ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್ ಸಿಟಿ ಯೋಜನೆಗೆ ಬೆಳಗಾವಿ ಆಯ್ಕೆಯಾಗಿ ಮೊನ್ನೆ ಜೂನ್ 25ಕ್ಕೆ 4 ವರ್ಷ.
ಮೊನ್ನೆ ಸ್ಮಾರ್ಟ್ ಸಿಟಿ ಎಂಡಿ ಜಿಯಾವುಲ್ಲಾ ಪತ್ರಿಕಾಗೋಷ್ಠಿ ನಡೆಸಿ ಈವರೆಗೆ 4 ಕೋಟಿ ರೂ. ಮೊತ್ತದ ಕಾಮಗಾರಿಗಳು ಮುಕ್ತಾಯವಾಗಿರುವುದಾಗಿ ತಿಳಿಸಿದ್ದಾರೆ.
ನಿನ್ನೆ 4ನೇ ಬಾರಿಗೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕರನ್ನು ಟ್ರಾನ್ಸಫರ್ ಮಾಡಲಾಗಿದೆ.
ಅಂದರೆ, ಈವರೆಗೆ 4 ವರ್ಷ, 4 ಎಂಡಿ, 4 ಕೋಟಿ ರೂ. ಕಾಮಗಾರಿ!
ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಇಂದು ಬೆಳಗ್ಗೆ ಸ್ಮಾರ್ಟ್ ಸಿಟಿ ಯೋಜನೆ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಹೊರತುಪಡಿಸಿ ಬೇರೆ ಯಾವುದೇ ಶಾಸಕರು ಹಾಜರಿರಲಿಲ್ಲ.
ಸುರೇಶ ಅಂಗಡಿ ಸಂಸದರಾಗಿ ಹಲವು ಬಾರಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಈಗ ಸಚಿವರಾಗಿ ಸಭೆ ನಡೆಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಗೆ ಮೊದಲ ಹಂತದಲ್ಲೇ ಬೆಳಗಾವಿ ಆಯ್ಕೆಯಾದಾಗ ಜನ ಖುಷಿಪಟ್ಟಿದ್ದರು. ಬೆಳಗಾವಿ ಸ್ಮಾರ್ಟ್ ಆಗಲಿದೆ ಎಂದು ಹರ್ಷಪಟ್ಟಿದ್ದರು. ಹಾಗಾಗಿ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯುವ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಸೇರಿದಂತೆ ಸಾಕಷ್ಟು ಸಂಕಷ್ಟಗಳನ್ನು ಸಹಿಸಿಕೊಂಡಿದ್ದಾರೆ.
ಆದರೆ, ಸ್ಮಾರ್ಟ್ ಸಿಟಿ ಕೆಲಸಗಳು ಆಮೆ ವೇಗದಲ್ಲಿ ನಡೆಯುತ್ತಿದೆ. ಆರಂಭದಲ್ಲಿ ಕೆಲಸ ವೇಗವಾಗಿ ನಡೆದರೆ ಅದರ ಕ್ರೆಡಿಟ್ ಕೇಂದ್ರ ಸರಕಾರಕ್ಕೆ ಹೋಗುತ್ತದೆ ಎಂದು ರಾಜ್ಯಸರಕಾರ ವಿಳಂಬ ನೀತಿ ಅನುಸರಿಸಿತು. ಸ್ಮಾರ್ಟ್ ಸಿಟಿ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆಯೂ ವಿಳಂಬವಾಯಿತು. ನಂತರ ಅಧಿಕಾರಿ, ಸಿಬ್ಬಂದಿ ನೇಮಕ ತೀರಾ ತಡವಾಯಿತು. ಅದಾದ ನಂತರ ಅಧಿಕಾರ ಹಂಚಿಕೆಗೆ ಸಾಕಷ್ಟು ಕಾಲ ತೆಗೆದುಕೊಳ್ಳಲಾಯಿತು. ಪಿಎಂಸಿ (ಪ್ರೊಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟನ್ಸಿ ವಿವಾದಕ್ಕೊಳಗಾಯಿತು. ಶಾಸಕರು ಬದಲಾಗಿದ್ದರಿಂದ ಯೋಜನೆಗಳೂ ಬದಲಾದವು.
ಈಗ ಮತ್ತೆ ಸ್ಮಾರ್ಟ್ ಸಿಟಿ ಎಂಡಿ ಬದಲಾಗಿದ್ದಾರೆ. ಪ್ರತಿಯೊಬ್ಬರು ಬದಲಾದಾಗಲೂ ಯೋಜನೆಗಳು ಬದಲಾಗುತ್ತವೆ. ಅವರು ತಿಳಿದುಕೊಳ್ಳಲು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಕಂದ್ರ ಸರಕಾರದ ಯೋಜನೆಯ ಉದ್ದೇಶ ನಿರೀಕ್ಷೆಗೆ ತಕ್ಕಂತೆ ಆಗುತ್ತಿಲ್ಲ.
ಈಗ ಸುರೇಶ ಅಂಗಡಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಯೋಜನೆ ಜಾರಿಯಲ್ಲಿ ಗಟ್ಟಿತನ ತೋರಿಸಬೇಕು. ಬೆಳಗಾವಿಯಲ್ಲಿರುವ ಮೂವರು ಶಾಸಕರೂ ಈಗ ಅಭಿವೃದ್ದಿ ಪರವಾಗಿದ್ದಾರೆ. ಎಲ್ಲರೂ ಸೇರಿ ಯೋಜನೆಯನ್ನು ಚುರುಕುಗೊಳಿಸಲು ಮುಂದಾಗಬೇಕು. ಕನಿಷ್ಟ ಮೊದಲ ಹಂತದ ಯೋಜನೆಗಳು ಪೂರ್ಣಗೊಳ್ಳುವವರೆಗೂ ಉನ್ನತ ಅಧಿಕಾರಿಗಳನ್ನು ಬದಲಿಸದೆ, ನೇಮಿಸುವಾಗಲೇ ಉತ್ತಮ ಅಧಿಕಾರಿಯನ್ನು ನೇಮಿಸಬೇಕು.
ಜನರ ನಿರೀಕ್ಷೆಗೆ ತಕ್ಕಂತೆ ಬೆಳಗಾವಿಯನ್ನು ಸ್ಮಾರ್ಟ್ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ, ಯಾವುದೇ ರಾಜಕೀಯ, ಸ್ವಹಿತಾಸಕ್ತಿಗೆ ಗಮನಕೊಡದೆ ಪ್ರಯತ್ನಿಸಬೇಕು.
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಸಮಗ್ರ ಚಿತ್ರಗಳು ಇಲ್ಲಿದೆ
ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆ: 4 ವರ್ಷದಲ್ಲಿ 4 ಕೋಟಿ ರೂ. ಕಾಮಗಾರಿ!
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಗೆ 41ನೇ ಸ್ಥಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ