ಪ್ರಗತಿವಾಹಿನಿ, ಗೋಕಾಕ :
ಲೋಳಸೂರದಿಂದ ಹುಣಶ್ಯಾಳ ಪಿಜಿವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ೬ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇಷ್ಟರಲ್ಲಿಯೇ ಕಾಮಗಾರಿಗೆ ಅನುಮೋದನೆ ದೊರೆಯುವ ನಿರೀಕ್ಷೆ ಇದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ಬಳೋಬಾಳ ಗ್ರಾಮದಲ್ಲಿ ರವಿವಾರ ಸಂಜೆ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಲೋಳಸೂರದಿಂದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಹುಣಶ್ಯಾಳ ಪಿಜಿ ಗ್ರಾಮದವರೆಗಿನ ಆಯ್ದ ೭.೫೦ ಕಿ.ಮೀ ರಸ್ತೆ ಸುಧಾರಣೆಗೊಳ್ಳಲಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯಿಂದ ಲೆಕ್ಕಶೀರ್ಷಿಕೆ ೫೦೫೪ ರಡಿ ೫ ಕೋಟಿ ರೂ. ಮತ್ತು ನಬಾರ್ಡ ಯೋಜನೆಯಡಿ ಒಂದು ಕೋಟಿ ರೂ.ಗಳ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ದೊರೆಯಲಿದೆ ಎಂದು ತಿಳಿಸಿದರು.
ಬಳೋಬಾಳ ಗ್ರಾಮದ ಪ್ರಗತಿಗಾಗಿ ಸರ್ಕಾರದ ವಿವಿಧ ಯೋಜನೆಗಳಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇಲ್ಲಿಯವರೆಗೆ ಗ್ರಾಮದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಸ್ಪಂದನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕೂಡ ಗ್ರಾಮಸ್ಥರು ನೀಡಿರುವ ಬೇಡಿಕೆಗಳನ್ನು ಈಡೇರಿಸುವ ಭರವಸೆ ವ್ಯಕ್ತಪಡಿಸಿದರು.
ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆಯನ್ನೂ ಸಹ ಸಲ್ಲಿಸಲಾಗಿದೆ. ಬಳೋಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದ ಚಿಕಿತ್ಸೆಗಳು ಬಡ ಕುಟುಂಬಗಳಿಗೆ ದೊರೆಯಲಿವೆ ಎಂದು ಹೇಳಿದರು.
ಡಾ.ಶಿಂಗ್ಯಾಗೋಳ ಅವರಿಗೆ ಸತ್ಕಾರ :
ಬಳೋಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಗೊಂಡ ಡಾ.ಶಿಂಗ್ಯಾಗೋಳ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸತ್ಕರಿಸಿದರು.
ಡಾ.ಸುಗಂಧಾ ಶಿಂಗ್ಯಾಗೋಳ ಅವರು ಬಳೋಬಾಳ ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮುತ್ತೆಪ್ಪ ಕುಳ್ಳೂರ, ವಿನೋದ ಪೂಜೇರಿ, ಭೀಮಪ್ಪ ಕಲ್ಲೋಳಿ, ರಾಮಪ್ಪ ದುರ್ಗಿ, ಪ್ರಧಾನಿ ಕಳಸನ್ನವರ, ಬಸವರಾಜ ಬೆಳವಿ, ಶ್ರೀಶೈಲ ಬೆಳವಿ, ಸಿದ್ದಯ್ಯಾ ಹೋಳಗಿ, ಗುರುಸಿದ್ದ ಮೆಳವಂಕಿ, ಬಸವರಾಜ ಪೋಟಿ, ಪುಂಡಲೀಕ ಸುಂಕದ, ಅವ್ವಣ್ಣ ಡಬ್ಬನವರ, ರಾಮನಾಯ್ಕ ನಾಯ್ಕ, ಲಕ್ಷ್ಮಣ ತೆಳಗಡೆ, ಶಿವಪ್ಪ ದೊಡಕೆಂಚನವರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ