*ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ: ಸಚಿವ ಚಲುವರಾಯಸ್ವಾಮಿ*
ಪ್ರಗತಿವಾಹಿನಿ ಸುದ್ದಿ : ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗ ಮಟ್ಟದ ಸಭೆ ನಡೆಸಿ ಅವರು ಮಾತನಾಡಿದರು. ಕೃಷಿಕರಿಗೆ ಯೋಜಿತ ತರಬೇತಿ ನೀಡಿ ಸಾಮರ್ಥ್ಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ. ವಿಜಯ ನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದರು.
ಗುಣ ನಿಯಂತ್ರಣಕ್ಕೆ ಒತ್ತು
ಇಲಾಖೆಯಲ್ಲಿ ತರಬೇತಿ ಹಾಗೂ ಗುಣ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತಿದೆ. ಪ್ರಯೋಗಾಲಯಗಳನ್ನು ಎನ್.ಎ.ಬಿ.ಎಲ್ ಮಾನ್ಯತೆಗೆ ಒಳಪಡಿಸಲಾಗುವುದು.ಬೈಲಹೊಂಗಲ ಪರತಂತ್ರ ಜೀವಿ ಪ್ರಯೋಗಾಲಯ ಉನ್ನತೀಕರಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕಬ್ಬಿನಲ್ಲಿ ಕೀಟ ನಿಯಂತ್ರಣಕ್ಕೆ ಅವಶ್ಯ ವಿರುವ ಟ್ರೈಕೋಗ್ರಾಮಾ ಪರತಂತ್ರ ಜೀವಿಯ ಉತ್ಪಾದನೆಯಲ್ಲಿ ನೂತನ ತಾಂತ್ರಿಕತೆ ಅಳವಡಿಕೆಗೆ ಸೂಚಸಿದ ಕೃಷಿ ಸಚಿವರು ಮುಂದಿನ 6 ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ರೈತರಿಗೆ ಒದಗಿಸುವಂತೆ ನಿರ್ದೇಶನ ನೀಡಿದರು.
ಸ್ಥಳೀಯವಾಗಿ ಬೀಜೋತ್ಪಾದನೆ ಮಾಡಿ
ಪ್ರತಿ ಸಾಲಿನಲ್ಲಿ ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜವನ್ನು ಆಯಾ ಜಿಲ್ಲೆಗಳ ಬೀಜೋತ್ಪಾದನಾ ಕೇಂದ್ರ ಮತ್ತು ಪ್ರಗತಿಪರ ರೈತರ ಹೊಲದಲ್ಲೇ ಉತ್ಪಾದಿಸುವಂತೆ ಎನ್ .ಚಲುವರಾಯ ಸ್ವಾಮಿ ಅವರು ತಿಳಿಸಿದರು.
ಜವಾಬ್ದಾರಿಯಿಂದ ಕೆಲಸ ಮಾಡಲು ಸೂಚನೆ
ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ, ಜವಾಬ್ದಾರಿಯುತವಾಗಿ ಕೆಲಸಮಾಡಿ ಎಂದು ಸಚಿವರು ಸೂಚಿಸಿದರು. ಬಿತ್ತನೆ ಬೀಜ, ರಸಗೊಬ್ಬರಗಳನ್ನು ಬೇಡಿಕೆಗಿಂತಲೂ ಹೆಚ್ಚು ಸರಬರಾಜು ಮಾಡಲಾಗಿದೆ. ಗೊಂದಲ ಇಲ್ಲದಂತೆ ವಿತರಣೆಮಾಡಿ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೆರವನ್ನೂ ಪಡೆಯಿರಿ ಎಂದು ನಿರ್ದೇಶನ ನೀಡದರು.
ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹೊಸ ಆವಿಷ್ಕಾರ, ವಿಜ್ಞಾನ, ತಂತ್ರಜ್ಞಾನಗ ಬಗ್ಗೆ ಅರಿವು ಮೂಡಿಸಿ, ಕೃಷಿ ಜಮೀನುಗಳಿಗೆ ಅವುಗಳನ್ನು ವರ್ಗಾವಣೆ ಮಾಡಿ ಎಂದು ಸಚಿವರು ತಿಳಿಸಿದರು.
ಬೆಳೆ ವಿಮೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ , ನೊಂದಣಿ ಜಾಸ್ತಿ ಮಾಡಿ , ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ಗಮನ ಹರಿಸಿ .ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಿ ಎಂದು ಸಚಿವ ಎನ್ ಚಲುವರಾಯಸ್ವಾಮಿ ಸಲಹೆ ನೀಡಿದರು.
ಹೈಟೆಕ್ ಹಾರ್ವೆಸ್ಟ್ ಹಬ್ ,ಕೃಷಿ ನವೋದ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಇದರಿಂದಾಗುವ ಪರಿಣಾಮಕಾರಿ ಬದಲಾವಣೆಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಿ ಎಂದು ಅವರು ಹೇಳಿದರು.
ಸುಸ್ಥಿರ ,ಸಮಗ್ರ ಕೃಷಿ ಬಗ್ಗೆ ತರಬೇತಿ, ಮಾರ್ಗದರ್ಶನ ನೀಡಿ ಬಜೆಟ್ ನಲ್ಲಿ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಿ ಎಂದು ಚಲುವರಾಯಸ್ವಾಮಿ ನಿರ್ದೇಶನ ನೀಡಿದರು.
ಕೃಷಿ ಆಯುಕ್ತರಾದ ವೈ. ಎಸ್ ಪಾಟೀಲ್, ಜಲಾನಯನ ಇಲಾಖೆ ಆಯುಕ್ತರಾದ ಗಿರೀಶ್, ನಿರ್ದೇಶಕರಾದ ಪದ್ಮಯ್ಯನಾಯಕ್,ಕೃಷಿ ನಿರ್ದೇಶಕರಾದ ಡಾ ಜಿ.ಟಿ ಪುತ್ರ ಅಪರ ನಿರ್ದೇಶಕರಾಸ ವೆಂಕಟರಮಣ ರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ