*ವೋಟ್ ಚೋರಿ ಪ್ರತಿಭಟನೆಗೆ ರಾಜ್ಯದಿಂದ 4 ಸಾವಿರ ಜನ ಭಾಗಿ: ಡಿಕೆಶಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೋಟ್ ಚೋರಿ ಪ್ರತಿಭಟನೆಗೆ ರಾಜ್ಯದಿಂದ ನಾಲ್ಕು ಸಾವಿರ ಜನರು ಹೋಗಿದ್ದಾರೆ. ವಿಮಾನಗಳಲ್ಲೂ ತುಂಬಾ ಜನ ಬಂದಿದ್ದರು. ಒಬ್ಬರೊಬ್ಬರು ಐವತ್ತು ಸಾವಿರ ರೂ. ಖರ್ಚು ಮಾಡಿಕೊಂಡು ಬಂದಿದ್ದಾರೆ ಅವರೆಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ನಾನು ಅಸೆಂಬ್ಲಿಗೆ ಬರಲು ಆಗಲಿಲ್ಲ. ನಾನು ಹಾಗೂ ಕಾಂಗ್ರೆಸ್ ಅಧ್ಯಕ್ಷರು ನೇರವಾಗಿ ದೆಹಲಿಯಿಂದ ದಾವಣಗೆರೆಗೆ ಹೋಗಬೇಕಾಯಿತು. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಅತೀವ ದುಃಖ ತಂದಿದೆ ಎಂದರು.
ಶಿವಶಂಕರಪ್ಪ ತಮ್ಮ 95 ವರ್ಷಗಳ ಜೀವನದಲ್ಲಿ ಪಕ್ಷಕ್ಕೆ ತುಂಬಾ ಮಾರ್ಗದರ್ಶನ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟರು. ಅಜಾತಶತ್ರು ಎನಿಸಿಕೊಂಡು ಎಲ್ಲ ವರ್ಗದ ಜನರಿಗೂ ಹತ್ತಿರವಾಗಿದ್ದರು. ವಿಶೇಷವಾಗಿ ಕೋವಿಡ್ ಸಂದರ್ಭ ದಾವಣಗೆರೆಯಲ್ಲಿ ಉಚಿತವಾಗಿ ಲಸಿಕೆ ಕೊಡಿಸಿದರು. ಈ ಮೂಲಕ ಅವರು ರಾಜ್ಯಕ್ಕೆ ಮಾದರಿಯಾದರು ಎಂದು ತಿಳಿಸಿದರು.
ನಿನ್ನೆ ದೆಹಲಿಯಲ್ಲಿ ನಡೆದ ವೋಟ್ ಚೋರಿ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜ್ಯದಿಂದ ಸಾವಿರಾರು ಜನರು ಆಗಮಿಸಿದ್ದಾರೆ. ಈ ದೇಶದ ಪ್ರಜಾಪ್ರಭುತ್ವ ಉಳಿಯಬೇಕು, ಆಗುತ್ತಿರೋ ಅನ್ಯಾಯ ತಡಿಯಬೇಕು ಎಂಬ ಆಸೆಯಿಂದ ದೆಹಲಿಗೆ ಬಂದು ತಮ್ಮ ಕೂಗನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಒಪ್ಪಿಕೊಂಡು ಇಡೀ ದೇಶಕ್ಕೆ ಸಂದೇಶ ಕೊಟ್ಟಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ದೆಹಲಿಗೆ ಬಂದಿದ್ದ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.


