Latest

*ನೀರಿನ ಸಂಪಿಗೆ ಬಿದ್ದು 6 ವರ್ಷದ ಬಾಲಕ ಸಾವು*: *ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ*

ಪ್ರಗತಿವಾಹಿನಿ ಸುದ್ದಿ: ಆಟವಾಡುತ್ತಿದ್ದ ವೇಳೆ ಆಯತಪ್ಪಿ ತೆರೆದಿದ್ದ ನೀರಿನ ಸಂಪಿಗೆ ಬಿದ್ದ 6 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಹುಬ್ಬಳ್ಳಿ ಉಣಕಲ್ ಗ್ರಾಮದ ಗಣೇಶ್ ಕಾಲೋನಿ ನಿವಾಸಿ ಸಿದ್ಧಾರ್ಥ್ ಮೃತ ಬಾಲಕ. ಪ್ರಥಮ ತರಗತಿಯಲ್ಲಿ ಓದುತ್ತಿದ್ದ ಸಿದ್ಧಾರ್ಥ್, ಬೆಳಗ್ಗೆ ಸುಮಾರು 9 ಗಂಟೆ ವೇಳೆಗೆ ನೀರು ತೆಗೆಯಲು ತೆರೆದಿದ್ದ ಸಂಪಿನಲ್ಲಿ ಆಕಸ್ಮಿಕವಾಗಿ ಬಿದ್ದಿದ್ದಾನೆ.

ಬಾಲಕ ಸಂಪಿಗೆ ಬಿದ್ದಿರುವುದನ್ನು ಗಮನಿಸಿದ ತಂದೆ ನಾಗಪ್ಪ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಸಿದ್ಧಾರ್ಥ್‌ನನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ.

ಬಾಲಕನ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದು ಕುಟುಂಬಸ್ಥರು ಹಾಗೂ ಸಂಬಂಧಿಕರು ಶವಾಗಾರದ ಬಳಿ ಜಮಾಯಿಸಿದ್ದು, ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ. ಇದೇ ವೇಳೆ ಮರಣೋತ್ತರ ಪರೀಕ್ಷೆ ವಿಳಂಬವಾಗಿರುವುದಕ್ಕೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಕಾಯುತ್ತಿದ್ದರೂ ಇದುವರೆಗೆ ಪೋಸ್ಟ್‌ಮಾರ್ಟಂ ನಡೆಸಿಲ್ಲ ಎಂದು ಆರೋಪಿಸಿದ್ದು, ವೈದ್ಯರು ಲಭ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಘಟನೆಯಿಂದ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದ್ದು, ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲುಮುಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button