Kannada NewsLatestNational

*ಮಗುವನ್ನೇ ಕೊಂದು ಸೂಟ್ ಕೇಸ್ ನಲ್ಲಿ ಸಾಗಿಸುತ್ತಿದ್ದ ತಾಯಿ 6 ದಿನ ಪೊಲೀಸ್ ಕಸ್ಟಡಿಗೆ*

ಪ್ರಗತಿವಾಹಿನಿ ಸುದ್ದಿ; ಪಣಜಿ: ಬೆಂಗಳೂರಿನ ಕಂಪನಿಯೊಂದರ ಸಿಇಓ ಆಗಿದ್ದ ಸುಚನಾ ಸೇಠ್ ತನ್ನ ಸ್ವಂತ ಮಗುವನ್ನೇ ಗೋವಾದ ಹೋಟೆಲ್ ರೂಂ ನಲ್ಲಿ ಕೊಂದು ಸೂಟ್ ಕೇಸ್ ನಲ್ಲಿಟ್ಟು ಸಾಗಿಸುತ್ತಿದ್ದ ವೇಳೆ ಚಿತ್ರದುರ್ಗ ಬಳಿ ಪೊಲೀಸರು ಬಂಧಿಸಿದ್ದು, ಆರೋಪಿ ತಾಯಿಯನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಚನಾ ಸೇಠ್ ಮೈಂಡ್ ಫುಲ್ ಕಂಪನಿ ಸಂಸ್ಥಾಪಕಿ. 200-09ರಲ್ಲಿ ಪಶ್ಚಿಮಬಂಗಾಳದಿಂದ ಬೆಂಗಳೂರಿಗೆ ಬಂದು ವಾಸವಾಗಿದ್ದಳು. ಬೆಂಗಳೂರಿನಲ್ಲಿಯೇ ಕಂಪನಿ ಸ್ಥಾಪಿಸಿದ್ದಳು. ತಮಿಳುನಾಡು ಮೂಲದ ವೆಂಕಟರಮಣ ಎಂಬ ಟೆಕ್ಕಿ ಜೊತೆ ವಿವಾಹವಾಗಿದ್ದಳು. ದಂಪತಿಗೆ 4 ವರ್ಷದ ಮುದ್ದಾದ ಮಗನಿದ್ದ. ಆದರೆ ಕೌಟುಂಬಕ ಕಲಹದಿಂದಾಗಿ ವಿಚ್ಛೇದನ ಪಡೆದಿದ್ದ ದಂಪತಿ ಎರಡು ವರ್ಷಗಳಿಂದ ದೂರವಾಗಿದ್ದರು. ಆದರೆ ಕೋರ್ಟ್ ಮಗುವಿಗೆ ಭಾನುವಾರ ತಂದೆಯನ್ನು ಭೇಟಿಯಾಗಲು ಅವಕಾಶ ನೀಡಿತ್ತು. ಆದರೆ ಸುಚನಾ ಪತಿ ಫಿಲಿಫೈನ್ಸ್ ನಲ್ಲಿ ಉದ್ಯಗದಲ್ಲಿದ್ದುದರಿಂದ ವಾರಕ್ಕೆ ಒಮ್ಮೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ.

ಜ.6ರಂದು ಮಗನೊಂದಿಗೆ ಸುಚನಾ ಗೋವಾ ಪ್ರವಾಸಕ್ಕೆ ತೆರಳಿ ಉತ್ತರ ಗೋವಾ ಹೋಟೆಲ್ ನಲ್ಲಿ ತಂಗಿದ್ದಳು. ಪತಿಯ ಮೇಲಿನ ದ್ವೇಷಕ್ಕೆ ಸುಚನಾ ಮಗನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳೆ ಜ.7ರಂದು ಮಗನನ್ನು ಹತ್ಯೆ ಮಾಡಿದ್ದ ಸುಚನಾ ಒಂದುದಿನ ಮಗನ ಶವದ ಜೊತೆ ಕಳೆದಿದ್ದಾಳೆ. ಬಳಿಕ ತಾನು ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸಾವನ್ನಪ್ಪಿಲ್ಲ. ಜ.8ರಂದು ಹೋಟೆಲ್ ಸಿಬ್ಬಂದಿಯಿಂದಲೇ ಗೋವಾದಿಂದ ಬೆಂಗಳೂರಿಗೆ ಕ್ಯಾಬ್ ಬುಕ್ ಮಾಡಲು ಹೇಳಿದ್ದಾಳೆ. ಮಧ್ಯರಾತ್ರಿ 1 ಗಂಟೆಗೆ ಹೋಟೆಲ್ ಚೆಕ್ ಔಟ್ ಮಾಡಿದ್ದಾಳೆ ಈ ವೇಳೆ ಆಕೆ ಜೊತೆಗಿದ್ದ 4 ವರ್ಷದ ಮಗ ಇರಲಿಲ್ಲ. ಹೋಟೆಲ್ ಸಿಬ್ಬಂದಿ ವಿಚಾರಿಸಿದಾಗ ಸಂಬಂಧಿಕರ ಮನೆಗೆ ಕಳುಹಿಸಿದ್ದಾಗಿ ಹೇಳಿ ಟ್ಯಾಕ್ಸಿ ಹತ್ತಿ ಬೆಂಗಳೂರಿನತ್ತ ಸಾಗಿದ್ದಳು. ಇಂದು ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ರೂಮಿನಲ್ಲಿ ರಕ್ತದ ಕಲೆ ಇರುವುದನ್ನು ಕಂಡು ಶಾಕ್ ಆಗಿದ್ದಾರೆ. ತಕ್ಷಣ ಗೋವಾ ಕಲ್ಲಂಗುಟ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸುಚನಾಳಿಗೆ ಕರೆ ಮಾಡಿ ರಕ್ತದ ಕಲೆ ಬಗ್ಗೆ ವಿಚರಿಸಿದಾಗ ಋತುಚಕ್ರದಿಂದ ಆಗಿದೆ ಎಂದಿದ್ದಾಳೆ. ಮಗು ಎಲ್ಲಿ ಸಂಬಂಧಿಕರ ಮನೆ ವಿಳಾಸ ಕೊಡು ಎಂದಾಗ ತಪ್ಪು ವಿಳಾಸ ನೀಡಿದ್ದಾಳೆ. ಅನುಮಾನ ದೃಢವಾಗುತ್ತಿದ್ದಂತೆ ಟ್ಯಾಕ್ಸಿ ಚಾಲಕನಿಗೆ ಕರೆ ಮಾಡಿದ ಪೊಲಿಸರು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲು ಹೇಳಿದ್ದಾರೆ. ಚಿತ್ರದುರ್ಗ ಎಸ್ ಪಿಗೂ ಮಾಹಿತಿ ನೀಡಿದ್ದಾರೆ. ಟ್ಯಾಕ್ಸಿ ಚಾಲಕ ಐಮಂಗಲ ಠಾಣೆಗೆ ಬಳಿ ಟ್ಯಾಕ್ಸಿ ನಿಲ್ಲಿಸಿದ್ದಾನೆ. ತಕ್ಷಣ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಸೂಟ್ ಕೇಸ್ ಪರಿಶೀಲಿಸಿದಾಗ ಮಗುವಿನ ಶವ ಪತ್ತೆಯಾಗಿದೆ. ಸದ್ಯ ಗೋವಾ ಪೊಲೀಸರು ಸುಚನಾಳನ್ನು ಬಂಧಿಸಿ ಮಾಪುಸಾ ಕೋರ್ಟ್ ಗೆ ಹಾಜರು ಪಡಿಸಿದ್ದು, ಕೋರ್ಟ್ 6 ದಿನಗಳ ಕಾಲ ಕಲ್ಲಂಗುಟೆ ಪೊಲೀಸ್ ಕಸ್ಟಡಿಗೆ ಆರೋಪಿಯನ್ನು ಒಪ್ಪಿಸಿದೆ.


Related Articles

Back to top button