
ಪ್ರಗತಿವಾಹಿನಿ ಸುದ್ದಿ: ಆರು ವರ್ಷದ ಬಾಲಕಿ ಕೊಲೆ ಹಾಗೂ ರಸ್ತೆ ಬದಿ ಚರಂಡಿಯಲ್ಲಿ ಮೂಟೆಯಲ್ಲಿ ಶವ ಪತ್ತೆ ಪ್ರಕರಣಕ್ಕೆ ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಮಹಿಳೆ ಮೇಲಿನ ದ್ವೇಷಕ್ಕೆ ಆಕೆಯ 6 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದ ಪ್ರಕರಣ ಕೆಲ ದಿನಗಳ ಹಿಂದೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿತ್ತು. ಪಕ್ಕದ ಮನೆಯ ಯುವಕನೇ ಬಾಲಕಿಯನ್ನು ಕೊಲೆಗೈದಿದ್ದ ಬಗ್ಗೆ ಅನುಮಾನ ವ್ಯಕ್ತವಗೈತ್ತು. ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ವಿಷಯ ಬಯಲಾಗಿದೆ.
ಬಾಲಕಿ ಹತ್ಯೆ ಪ್ರಕರಣದಲ್ಲಿ ಯುಸೂಫ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಯ ಮೃಗೀಯ ವರ್ತನೆ ತನಿಖೆಯಲ್ಲಿ ಬಯಲಾಗಿದೆ. ಆರೋಪಿ ಯುಸೂಫ್ ಪಶ್ಚಿಮ ಬಂಗಾಳ ಮೂಲದವನು. ಬೆಂಗಳುರಿನ ವೈಟ್ ಫೀಲ್ಡ್ ಬಳಿ ಶೆಡ್ ನಲ್ಲಿ ವಾಸವಾಗಿದ್ದುಕೊಂಡು ಚಿಂದಿ ಆಯುತ್ತಿದ್ದ. ಬಾಲಕಿಯ ತಂದೆ-ತಾಯಿ ಕೂಡ ಪಶ್ಚಿಮ ಬಂಗಾಳ ಮೂಲದವರು. ಹಾಗಾಗಿ ಆರೋಪಿ ಬಾಲಕಿಯ ಮನೆಯ ಪಕ್ಕದ ಶೆಡ್ ನಲ್ಲಿಯೇ ವಾಸವಾಗಿದ್ದ. ಬಾಲಕಿ ತಾಯಿ ಜೊತೆ ಯುಸೂಫ್ ಗೆ ಜಗಳವಾಗಿತ್ತು. ಆಕೆ ಮೇಲಿನ ದ್ವೇಷಕ್ಕೆ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿದ್ದ ಯುಸೂಫ್, ಬಾಲಕಿಯ ಮೇಲೆ ಅತ್ಯಾಚಾರವೆಸಗಿ ವೈರ್ ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.
ಬಳಿಕ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮೂಟೆ ಕಟ್ಟಿ ರಸ್ತೆ ಬದಿ ಚರಂಡಿಗೆ ಬಿಸಾಕಿದ್ದಾನೆ. ಆರೋಪಿ ಓಡಾಟ, ಬಾಲಕಿ ಆತನನ್ನು ಹಿಂಬಾಲಿಸಿ ಹೋಗುತ್ತಿರುವ ಸಿಸಿಟಿವಿ ದ್ಯಶ್ಯಗಳನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಯುಸೂಫ್ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಪೋಕ್ಸೋ ಕೇಸ್ ಹಾಗೂ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಹಾಗೂ ಮಕ್ಕಳನ್ನೇ ಟಾರ್ಗೆಟ್ ಮಾಡಿ ಆತ ದೌರ್ಜನ್ಯವೆಸಗುವ ಸೈಕೋಪಾತ್ ಎಂಬ ಬಗ್ಗೆಯೂ ತನಿಖೆಯಲ್ಲಿ ಬಯಲಾಗಿದೆ.



