Kannada NewsKarnataka NewsLatest

ಮಕ್ಕಳ ಮೇಲೆ ಅಪ್ಪಳಿಸಬಹುದಾದ ಕೊರೋನಾ 3ನೇ ಅಲೆ: ಕೆಎಲ್ಇ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ

ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ ೪೦ ಹಾಸಿಗೆ ಮೀಸಲು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಗತ್ತಿನಾದ್ಯಂತ ವಿಶೇಷವಾಗಿ ಭಾರತವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೋವಿಡ್ -೧೯ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್, ಡೀಮ್ಡ್ ವಿಶ್ವವಿದ್ಯಾಲಯ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಭಾಗದ ಜನರಿಗೆ ಸಕಲ ಸೇವೆ ನೀಡಲು ಬದ್ದವಾಗಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ ೪೦ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತೆಗ್ಸೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ.

ಕೋವಿಡ್ ಸೊಂಕಿಗೆ ಒಳಗಾಗುತ್ತಿರುವ ಗರ್ಭಿಣಿಯರ ಆರೈಕೆಗಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ೨೦ ಹಾಸಿಗೆಗಳ ಪ್ರತ್ಯೇಕ ವಾರ್ಡ್ ಹಾಗೂ ಲೇಬರ್ ರೂಮ್ ಪ್ರಾರಂಭಿಸಲಾಗಿದೆ. ಸಂಭವನೀಯ ಮೂರನೇಯ ಅಲೆಯ ಸಂದರ್ಭದಲ್ಲಿ ಕೋವಿಡ್ -೧೯ ಸೊಂಕಿಗೆ ಸಾಕಷ್ಟು ಮಕ್ಕಳು ಬಳಲಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಮಕ್ಕಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯುಂಟಾಗಬಾರದೆಂದು ಕಾರ‍್ಯಪ್ರವೃತ್ತರಾಗಿರುವ ಮಕ್ಕಳ ತಜ್ಞವೈದ್ಯರು ಚಿಕಿತ್ಸೆ ನೀಡಲು ಸಿದ್ದವಾಗಿ ನಿಂತಿದ್ದಾರೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಮೇತ ತೀವ್ರ ನಿಗಾ ಘಟಕದ ೨೦ ಹಾಸಿಗೆಗಳ ಪ್ರತ್ಯೇಕ ವಾರ್ಡಅನ್ನು ಪ್ರಾರಂಭಿಸಲಾಗಿದೆ.

ಕೋವಿಡ್ ಕೇರ ಕೇಂದ್ರ: ಕೊರೊನಾ ವೈರಸ್ ಸೋಂಕಿಗೆ ಒಳಗಾಗಿ ರೋಗಲಕ್ಷಣವಿಲ್ಲದ ಹಾಗೂ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲಿ ಪ್ರತ್ಯೇಕವಾಗಿರಲು ಆಮ್ಲಜನಕದ ಅಗತ್ಯವಿರುವುದಿಲ್ಲ. ಅದಕ್ಕಾಗಿ ಬೆಳಗಾವಿ ನಗರದ ಹೃದಯ ಭಾಗದಲ್ಲಿರುವ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿರುವ ವಸತಿ ನಿಲಯದಲ್ಲಿ ಕೆಎಲ್‌ಇ ಸ್ವಶಕ್ತಿ ಸಂಘವು ಕೋವಿಡ್ ಕೇರ್ ಕೇಂದ್ರವನ್ನು ಪ್ರಾರಂಭಿಸಿದೆ. ಇಲ್ಲಿ ದಿನದ ೨೪ ಗಂಟೆಗಳ ಕಾಲ ವೈದ್ಯರ ಸೇವೆ ಲಭ್ಯವಿದೆ.

ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂದ್ರ): ಕೋವಿಡ್ ಸೋಂಕು ತೀವ್ರಗೊಂಡು ತೀವ್ರತೊಂದರೆ ಅನುಭವಿಸುತ್ತಿರುವಾಗಲೇ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ)ದಿಂದ ಬಳಲುತ್ತಿರುವವರ ಸಂಖ್ಯೆಯೂ ಅಧಿಕಗೊಳ್ಳುತ್ತಿದ್ದು, ಅದರಲ್ಲಿಯೂ ರೋಗನಿರೋಧಕ ಶಕ್ತಿ ಕ್ಷೀಣಿಸಿರುವ, ಬಹುದಿನಗಳ ಕಾಲ ಸ್ಟಿರಾಯ್ಡ ಪಡೆದ ಹಾಗೂ ಅನಿಯಂತ್ರಿತ ಮಧುಮೇಹ ರೋಗಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲಿದೆ. ಬ್ಲ್ಯಾಕ ಫಂಗಸ್ ಕಂಡು ಬಂದ ರೋಗಿಗಳ ಚಿಕಿತ್ಸೆಗಾಗಿಯೇ ೨೦ ಹಾಸಿಗೆಗಳ ಪ್ರತ್ಯೇಕ ವಾರ್ಡ ಅನ್ನು ಸ್ಥಾಪಿಸಲಾಗಿದೆ. ಈ ರೋಗಿಗಳನ್ನು ಬಹುತೇಕರು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಐವಿ ಅಂಟಿಫಂಗಲ್ಸ (ಫಂಗಸ್ ನಿರೋಧಕ) ಜೊತೆಗೆ ಶಸ್ತ್ರಚಿಕಿತ್ಸೆ ಬೇಕಾಗುತ್ತದೆ. ನೇತ್ರ, ಕಿವಿ, ಮೂಗು, ಗಂಟಲು, ಬಾಯಿ, ಮುಖ ಹಾಗೂ ಪ್ಲಾಸ್ಟಿಕ ಸರ್ಜರಿಯ ತಜ್ಞವೈದ್ಯರುಗಳು ಸೇರಿಕೊಂಡು ಶಸ್ತ್ರಚಕಿತ್ಸೆ ನೆರವೇರಿಸಬೇಕಾಗುತ್ತದೆ. ಅದಕ್ಕಾಗಿ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆಯನ್ನು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ಆಮ್ಲಜನಕ ಉತ್ಪಾದನಾ ಘಟಕ: ಕಳೆದ ಬಾರಿಗೆ ಹೋಲಿಸಿದರೆ ಈ ೨ನೇ ಅಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಮ್ಲಜನಕ ಹಾಗೂ ವೆಂಟಿಲೇಟರಗಳ ಅವಶ್ಯಕತೆ ಬಹಳಷ್ಟು ಇದೆ. ಅವಶ್ಯಕತೆಗೆ ಅನುಗುಣವಾಗಿ ಆಮ್ಲಜಕವನ್ನು ಪಡೆದುಕೊಳ್ಳಲು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಆವರಣದಲ್ಲಿ ೨೫೦೦ ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದರಿಂದ ಆಸ್ಪತ್ರಯಲ್ಲಿರುವ ರೋಗಿಗಳಿಗೆ ಅವಶ್ಯವಿದ್ದಷ್ಟು ಆಮ್ಲಜಕನ ಯಾವುದೇ ತೊಂದರೆಯಿಲ್ಲದೇ ಸಿಗಲಿದೆ.

ಆಪ್ತಸಮಾಲೋಚನೆ: ಕೋವಿಡ್-೧೯ ಸೋಂಕಿಗೆ ಒಳಗಾದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಸೇವೆಗೆ ಜೊತೆಗೆ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಕೇರ್ ಕ್ಲಿನಿಕ್ ಅನ್ನು ಪ್ರಾರಂಭಿಸಲಾಗಿದೆ. ತೀವ್ರತರ ಲಕ್ಷಣವಿಲ್ಲದವರು ಹಾಗೂ ಮನೆಯಲ್ಲಿ ಪ್ರತ್ಯೇಕವಾಗಿದ್ದು, (ಐಸೋಲೇಶನ್) ಚಿಕಿತ್ಸೆಗೆ ಒಳಗಾಗಲು ಬಯಸುವ ಕೋವಿಡ್ ರೋಗಿಗಳಿಗೆ ಗುಣಮಟ್ಟದ ಸೂಕ್ತ ಚಿಕಿತ್ಸೆ ಹಾಗೂ ಸೇವೆಯನ್ನು ಕಲ್ಪಿಸಲಾಗುತ್ತದೆ. ನುರಿತ ಶ್ವಾಸಕೋಶ ತಜ್ಞವೈದ್ಯರು ದೂರವಾಣಿ ಮೂಲಕ ಆಪ್ತಸಮಾಲೋಚನೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾದ ಕೋವಿಡ್ ಆರೈಕೆ ಚಿಕಿತ್ಸಾಲಯದ ಪಕ್ಕದಲ್ಲಿಯೇ ಇರುವ ಭಾರತೀಯ ಜನೌಷಧಿ ಕೇಂದ್ರದಲ್ಲಿ ರೋಗಿಯ ಆರೈಕೆಗಾಗಿ ಔಷಧ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಕೋವಿಡ್ ಸಾಂಕ್ರಾಮಿಕ ಈ ರೋಗದ ಸಂದರ್ಭದಲ್ಲಿ ಆಸ್ಪತ್ರೆಯು ಸಹಾಯವಾಣಿಯನ್ನು ಪ್ರಾರಂಭಿಸಿದ್ದು ತುರ್ತು ಸಂದರ್ಭದಲ್ಲಿ ೧೦೯೯ ಇಲ್ಲಿಗೆ ಸಂಪರ್ಕಿಸಲು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಕೋರಿದ್ದಾರೆ.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಆಸ್ಪತ್ರೆಯ ತಜ್ಞವೈದ್ಯರೊಂದಿಗೆ ಕೋವಿಡ್ ಸಾಂಕ್ರಾಮಿಕ ರೋಗದ ನಿಯಂತ್ರಣ ಹಾಗೂ ಮುಂದಿನ ಕಾರ‍್ಯಯೋಜನೆ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಉಪಪ್ರಾಚಾರ‍್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ, ಮೆಡಿಕಲ್ ಸೂಪರಿಟೆಂಡೆಂಟ ಡಾ. ಆರಿಫ್ ಮಾಲ್ದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

ಕೆಎಲ್ಇ ಆಸ್ಪತ್ರೆಯಿಂದ ಯಿಂದ ಪೋಸ್ಟ್ ಕೋವಿಡ್ ಕೇರ್ ಮತ್ತು ರಿಹೆಬಿಲೈಟೇಶನ್ ಸೆಂಟರ್

 

ಕೊರೋನಾ ಲಸಿಕೆ ಪ್ರಯೋಗಕ್ಕೆ ಕೆಎಲ್ಇ ಆಸ್ಪತ್ರೆ ಆಯ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button