*ವಾಲ್ಮೀಕಿ ನಿಗಮದ 40 ಕೋಟಿ ಹಣ ಬೇರೆ ಖಾತೆಗಳಿಗೆ ವರ್ಗಾವಣೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಲಿ; ಬೊಮ್ಮಾಯಿ ಆಗ್ರಹ*
ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ನಿಗಮಕ್ಕೆ ಸಂಬಂಧಿಸಿದ ಸುಮಾರು 40 ಕೋಟಿ ರೂ. ಹಣ ನೇರವಾಗಿ ರಾಜ್ಯ ಸರ್ಕಾರದ ಖಜಾನೆಯಿಂದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದ ಆಳ ಮತ್ತು ಅಗಲ ನೋಡಿದರೆ ಹೊಸ ತಿರುವುಗಳಿಗೆ ಕಾರಣವಾಗುತ್ತಿದೆ. ಇದಕ್ಕೆ ಅಂತ್ಯಾನೇ ಇಲ್ಲ ಅಂತ ಅನಿಸುತ್ತದೆ. ಈಗಾಗಲೇ ಹಲವಾರು ಅಕೌಂಟ್‌ಗಳನ್ನು ತೆರೆದು ಹೈದರಾಬಾದ್ ಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಅದು ಹಣಕಾಸು ಇಲಾಖೆಗೆ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ.
ಆದರೆ, ನಮಗೆ ಇತ್ತೀಚೆಗೆ ಒಂದು ಮಾಹಿತಿ ಬಂದಿದೆ. ಮಾರ್ಚ್ 31 ರಂದು ನೇರವಾಗಿಯೇ ರಾಜ್ಯ ಸರ್ಕಾರದ ಖಜಾನೆಯಿಂದ ಸುಮಾರು 40 ಕೋಟಿ ರೂ. ಅಧಿಕೃತ ಖಾತೆಗೆ ಹೋಗದೇ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಇದೆ. ಇದು ಹೇಗೆ ಹೊರಗೆ ಬಂದಿದೆ ಎಂದರೆ, ಪೇಮೆಂಟ್ ಮಾಡಿರುವ ಚಲನ್ ಅನು ಕಂಪ್ಯೂಟರದ ನಿಂದ ತೆಗೆದು ಹಾಕುವ ಪಯತ್ನವಾಗಿದೆ. ಆ ಹಿನ್ನೆಲೆಯಲ್ಲಿ ಖಜಾನೆಯಲ್ಲಿ ಸ್ವಲ್ಪ ಗಲಿಬಿಲಿಯಾಗಿದೆ. ಹೀಗಾಗಿ ಈ ವಿಷಯ ಹೊರಗೆ ಬಂದಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ವಿಧಾನಸಭೆಯಲ್ಲಿ ಸ್ಪಷ್ಟಿಕರಣ ನೀಡಬೇಕು. ಪಾಲ್ಮೀಕಿ ನಿಗಮಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ. ಮಾರ್ಚ್ 31 ಕೈ ಖಜಾನೆಯಿಂದ ಹಣ ಬಿಡುಗಡೆಯಾಗಿದೆಯಾ, ಬಿಡುಗಡೆಯಾಗಿದ್ದರೆ ಯಾವ ಖಾತೆಗೆ ಬಿಡುಗಡೆಯಾಗಿದೆ. ಚಲನ್ ನಾಶ ಮಾಡುವ ಪ್ರಯತ್ನ ನಡೆದಿದೆಯೋ ಇಲ್ಲವೋ ಎನ್ನುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟಿಕರಣ ನೀಡಬೇಕು ಎಚಿದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೋವಿಂದ ಕಾರಜೋಳ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ