Belagavi NewsBelgaum NewsCrimeKannada NewsKarnataka NewsNationalPolitics

*ಬೆಳಗಾವಿಯಲ್ಲಿ ಕಾರು ಹರಿದು 48 ಕುರಿಗಳು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರು ಹರಿದು 48 ಕ್ಕೂ ಕುರಿಗಳು ಸಾವನ್ನಪ್ಪಿದ್ದು, 15 ಹೆಚ್ಚು ಕುರಿಗಳಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ನಡೆದಿದೆ.

ಕೆಂಗಾನೂರ ಗ್ರಾಮದ ಚಂದ್ರಪ್ಪ ರಾಯಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರ ಕುರಿಗಳ ಹಿಂಡನ್ನು ನಯಾನಗರ ಸಮೀಪದ ಮಲಪ್ರಭಾ ನದಿಯ ದಂಡೆಯ ಬಳಿ ಮೇಯಲು ಬಿಡಲಾಗಿತ್ತು. ಮೇಯಿಸಿಕೊಂಡು ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಕೆಂಗಾನೂರ ಗ್ರಾಮದತ್ತ ಹಿಂಡು ಕರೆದುಕೊಂಡು ತೆರಳುತ್ತಿದ್ದಾಗ, ಬೈಲಹೊಂಗಲದಿಂದ ಬೆಳವಡಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಕೆಎ–48 ಎಂ–1789 ಸಂಖ್ಯೆಯ ಟಾಟಾ ಇಂಡಿಗೋ ಕಾರು ನೇರವಾಗಿ ಕುರಿಗಳ ಹಿಂಡಿನೊಳಗೆ ನುಗ್ಗಿದೆ.

Home add -Advt

ಅಪಘಾತದ ರಭಸಕ್ಕೆ 48ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ. ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರಬಂದ ದೃಶ್ಯ ಕಂಡ ಸ್ಥಳೀಯರು ಕಣ್ಣೀರಿಟ್ಟರು. ರಸ್ತೆ ತುಂಬಾ ಚದುರಿಬಿದ್ದಿದ್ದ ಕುರಿಗಳ ಮೃತದೇಹಗಳು ಹಾಗೂ ಗಾಯಗೊಂಡ ಕುರಿಗಳ ನರಳಾಟ ನೋಡುಗರ ಮನಕಲಕುವಂತಿತ್ತು.

ಈ ದುರ್ಘಟನೆಯಿಂದ ಕುರಿ ಸಾಕಾಣಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಕುರಿಗಾಹಿಗಳ ಕುಟುಂಬಕ್ಕೆ ಅಪಾರ ಸುಮಾರು 20 ಲಕ್ಷ ಆರ್ಥಿಕ ನಷ್ಟ ಉಂಟಾಗಿದೆ. ಕ್ಷಣಾರ್ಧದಲ್ಲಿ ತಮ್ಮ ಬದುಕಿನ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಮಾಲೀಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳದಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು. ಅಪಘಾತದ ಬಳಿಕ ಕಾರು ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. 

ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ ಮಲ್ಲಿಕಾರ್ಜುನ ಗಾಣಿಗೇರ ಹಾಗೂ 112 ತುರ್ತು ಸೇವೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತ ಕುರಿಗಳನ್ನು ಮೂರು ಗಂಟೆಗಳ ಕಾಲ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button