ಕಣ್ಮನ ಸೆಳೆದ ಪಥಸಂಚಲನ, ಸಿಆರ್ ಪಿ ಎಫ್ ಮಹಿಳಾ ಸಿಬ್ಬಂದಿಗಳ ಬೈಕ್ ಸಾಹಸ
ಪ್ರಗತಿವಾಹಿನಿ ಸುದ್ದಿ: 75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು.
ರಾಷ್ಟ್ರಪತಿ ಭವನಿಂದ ಆಗಮಿಸಿದ ದ್ರೌಪದಿ ಮುರ್ಮು ಅವರನ್ನು ಈ ಬಾರಿ ವಿಶೇಷ ಕಾರಿನ ಬದಲಾಗಿ ಸಾರೋಟಿನಲ್ಲಿ ಕರೆತಂದಿದ್ದು ವಿಶೇಷವಾಗಿತ್ತು. ಕರ್ತವ್ಯ ಪಥದಲ್ಲಿ ವಿಶೇಷ ರಕ್ಷಣಾ ಪಡೆಯೊಂದಿಗೆ ಸಾರೋಟಿನಲ್ಲಿ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಬಳಿಕ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಷ್ಟ್ರಪತಿಗಳ ಗನ್ ಪ್ಲಟೂನ್ ನಿಂದ 21 ಗನ್ ಸಲ್ಯೂಟ್ ಮಾಡಲಾಯಿತು. ಸ್ವದೇಶಿ ನಿರ್ಮಿತ 105 ಎಂಎಂ ಫೀಲ್ಡ್ ಗನ್ ನಿಂದ ಗೌರವ ನೀಡಲಾಯಿತು.
ಬಳಿಕ ಇದೇ ಮೊದಲ ಬಾರಿಗೆ ದೇಶದ ವಿವಿಧ ಜಾನಪದ ಸಂಗೀತ ಸಂಸ್ಕೃತಿ ಸಾರುವ ಆವಾಹನ 112 ಮಹಿಳಾ ಕಲಾವಿದರಿಂದ ಜನಪದ, ಬುಡಕಟ್ಟು ವಾದ್ಯ, 30 ಕಲಾವಿದರಿಂದ ಕರ್ನಾಟಕದ ಡೊಳ್ಲುಕುಣಿತ, 20 ಕಲಾವಿದರಿಂದ ಡೋಲು ಕುಣಿತ, ಮಹಾರಾಷ್ಟ್ರದ ಟಶಾ, ತೆಲಂಗಾಣದ ಡಪ್ಪು ವಾದನ , ನಾಲ್ವರಿಂದ ನಾದಸ್ವರ, ಶಂಖನಾದ, ಕಂಸಾಳೆ, ತುತ್ತೂರಿ ಸೇರಿದಂತೆ ಹಲವು ವಾದ್ಯಗಳು ಮೊಳಗಿತು.
ಬಳಿಕ ಫ್ರೆಂಚ್ ವಿದೇಶಿ ಪಡೆ ಪಥ ಸಂಚಲನ, ಸ್ತಬ್ಧಚಿತ್ರ ಪ್ರದರ್ಶನ, ಸಿಆರ್ ಪಿ ಎಫ್ ಮಹಿಳಾ ಸಿಬ್ಬಂದಿಗಳ ಮೋಟರ್ ಸೈಕಲ್ ಸಾಹಸ, ಯುದ್ಧ ಇಮಾನಗಳ ಸಾಹಸ ಪ್ರದರ್ಶನ ರೋಮಾಂಚನಕಾರಿಯಾಗಿದ್ದವು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸರ್ಕಾರದ ಸಚಿವರು, ಗಣರಾಜ್ಯೋತ್ಸವದ ಅತಿಥಿಯಾಗಿ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ