ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 72ನೇ ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಹಿಡಿದ ಸಂಚಾರಿ ಪೊಲೀಸರು, ಆತನಿಗೆ ತರಬೇತಿ ನೀಡಿ, ತರಬೇತಿ ಪಡೆದ ಬಗ್ಗೆ ಪ್ರಮಾಣ ಪತ್ರವನ್ನೂ ನೀಡಿ ಕಳಿಸಿದ್ದಾರೆ.
ಈ ಕುರಿತು ಡಿಸಿಪಿ ವಿಕ್ರಂ ಅಮಟೆ ಟ್ವೀಟ್ ಮಾಡಿದ್ದಾರೆ. ಆರೀಫ್ ಜಮಾದಾರ್ (28) ಎನ್ನುವ ವ್ಯಕ್ತಿ ಒಟ್ಟೂ 72 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಪೊಲೀಸರ ಗಮನಕ್ಕೆ ಬಂದಿದೆ. 72 ಬಾರಿ ಸೇರಿ ಒಟ್ಟೂ 18800 ರೂ ದಂಡ ಕಟ್ಟಿದ್ದಾನೆ.
ಪ್ರತಿ ಬಾರಿ ಹಿಡಿದಾಗಲೂ ದಂಡ ಕಟ್ಟಿ ಹೋಗುತ್ತಾನೆ. ಮತ್ತೆ ಅದೇ ಅಥವಾ ಬೇರೆ ಮಾದರಿಯ ನಿಯಮ ಉಲ್ಲಂಘನೆ ಮಾಡುತ್ತಾನೆ. ಹೆಲ್ಮೆಟ್ ಧರಿಸದಿರುವುದು ಹೆಚ್ಚಿನ ಸಂದರ್ಭದಲ್ಲಿ ಕಂಡುಬಂದಿದೆ. ಜೊತೆಗೆ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿರುವುದು, ಒನ್ ವೇ ಸಂಚಾರ ನಿಯ ಉಲ್ಲಂಘನೆ ಇತ್ಯಾದಿ ಕೇಸ್ ಗಳಿವೆ ಎಂದು ಡಿಸಿಪಿ ವಿಕ್ರಂ ಅಮಟೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
2019 -20ರ ಅವಧಿಯಲ್ಲಿ ಈ ಎಲ್ಲ ಕೇಸ್ ಗಳು ದಾಖಲಾಗಿವೆ.
ಮೈಸೂರಲ್ಲೊಬ್ಬ 180 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ವಿಕ್ರಂ ಅಮಟೆ ನೆನಪಿಸಿಕೊಂಡರು. ಆತ ದಂಡ ಕಟ್ಟಲಾಗದೆ ವಾಹನವನ್ನೇ ಬಿಟ್ಟು ಹೋಗಿದ್ದನಂತೆ. ನಂತರ ವಾಹನವನ್ನು ಹರಾಜು ಹಾಕಿ ದಂಡ ಭರ್ತಿ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಗುರುವಾರ ಆರಿಫ್ ಜಮಾದಾರ್ ಗೆ ದಂಡೆ ವಿಧಿಸಿ, ಸಂಚಾರ ನಿಯಮ ಉಲ್ಲಂಘಿಸದೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಕುರಿತು ತರಬೇತಿ ನೀಡಲಾಯಿತು. ಜೊತೆಗೆ ತರಬತಿ ಪಡೆದ ಬಗ್ಗೆ ಪ್ರಮಾಣ ಪತ್ರವನ್ನೂ ಕೊಡಲಾಗಿದೆ.
ಇನ್ನು ಮುಂದೆ ಆತ ಹೇಗೆ ನಡೆದುಕೊಳ್ಳುತ್ತಾನೆ ನೋಡಬೇಕಿದೆ.
72 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಗಾಡಿಯನ್ನು ಹಿಡಿದು ದಂಡವನ್ನು ವಿಧಿಸಲಾಗಿ, ಸದರಿ ಚಾಲಕನಿಗೆ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ತರಬೇತಿಯನ್ನು ನೀಡಲಾಗಿದೆ. pic.twitter.com/sBzjJwHtUv
— DCP L&O Belagavi City (@DCP_LO_Belagavi) January 7, 2021
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ