರ ಬಹಳವಿದ್ದುದ್ದರಿಂದ, ಅದನ್ನು ನಿಲ್ಲಿಸಲು ಕಲಕತ್ತಾದಿಂದ ನಿಪುಣರನ್ನು ಕರೆಸಬೇಕಾಯಿತು. ಮೊದಲು ಅವರು ಈ ಕೆಲಸಕ್ಕೆ ಹೆಚ್ಚಿನ ಮೊತ್ತದ ಬೇಡಿಕೆಯಿಟ್ಟರು. ಆದರೆ ಚಿತ್ತರಂಜನದಾಸರ ಮಧ್ಯಸ್ತಿಕೆಯಿಂದಾಗಿ, ಇವರು ಕೊಟ್ಟ ಹಣದಲ್ಲೇ ಮಂಟಪವನ್ನು ನಿರ್ಮಿಸಲಾಯಿತು. ಗಂಗಾಧರರಾವ್ ದೇಸಪಾಂಡೆ ಹಾಗೂ ಸ್ವಾಗತ ಸಮೀತಿಯ ಇತರರು ಹಣ ಸಂಗ್ರಹಣೆಗಾಗಿ ಇಡೀ ಕರ್ನಾಟಕವನ್ನು ಸಂಚರಿಸಿದರು. ಅವರು ಹೋದಲೆಲ್ಲ ಜನರಿಂದ ಕಾರ್ಯಾಕರ್ತರಿಂದ ಅಭೂತಪೂರ್ವ ಸ್ಪಂದನೆ ದೊರೆಯಿತು. ಮೈಸೂರಿನ ರಾಜಮನೆತನದವರೂ ಇದರಲ್ಲಿ ತುಂಬಾ ಸ್ಪೂರ್ತಿಯಿಂದ ಭಾಗವಹಿಸಿದರು. ಅವರು ತಮ್ಮ ಪರಿಣಿತರನ್ನು ಪ್ರದರ್ಶನಕ್ಕೆ ಕಳಿಸಿಕೊಟ್ಟರು. ರಾಜ ದರ್ಬಾರಿನ ಪ್ರಖ್ಯಾತ ಸಂಗೀತಗಾರರೂ ಇದರಲ್ಲಿ ಭಾಗವಹಿಸಿದರು. ವೀಣೆ ಶೇಷಣ್ಣನವರು ಸಂಗೀತ ಸಭೆಯನ್ನು ನಡೆಸಿಕೊಟ್ಟರು. ಈ ಸಂಗೀತವನ್ನು ಗಾಂಧೀಜಿ 90 ನಿಮೀಷವರೆಗೆ ಏಕಾಗ್ರತೆಯಿಂದ ಆಲಿಸಿದರು. ಶ್ರೀ ಹನುವಂತರಾವ್ ಕೌಜಲಗಿಯವರು ಪ್ರದರ್ಶನದ ಹೊಣೆಹೊತ್ತಿದ್ದರೆ, ಶ್ರೀ ಕೃಷ್ಣರಾವ್ ಯಾಳಗಿಯವರು ಇತರೆ ಎಲ್ಲಾ ಕೆಲಸಗಳ ಜವಾಬ್ದಾರಿ ವಹಿಸಿದ್ದರು. ಶ್ರೀ ಎನ್,ಎಸ್ ಹರ್ಡಿಕರರು ಸ್ವಯಂಸೇವಕರ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಡಾ|| ಕಾಕಾ ಕಾಲೇಲಕರರನ್ನು ಸ್ವಚ್ಛತಾ ನಿರ್ವಹಣೆಗಾಗಿ, ಗಾಂಧೀಜಿಯವರು ಕಳಿಸಿಕೊಟ್ಟರು.
ಅಧಿವೇಶನದಲ್ಲಿ ಬಂದ ಪ್ರತಿನಿಧಿಗಳಿಗಾಗಿ ಒಂದು ಪ್ರತ್ಯೆಕ ಆಸ್ಪತ್ರೆ ತೆರೆಯಲಾಗಿತ್ತು. ಆದರೆ ಯಾರೂ ಅದರ ಉಪಯೋಗ ಪಡೆಯುವ ಸಂದರ್ಭ ಬರಲಿಲ್ಲ. ಈ ಬಗ್ಗೆ ಗಾಂಧೀಜಿ ತಮ್ಮ ಪ್ರಶಂಸೆ ವ್ಯಕ್ತಪಡಿಸಿದರು. ಬೆಳಗಾವಿಯ ಪ್ರಸಿದ್ದ ಬೆಣ್ಣೆ ಮತ್ತು ತುಪ್ಪವನ್ನು ಸಾಕಷ್ಟು ಪ್ರಮಾಣದಲ್ಲಿ ಬಡಿಸಲಾಯಿತು. ನೆರೆಯ ಸಾಂಗ್ಲಿ ನಗರದಿಂದ ದಿನಾಲೂ ಕ್ಯಾನ್ ಗಟ್ಟಲೆ ಮೊಸರು ಬರುತ್ತಿತ್ತು. ಅಡಿಗೆಮನೆಯ ಸಂಪೂರ್ಣ ಜವಾಬ್ದಾರಿಯನ್ನು ಸ್ವಾಗತ ಸಮೀತಿ ಸ್ವತಃ ವಹಿಸಿತ್ತು. 200 ಜನ ಮಹಿಳೆಯರನ್ನು ಊಟ ಬಡಿಸಲು ನೇಮಿಸಲಾಗಿತ್ತು. ಹಾಗೂ ಅವರು ಬೆಳಗಾವಿ ಸಮೀಪದ ಕಾಗವಾಡ, ಗಣೇಶವಾಡಿ, ಮಿರಜ ಹಾಗೂ ಸಾಂಗ್ಲಿಯಿಂದ ಬಂದಿದ್ದರು. ಸ್ಥಳಿಯ ವ್ಯಾಪಾರಿಗಳು ಅಡುಗೆಗೆ ಬೇಕಾದ ಪಾತ್ರೆಗಳನ್ನು ಒದಗಿಸಿದರು. ನೂಲುವವರಿಗಾಗಿ 150 ಜನ ಕೂಡುವಂತೆ ಪ್ರತ್ಯೆಕ ಹಾಲ್ ನಿರ್ಮಿಸಲಾಗಿತ್ತು. ಗಾಂಧೀಜಿಯವರಿಗೆ ತಂಗಲು ಒಂದು ಕುಟೀರ ನಿರ್ಮಾಣ ಮಾಡಲಾಗಿತ್ತು. ಅದರ ನಿರ್ಮಾಣ ವೆಚ್ಚ ರೂ.450/- ಆಗಿತ್ತು. ನಂತರ ಅದರ ಸಾಮಾನುಗಳನ್ನು ಮಾರಾಟ ಮಾಡಿ ರೂ.250/- ಸಂಗ್ರಹಿಸಲಾಯಿತು. ಗಾಂಧೀಜಿಯವರು ಈ ಕುಟೀರವನ್ನು ನೋಡಿ ನೀವು ನನಗಾಗಿ ಒಂದು ʼಖಾದಿ ಕುಟೀರʼ ಕಟ್ಟಲು ಹೇಳಿದರೆ, ನೀವು ʼಖಾದಿ ಅರಮನೆʼಯನ್ನೇ ಕಟ್ಟಿದ್ದೀರಿ ಎಂದು ಉದ್ಗಾರ ತೆಗೆದರು.
ಈ ರೀತಿ ದುಂದು ವೆಚ್ಚ ಮಾಡಿದ್ದಕ್ಕಾಗಿ ಅವರು ತಮ್ಮ ಅಸಮಾಧಾನ ತೊರ್ಪಡಿಸಿದರು. ಬೆಳಗಾವಿಯ ಸ್ಥಳೀಯ ಆಡಳಿತ, ನಗರಸಭೆ ಮತ್ತು ಜಿಲ್ಲಾ ಲೋಕಲ್ ಬೋರ್ಡ , ಅಧಿವೇಶನದ ಸ್ಥಳವನ್ನು ಸ್ವಚ್ಛವಾಗಿರಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಇದಲ್ಲದೆ ಕಂದಾಯ ಹಾಗೂ ಪೋಲಿಸ್ ಇಲಾಖೆಗಳೂ ಕೂಡ ಅಧಿವೇಶನಕ್ಕೆ ಸಂಪೂರ್ಣ ಸಹಕಾರ ನೀಡಿದರು. ರೇಲ್ವೆ ಇಲಾಖೆಯೂ ಕೂಡ ಅಧಿವೇಶನಕ್ಕೆ ಸಂಪೂರ್ಣ ಸಹಕಾರ ನೀಡಿ, ಅಧಿವೇಶನ ನಡೆಯುವ ಸ್ಥಳದ ಪಕ್ಕದಲ್ಲೇ ಒಂದು ಹೊಸ ರೈಲು ನಿಲ್ದಾಣ ನಿರ್ಮೀಸುವುದಲ್ಲದೇ, ಅಧಿವೇಶನಕ್ಕೆ ನೀರು ಸರಬರಾಜಿಗಾಗಿ ಡ್ರಮ್ ಗಳನ್ನು ಕೂಡ ಒದಗಿಸಿದರು. ಅಧಿವೇಶನದಲ್ಲಿ ಬಂದ ಪ್ರತಿನಿಧಿಗಳಿಗೆ ನೀರು ಸರಬರಾಜಿಗಾಗಿ ಒಂದು ದೊಡ್ಡ ಬಾವಿಯನ್ನು ರೂ.4370 ಹಾಗೂ 3 ಆಣೆ ಖರ್ಚು ಮಾಡಿ ಅಗೆಯಲಾಗಿತ್ತು, ಆ ಬಾವಿಗೆ ʼʼಪಂಪಾ ಸರೋವರʼʼ ಎಂದು ಹೆಸರಿಡಲಾಗಿತ್ತು. ಹಾಗೂ ಪೈಪ್ ಲೈನ್ ಹಾಕಿಸಲು ರೂ.9293 ಹಾಗೂ 3 ಪೈಗಳನ್ನು ಖರ್ಚುಮಾಡಲಾಗಿತ್ತು. ಮುಂದೆ ಈ ಬಾವಿಯನ್ನು ಸ್ಥಳೀಯ ನಗರ ಸಭೆಗೆ ಹಸ್ತಾಂತರಿಸಲಾಯಿತು. ಅಧಿವೇಶನ ನಡೆದ ಮುಖ್ಯರಸ್ತೆಯನ್ನು ಈಗಲೂ ʼಕಾಂಗ್ರೇಸ್ ರಸ್ತೆʼ ಎಂದೇ ಸಂಭೊಧಿಸಲಾಗುತ್ತದೆ. ಗಂಗಾಧರರಾವ್ ದೇಶಪಾಂಡೆಯವರು, ಈ ಎಲ್ಲ ವ್ಯವಸ್ಥೆಗಳನ್ನು, ತಮ್ಮ ಊರಾದ ಹುದಲಿಯಿಂದ ತರಿಸಿದ ಕುದುರೆ ಮೇಲೆ ಕುಳಿತು, ಮೇಲ್ವಿಚಾರಣೆ ಮಾಡುತ್ತಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲಿ ಅಶ್ವಾರೂಢರಾಗಿ ಕೆಲಸಗಳ ಮೇಲ್ವಿಚಾರಣೆಮಾಡುವುದು ಒಂದು ಸೋಜಿಗದ ದೃಶ್ಯವಾಗಿತ್ತು. ಡಾ|| ರಾಜೇಂದ್ರ ಪ್ರಸಾದರು ಈ ಕುರಿತು ಮಾತನಾಡಿ “ ವಯೋವೃದ್ಧ ಗಂಗಾಧರರಾವ್ ದೇಧಪಾಂಡೆಯವರು ತರುಣರಂತೆ ಕುದುರೆ ಸವಾರಿಯಲ್ಲಿ ಕೆಲಸಗಳನ್ನು ವೀಕ್ಷಿಸುತ್ತಿದ್ದರು. ಹಾಗೂ ಅಧಿವೇಶದ ಬಗ್ಗೆ ಬರೆಯುತ್ತ “ ಬೆಳಗಾವಿಯ ಜನತೆ ಅಧಿವೇಶನದ ಬಗ್ಗೆ ತುಂಬಾ ಉತ್ಸಾಹ ತೋರಿದರು. ಖಾದಿ ಪ್ರದರ್ಶನದಲ್ಲಿ ಸಂಗೀತ ಸಮಾರಂಭ ಏರ್ಪಡಿಸಿದ್ದು ಒಂದು ವಿಶೇಷವಾಗಿತ್ತು. ಇದರಲ್ಲಿ ಕರ್ನಾಟಕದ ಪ್ರಖ್ಯಾತ ಸಂಗೀತಗಾರರು ಭಾಗವಹಿಸಿದ್ದರು”.
ಗಾಂಧೀಜಿಯವರು ಹಾಗೂ ಅವರ ಜೊತೆ ಬಂದ ಅಲಿ ಸಹೋದರರು, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರು, ವಲ್ಲಬಬಾಯಿ ಪಟೇಲ, ಡಾ|| ಅಬುಲ್ ಕಲಾಂ ಆಜಾದ ಮುಂತಾದ ಅನೇಕ ಧುರೀಣರು ಅಧಿವೇಶನದ ಸ್ಥಳಕ್ಕೆ ಬಂದಾಗ, ಅಲ್ಲಿ ಸೇರಿದ ಭಾರಿ ಜನಸ್ತೋಮ ಅವರಿಗೆ ಅದ್ದೂರಿಯ ಸ್ವಾಗತ ನೀಡಿತು. ಈ ಮೆರವಣಿಗೆಯ ನಾಯಕತ್ವವನ್ನು ಗಂಗಾಧರರಾವ್ ದೇಶಪಾಂಡೆ ವಹಿಸಿದ್ದರು. ಅಧಿವೇಶನವು ಶ್ರೀ ಪಾಲುಸ್ಕರ ಹಾಡಿದ “ವಂದೇ ಮಾತರಂ” ಗೀತೆಯೊಂದಿಗೆ ಆರಂಭವಾಯಿತು. ಅದರ ನಂತರ ಎರಡು ಕನ್ನಡ ಹಾಡುಗಳನ್ನು ಹಾಡಲಾಯಿತು. ಹುಯಿಲಗೋಳ ನಾರಾಯಣರಾಯರು ಬರೆದ, “ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು” ಗೀತೆಯನ್ನು ಬಾಲಕಿ ಗಂಗೂಬಾಯಿ ಹಾನಗಲ್ ಹಾಡಿದರು. ಅವಾಗ ಅವರಿಗೆ ಕೇವಲ ಏಳು ವರ್ಷ ವಯಸ್ಸಾಗಿತ್ತು. ನಂತರ ಗಂಗಾಧರರಾಯರು ಬಂದ ಪ್ರತಿನಿಧಿಗಳನ್ನು ತಮ್ಮ ಏಳು ನಿಮಿಷಗಳ, ಸಂಕ್ಷಿಪ್ತ ಕನ್ನಡ ಭಾಷಣದಲ್ಲಿ ಸ್ವಾಗತಿಸಿದರು. ಆಗ ವೇದಿಕೆಗೆ ಸ್ವರಾಜವಾದಿಗಳ ಪರವಾಗಿದ್ದ ಶ್ರೀ ವಿಠ್ಠಲಬಾಯಿ ಪಟೇಲರು ಆಗಮಿಸಿದರು. ಅವರನ್ನು ಕಂಡು ಗಾಂಧೀಜಿ ತಮ್ಮ ಪಕ್ಕದಲ್ಲಿ ಬರಲು ಹೇಳಿದರು. ʼಇವತ್ತು ಏನಾಗುವದೋ ಒಂದು ಕೈ ನೋಡೇ ಬಿಡೋಣʼ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ ವಿಠ್ಠಲಭಾಯಿ ಪಟೇಲರು ಅಲ್ಲಿಯೇ ದೂರದಲ್ಲಿದ್ದ ಆಸನದಲ್ಲಿ ಕುಳಿತರು. ಗಾಂಧೀಜಿಯವರು “ ಇನ್ನು ನಮ್ಮಿಂದ ದೂರದಲ್ಲೇ ಇರುವಿರಾ” ಎಂದು ತಮಾಷೆಯಾಗಿ ಹೇಳಿದರು. ಅವರ ಭಾಷಣ ಹಾಗೂ ಗಾಂಧೀಜಿಯವರ ಅಧ್ಯಕ್ಷೀಯ ಭಾಷಣದ ಪ್ರತಿಗಳನ್ನು ಕ್ರಯಕ್ಕೆ ಹಂಚಿದಾಗ, ಅದರಿಂದ ರೂ.1000 ಸಂಗ್ರಹವಾಗಿತ್ತು. ಗಾಂಧೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಚರಕ ಹೇಗೆ ಸ್ವರಾಜ್ಯಕ್ಕೆ ದಾರಿಯಾಗುತ್ತದೆ ಎಂಬುದನ್ನು ಒತ್ತು ಕೊಟ್ಟು ವಿವರಿಸಿದರು. ಅವರು ಮಾತನಾಡುತ್ತ, “ನಮ್ಮ ಲಕ್ಷಾಂತರ ಬಂದು -ಭಗಿನಿಯರು ಚರಕ ಎಲ್ಲಿಯ ವರೆಗೆ ನಡೆಸುವುದಿಲ್ಲವೋ, ನೂಲುವದಿಲ್ಲವೋ, ಖಾದಿ ತಯಾರಿಸಿ ಅದನ್ನು ತೊಡುವದಿಲ್ಲವೋ, ಅಲ್ಲಿಯ ವರೆಗೆ ಸ್ವರಾಜ್ಯ ಸಿಗಲಾರದು ಎಂದು ನನ್ನ ಬಲವಾದ ನಂಬಿಕೆ. ಗಾಂಧೀಜಿ ಕರೆಕೊಟ್ಟಿದ್ದ ಅಸಹಕಾರ ಚಳುವಳಿಯನ್ನು ಹಠಾತ್ತಾಗಿ ನಿಲ್ಲಿಸಿದ ಬಗ್ಗೆ ಮಾತನಾಡುತ್ತ, ರಾಷ್ಟ್ರ ಇದಕ್ಕೆ ಇನ್ನೂ ಮಾನಸಿಕವಾಗಿ ತಯಾರಾಗಿಲ್ಲವೆಂದು ನನಗನ್ನಿಸುತ್ತಿದೆ. ಆದರೂ ನಾನು ಅದರ ಪರವಾಗಿ ಇರುವದು, ಅದರ ಮೇಲಿನ ನಂಬಿಕೆಯಿಂದ. ಅಹಿಂಸೆ ಮತ್ತು ಅಸಹಕಾರ ಇವು ಸತ್ಯಾಗ್ರಹವೆಂಬ ವೃಕ್ಷದ ಎರಡು ಕೊಂಬೆಗಳಿದ್ದಂತೆ. ಇದು ನನ್ನ ಕಲ್ಪದ್ರುಮ ಹಾಗೂ ರಾಷ್ಟ್ರೀಯ ಅಗತ್ಯತೆಯಾಗಿದೆ. ಸತ್ಯಾಗ್ರಹವು ಸತ್ಯದ ಅನ್ವೇಷಣೆಯಾಗಿದೆ ಹಾಗೂ ದೇವರು ಸತ್ಯವಾಗಿದ್ದಾನೆ. ಸ್ವರಾಜ್ಯವು ನನ್ನ ಪಾಲಿಗೆ ಒಂದು ಸತ್ಯವಾಗಿದೆ. ಬ್ರಿಟಿಷ ಕಾರ್ಯವಿಧಾನ ಹಾಗೂ ಬ್ರಿಟಿಶ್ ಸಂಸ್ಥೆಗಳನ್ನು ಭಾರತದ ಮೇಲೆ ಹೇರುವುದನ್ನು ನಾನು ನನ್ನ ಜೀವನ ಪರ್ಯಂತ ವಿರೋಧಿಸುತ್ತೇನೆ. ಆದರೆ ಈ ನನ್ನ ವಿರೋಧ ಸಂಪೂರ್ಣವಾಗಿ ಅಹಿಂಸಾತ್ಮಕವಾಗಿರುತ್ತದೆ”. ಗಾಂಧೀಜಿಯವರ ಈ ನಡುವಳಿಕೆ 119-16 ಮತಗಳೊಂದಿಗೆ ಸ್ವೀಕೃತವಾಗುತ್ತದೆ. ಮರುದಿನ, ಅಂದರೆ ತಾ.27 ಡಿಸೆಂಬರ್,1924 ರಂದು ಗುಲ್ಬರ್ಗಾದಲ್ಲಿ ನಡೆದ ದಂಗೆ ಹಾಗೂ ಕುಡಿತ ಮತ್ತು ಅಫೀಮು ಕಳ್ಳಸಾಗಾಣಿಕೆ ಬಗ್ಗೆ ನಿರ್ಣಯ ಅಂಗೀಕಾರವಾಗುತ್ತದೆ. ಈ ಬಗ್ಗೆ ಗಾಂಧೀಜಿ ಮಾತನಾಡುತ್ತ “ ಜನರ ಕುಡಿತ ಹಾಗೂ ಡ್ರಗ್ ಸೇವನೆಯಂಥ ಅನೈತಿಕ ಮಾರ್ಗಗಳಿಂದ ಬರುವ ಹಣವನ್ನು ಆದಾಯ ಕ್ರೋಢಿಕರಣವನ್ನಾಗಿ ಉಪಯೋಗಿಸಿದರೆ, ಅದು ಜನರ ನೈತಿಕ ಮೌಲ್ಯಗಳಿಗೆ ಆಘಾತ ಉಂಟು ಮಾಡುತ್ತದೆ ಎಂದು ಕಾಂಗ್ರೇಸ್ ಧೃಢವಾಗಿ ನಂಬಿದೆ. ಆದ್ದರಿಂದ ಕಾಂಗ್ರೇಸ್ ಇವುಗಳ ಸಂಪೂರ್ಣ ಬಹಿಷ್ಕಾರವನ್ನು ಸ್ವಾಗತಿಸುತ್ತದೆ. ಅಧಿವೇಶನದ ನಡೆದ ಸ್ಥಳದಲ್ಲೇ, ಅಸ್ಪಶ್ಯತಾ ಅಧಿವೇಶನ, ವಿದ್ಯಾರ್ಥಿ ಅಧಿವೇಶನ ಹಾಗೂ ಗೋರಕ್ಷಣಾ ಅಧಿವೇಶನಗಳು ನಡೆದು, ಅವುಗಳನ್ನು ಗಾಂಧೀಜಿ ಸಂಭೋದಿಸಿ ಮಾತನಾಡಿದರು. ಅಧಿವೇಶನದಲ್ಲಿ ಕೊನೆಯದಾಗಿ ಮಾತನಾಡುತ್ತ, ಗಾಂಧೀಜಿಯವರು “ ಆಕಾಶವೇ ಮೇಲೆ ಬಿದ್ದರೂ ಸ್ವರಾಜ್ಯವಾದಿಗಳ ಹಾಗೂ ಬದಲಾವಣೆ ಬೇಡವೆನ್ನುವವರ ನಡುವಿನ ಬಾಂಧವ್ಯವನ್ನು ಅಳಿಸಲಾಗುವುದಿಲ್ಲ ಎಂದು ತಿಳಿಸಿ ನನ್ನ ಕಾರ್ಯ ಈಗ ಕೈಗೂಡಿದಂತಾಗಿದೆ” ಎಂದು ತಿಳಿಸಿದರು. ಗಾಂಧೀಜಿಯವರು, ಅಧಿವೇಶನವನ್ನು ಎರಡನೇ ದಿನಕ್ಕೆ ಮುಕ್ತಾಯಗೊಳಿಸಲು ತಿಳಿಸಿ, ಗಂಗಾಧರರಾಯರ ಅಭಿಪ್ರಾಯ ಕೇಳಿದರು. ಅವರೂ ಕೂಡ ಈ ಸಲಹೆಗೆ ಒಪ್ಪಿಕೊಂಡರು. ಹೀಗಾಗಿ ಅಧಿವೇಶನ ಡಿಸೆಂಬರ್ 27 ರಂದೇ ಸಮಾಪ್ತಗೊಂಡಿತು. ಅಧಿವೇಶನದ ನಂತರ, ಅದಕ್ಕಾಗಿ ಉಪಯೋಗಿಸಿದ ಸಾಮಾನುಗಳನ್ನು ಹರಾಜು ಹಾಕಲಾಗಿ ರೂ.30,000/- ಹಣ ಕೂಡಿತು. ಅದನ್ನು ಪ್ರದೇಶ ಕಾಂಗ್ರೇಸ ಸಮೀತಿಗೆ ನೀಡಲಾಯಿತು. ಈ ಹಣ 5 ವರ್ಷ ಕಾಂಗ್ರೇಸಿನ ಕೆಲಸ ಮಾಡಲು ಉಪಯುಕ್ತವಾಯಿತು. ಅಧಿವೇಶನದ ನಂತರ, ಗಾಂಧೀಜಿಯವರು ತಮ್ಮ 25 ಜನೇವರಿ 1925 ರ ʼಯಂಗ ಇಂಡಿಯಾʼದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸುತ್ತ, “ ಗಂಗಾಧರರಾಯರು ಹಾಗೂ ಅವರ ಹಿಂದಿದ್ದ ಪಡೆ ತಮ್ಮ ಕೆಲಸದಲ್ಲಿ ಅತ್ಯುನ್ನತ ಎತ್ತರ ತಲುಪಿದರು. ಅವರ ವಿಜಯ ನಗರದಲ್ಲಿ, ಸ್ಚರಾಜ್ಯಕ್ಕೆ ಜಯವಾಗದಿದ್ದರೂ ಸಂಘಟನೆಗೆ ಜಯವಾಗಿತ್ತು. ಪ್ರತಿಯೊಂದು ವ್ಯವಸ್ಥೆಯಲ್ಲೂ, ಅವರ ನಿಪುಣತೆ ಎದ್ದು ಕಾಣುತ್ತಿತ್ತು. ಡಾ|| ಹರ್ಡೀಕರರ ಸ್ವಯಂಸೇವಕರು ತುಂಬಾ ಜಾಣ್ಮೆ ಹಾಗೂ ಮುತುವರ್ಜಿಯಿಂದ ಕೆಲಸ ನಿರ್ವಹಿಸಿದರು. ವಿದ್ಯುತದೀಪದ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿತ್ತು. ಅಧಿವೇಶನದ ಸ್ಥಳದಲ್ಲಿ ಸುಮಾರು 17,000 ಜನ ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಸಂಪೂರ್ಣವಾಗಿ, ಅತ್ಯುತ್ತಮವಾದ ಸಂಘಟನಾತ್ಮಕ ಪ್ರಯತ್ನ ಇದಾಗಿತ್ತು ಎಂದು ಹೇಳಲು ನಾನು ಎಳ್ಳಷ್ಟೂ ಹಿಂಜರಿಯುವುದಿಲ್ಲ. ಊಟ ತಿಂಡಿಗಾಗಿ ಧಾರಾಳವಾಗಿ ಖರ್ಚು ಮಾಡಲಾಯಿತು. ಇದು ಸ್ವಲ್ಪ ಅತಿರೇಕವೆನೆಸಿದರೂ, ಅದು ಇಲ್ಲಿನವರ ಉದಾರ ಹೃದಯದ ದ್ಯೋತಕವಾಗಿತ್ತು”
(ಲೇಖಕರು – ಅಧ್ಯಕ್ಷರು, ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಸಮೀತಿ, ಬೆಳಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ