Kannada NewsKarnataka NewsLatest

ಮುಂದಿನ 5 ವರ್ಷದಲ್ಲಿ 500 ಕೋಟಿ ರೂ. ಸಾಲ ನೀಡುವ ಗುರಿ – ಆನಂದ ಮಾಮನಿ

 ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ) – ನಾಡಿಗೆ ಅನ್ನ ನೀಡುವ ರೈತನ ಬಾಳು ಹಸನಾಗಿರಬೇಕು. ರೈತರು ಅಭಿವೃದ್ಧಿ ಹೊಂದಿದರೆ ಮಾತ್ರ ದೇಶ ಸಮಗ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ೮.೦೧ ಕೋಟಿ ರೂ. ವೆಚ್ಚದಲ್ಲಿ ೧೨.೭೫ ಕಿ.ಮೀ. ರಸ್ತೆ, ೪೦ ಸಾವಿರ ರೂ ವೆಚ್ಚದಲ್ಲಿ ಹೂಲಿ, ಹಂಚಿನಾಳ(ವ್ಹಾಯಾ ಚಿಕ್ಕುಂಬಿ) ರಸ್ತೆ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಹೊಲಗದ್ದೆಗಳಿಗೆ ಧವಸ- ಧಾನ್ಯ ಸಾಗಿಸಲು ರೈತರಿಗೆ ಅನುಕೂಲವಾಗುವಂತೆ ರಸ್ತೆಗಳನ್ನು ಸುಧಾರಿಸಲಾಗುತ್ತಿದೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ೩.೧೬ ಕೋಟಿ ರೂ. ವೆಚ್ಚದಲ್ಲಿ ಹಂಚಿನಾಳ ಆಚಮಟ್ಟಿ ರಸ್ತೆ, ೮.೦೧ ಕೋಟಿ ರೂ ಹಂಚಿನಾಳ ವ್ಹಾಯಾ ಚಿಕ್ಕುಂಬಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಿಗೆ ಹಂತ ಹಂತವಾಗಿ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಹಳ್ಳಿಗಳ ಉದ್ಧಾರದಿಂದಲೇ ದೇಶದ ಉದ್ಧಾರ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಆನಂದ ಮಾಮನಿ ಮಾತನಾಡಿ, ರೈತರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಮುಂದಿದೆ. ತಾಲೂಕಿನ ರೈತರಿಗೆ ಹೊಸದಾಗಿ ೫೮ ಟ್ಯಾಕ್ಟರ್ ಗಳನ್ನು ನೀಡಿದ್ದು, ತಾಲೂಕಿನ ೧೦೩ ಕೃಷಿ ಪತ್ತಿನ ಸಂಘಗಳಿಗೆ ೩೦೦ ಕೋಟಿ ರೂ. ಸಾಲ ನೀಡಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಮುಂದಿನ ೫ ವರ್ಷದಲ್ಲಿ ೫೦೦ ಕೋಟಿ ರೂ. ಸಾಲ ನೀಡುವುದಾಗಿ ಭರವಸೆ ನೀಡಿದರು. ಕೃಷಿಕನ ಕಾಯಕದಲ್ಲಿ, ಕಾಯಕಲ್ಪ ನೀಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಅವರು ದೇಶ ಬೆಳೆಯಬೇಕಾದರೆ ಶಿಕ್ಷಣ, ಸಹಕಾರಿ ಹಾಗೂ ಆರೋಗ್ಯ ಮುಖ್ಯವೆಂದರು.
ಜಿಪಂ ಸದಸ್ಯ ಗುರುನಾಥ ಗಂಗಲ, ಜಿಪಂ ಸದಸ್ಯ ಎಮ್ ಎಸ್ ಹಿರೇಕುಂಬಿ, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಜಗದೀಶ ಹನಶಿ, ಜಗದೀಶ ಕೌಜಗೆರಿ, ಮಾಜಿ ತಾಪಂ ಅಧ್ಯಕ್ಷ ಸುರೇಶ ಹಾರೋಬಿಡಿ, ವಿರುಪಾಕ್ಷ ಹನಶಿ, ಪಿಕೆಪಿಎಸ್ ಅಧ್ಯಕ್ಷ ಸುಭಾಸ ಚೌಡರ, ಆರ್ ಟಿ ಮಂಗನ್ನವರ, ಎನ್ ಎಸ್ ಗಂಗಲ, ಸೈದುಸಾಬ ಕುಳ್ಳೂರ, ಶಿವು ಜಡರ, ಲೋಕೇಶ ಸಿರನ್ನವರ, ಗುಡ್ ನಾಯ್ಕರ, ಪಾಂಡುಶ್ರೀ, ರೇವನಶೀದ್ದಯ್ಯ ಹಿರೇಮಠ,ಪಂಚಪ್ಪ ಹಾದಿಮನಿ, ಸಚಿನ ಕುಂಬಾರ, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button