
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದ್ದು, ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗಳಲ್ಲಿ ಬರುವ ಕಬ್ಬಿನ ಸಿಪ್ಪೆ (ಬಗಾಸೆಸ್) ಮತ್ತು ಕಾಕಂಬಿ (ಮೊಲಾಸಿಸ್) ಮರುಬಳಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಕೈಗಾರಿಕೆಗಳಲ್ಲಿ ಹೊರಬರುತ್ತಿರುವ ರಾಸಾಯನಿಕಯುಕ್ತ ನೀರು ಮತ್ತು ಹೊಗೆಯಿಂದ ಜಲ ಮಾಲಿನ್ಯ ಮತ್ತು ವಾಯು ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅವರು ತಿಳಿಸಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗಾವಿ ಪ್ರಾದೇಶಿಕ ಕಚೇರಿ 1 ಮತ್ತು ಪ್ರಾದೇಶಿಕ ಕಚೇರಿ 2 (ಚಿಕ್ಕೋಡಿ ಕೇಂದ್ರ) ಇವರ ಸಹಯೋಗದೊಂದಿಗೆ ನಗರದ ಸಿ.ಪಿ.ಎಡ್ ಮೈದಾನದಲ್ಲಿ ಮಂಗಳವಾರ (ನ.04) ನಡೆದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಕಬ್ಬಿನ ಸಿಪ್ಪೆ ಪರ್ಯಾಯ ಇಂಧನವಾಗಿದೆ. ಇದರಿಂದ ಕಲ್ಲಿದ್ದಲಿನ ಬಳಕೆ ಕಡಿಮೆ ಮಾಡಲು ಸಾಧ್ಯವಾಗುತ್ತಿದೆ. ಕಬ್ಬಿನ ಸಿಪ್ಪೆಯಿಂದ ಏಕ ಬಳಕೆಯ ತಟ್ಟೆ ಮತ್ತು ಲೋಹಗಳನ್ನು ತಯಾರಿಸಲಾಗುತ್ತಿದೆ. ಇದೇ ರೀತಿ ಬಗ್ಯಾಸ್ ಮತ್ತು ಇಥೆನಾಲ್ ಘಟಕದ ಸ್ಟೆಂಟ್ ವಾಷ್ ತ್ಯಾಜ್ಯಗಳನ್ನು ಇಂಧನವಾಗಿ ಉಪಯೋಗಿಸಿಕೊಂಡು ಕೈಗಾರಿಕೆಗಳು ತಮಗೇ ಬೇಕಾದಷ್ಟು ವಿದ್ಯುತ್ ಉತ್ಪತ್ತಿಮಾಡಿಕೊಳ್ಳುತ್ತಿವೆ. ಜೊತೆಗೆ ಹೆಚ್ಚುವರಿ ವಿದ್ಯುತ್ ಅನ್ನು ಸಮೀಪದ ಗ್ರಿಡ್ ಗೆ ಸರಬರಾಜು ಮಾಡುತ್ತಿವೆ. ಇದರಿಂದ ಕೈಗಾರಿಕೆಗಳು ಇಂಧನ ಸ್ವಾವಲಂಭಿಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸತೀಶ್ ಶುಗರ್ಸ್ ಕಾರ್ಖಾನೆಯು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮಲ್ಲಿನ ಪ್ರೆಸ್ ಮಡ್ ತ್ಯಾಜ್ಯದಿಂದ ಸಿ.ಎನ್.ಜಿ ತಯಾರಿಕಾ ಘಟಕವನ್ನು ಸ್ಥಾಪಿಸಿದೆ. ಈ ಮೂಲಕ ತ್ಯಾಜ್ಯದಿಂದ ಇಂಧನ ತಯಾರಿಸುವ ಹೊಸ ಹೆಜ್ಜೆಯಿಟ್ಟಿದೆ. ಇದೇ ರೀತಿ ಇತರೆ ಕೈಗಾರಿಕೆಗಳು ತ್ಯಾಜ್ಯಗಳ ಮರುಬಳಕೆಗೆ ಮತ್ತು ಸಮರ್ಪಕ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆಕೊಟ್ಟರು.
ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿಗೆ ಎರಡು ಕಡೆ, ಘಟಪ್ರಭಾ ನದಿಗೆ ಒಂದು ಕಡೆ ಮತ್ತು ಕೃಷ್ಣ ನದಿಗೆ ಮೂರು ಕಡೆ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಮಲಪ್ರಭಮತ್ತು ಕೃಷ್ಣ ನದಿಯನ್ನು ಕಲುಷಿತ ಪಟ್ಟಿಗೆ ಸೇರಿಸಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಲಿನ್ಯ ಕಡಿಮೆ ಮಾಡಲು ಕ್ರಿಯಾಯೋಜನೆ ರೂಪಿಸಿದೆ ಎಂದು ತಿಳಿಸಿದರು
ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಅಗತ್ಯ
ದಿನದಿಂದ ದಿನಕ್ಕೆ ಘನ ತ್ಯಾಜ್ಯಗಳ ಉತ್ಪಾದನೆ ಹೆಚ್ಚಾಗುತ್ತಿದ್ದು ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಕೂಡ ಅತ್ಯಗತ್ಯ. ಪ್ರತಿ ದಿನ ಲಕ್ಷಾಂತರ ಹಾಲಿನ ಪಾಕಿಟ್ ಗಳು ಭೂಮಿಗೆ ಸೇರುತ್ತಿವೆ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುವರ್ಣ ಮಹೋತ್ಸವ ಎಂದರೆ ಪರಿಸರ ಉಳಿಸುವ ಕಾರ್ಯಕ್ರಮ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಕಾಯಿದೆಗಳ ಬಗ್ಗೆ ತಿಳಿದುಕೊಡುವ ಕಾರ್ಯಕ್ರಮ ನಮ್ಮ ಮಕ್ಕಳಿಗೆ ನಾವು ನೀಡಬಹುದಾದ ಅತ್ಯಂತ ಒಳ್ಳೆಯ ಆಸ್ತಿ ಎಂದರೆ ಅದು ಉತ್ತಮ ಪರಿಸರ ಎಂದು ತಿಳಿಸಿಕೊಡುವ ಕಾರ್ಯಕ್ರಮ ಎಂದು ವಿವರಿಸಿದರು.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ 1974ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 50 ವರ್ಷ ಪೂರೈಸಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವುದು ಸುವರ್ಣ ಮಹೋತ್ಸವದ ಗುರಿಯಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಸ್ಥಳೀಯ ಮಟ್ಟದಲ್ಲಿ ಜಾಗೃತಿ ಅಗತ್ಯ
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಗಾಗಿ 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವ ಪೀಳಿಗೆಗೆ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಮಾಲಿನ್ಯ ನಿಯಂತ್ರಣ ಪತಿಯೊಬ್ಬರು ಜವಾಬ್ದಾರಿಯಾಗಿದೆ. ಮಂಡಳಿಯಿಂದ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾಲೂಕಾ ಮಟ್ಟದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಪರಿಸರ ವಲಯದಲ್ಲಿ ಒಳ್ಳೆಯ ಕೆಲಸ ಮಾಡಿರುವ ವ್ಯಕ್ತಿಗಳು, ಸಂಘ ಸಂಸ್ಥೆಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮಗಳನ್ನು ಮಂಡಳಿ ಹಮ್ಮಿಕೊಳ್ಳಬೇಕು ಸಚಿವ ಸತೀಶ ಜಾರಕಿಹೊಳಿ ಸಲಹೆ ನೀಡಿದರು.

50 ವರ್ಷಗಳ ಸಮರ್ಪಣೆ, 31 ಜಿಲ್ಲೆಗಳು, 1 ಧ್ಯೇಯ
ಮಾಲಿನ್ಯ ಮುಕ್ತ ಕರ್ನಾಟಕ, ಎಂಬ ಧ್ಯೇಯ ವಾಕ್ಯದೊಂದಿಗೆ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದು ಸಂತಸದ ವಿಷಯ. ಚರಂಡಿಗಳ ಮೂಲಕ ಕಾರ್ಖಾನೆಗಳಿಂದ ಹರಿದು ಬರುವ ರಾಸಾಯನಿಕ ನಿಯಂತ್ರಣವಾಗಬೇಕಿದೆ. ಪ್ಲಾಸ್ಟಿಕ್ ಬಳಕೆ ಪ್ರಮಾಣ ನಿರಂತರ ಕಡಿಮೆಯಾಗಲು ಅಗತ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭವಿಷ್ಯಕ್ಕೆ ಮಾರಕವಾಗದಂತೆ ಪರಿಸರ ಸಂರಕ್ಷಣೆ, ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಾಗಬೇಕು. ತ್ಯಾಜ್ಯಗಳ ವಿಂಗಡಣೆ ಕುರಿತು ಪ್ರತಿಯೊಬ್ಬರಿಗೂ ಅರಿವು ಇರಬೇಕು ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇರ್ ತಿಳಿಸಿದರು.
ಪರಿಸರ ಸಂರಕ್ಷಕರಿಗೆ ಸನ್ಮಾನ
ಕಾರ್ಯಕ್ರಮದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಂಡಳಿ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ, ಶಾಸಕ ಆಸೀಫ್ (ರಾಜು) ಸೇರ್ ಅವರು ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆಗೆ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ, ಪರಿಸರ ಸ್ನೇಹಿ ಶಾಲೆಗಳ ಮುಖ್ಯೋಪಾಧ್ಯಾಯರಿಗೆ, ಸಂಘ ಸಂಸ್ಥೆಗಳಿಗೆ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪ್ರದಾನ ಮಾಡಿದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೂಳಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಜ್ಯ ಉಪಾಧ್ಯಕ್ಷ ಸುನೀಲ ಹನುಮನ್ನವರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತಾರದ ಪಾನಕಿ ಕೆ.ಎಂ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪರಿಸರ ಅಧಿಕಾರಿ ಹನುಮಂತಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


