Kannada NewsKarnataka NewsLatest

7ನೇ ಆರ್ಥಿಕ ಗಣತಿ ಕಾರ್ಯಕ್ಕೆ  ಡಾ. ಎಸ್.ಬಿ.ಬೊಮ್ಮನಹಳ್ಳಿ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಆರ್ಥಿಕ ಗಣತಿ ಕಾರ್ಯವನ್ನು ಪ್ರಪ್ರಥಮ ಬಾರಿಗೆ ಸಾಮಾನ್ಯ ಸೇವಾ ಕೇಂದ್ರಗಳಿಂದ ಕೈಕೊಳ್ಳಲಾಗುತ್ತಿದ್ದು, ೭ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯಾಚರಣೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಕೃಷಿ ಹಾಗೂ ಕೃಷಿಯೇತರ ಉದ್ಯಮಗಳ ಪಟ್ಟಿಯನ್ನು ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ತಯಾರಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು.
೭ನೇ ಆರ್ಥಿಕ ಗಣತಿ ಕಾರ್ಯಕ್ಕೆ ಬುಧವಾರ (ಡಿ.೧) ಜಿಲ್ಲಾಧಿಕಾರಿಗಳು, ಜಿಲ್ಲೆಯಾದ್ಯಂತ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.
ಆರ್ಥಿಕ ಗಣತಿಯಲ್ಲಿ ಗಣತಿದಾರರು ತಮಗೆ ನಿರ್ದಿಷ್ಟ ಪಡಿಸಿದ, ಗಡಿಯೊಳಗೆ ಬರುವ ಪ್ರತಿ ಮನೆ, ಕಟ್ಟಡಗಳಿಗೂ ಭೇಟಿ ನೀಡುವುದರ ಮೂಲಕ ಅಲ್ಲಿ ನಡೆಯುವ ಉದ್ಯಮ ಅಥವಾ ವ್ಯಾಪಾರ ಘಟಕಗಳ, ಮಾಲೀಕರ ಲಿಂಗವಾರು, ಸಾಮಾಜಿಕ ಪಂಗಡವಾರು ಮಾಹಿತಿಯನ್ನು, ಉದ್ಯಮವಾರು ಕೆಲಸಗಾರರ ಮಾಹಿತಿ, ಉದ್ಯಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಯನ್ನು ಕಲೆ ಹಾಕುತ್ತಾರೆ.
ಮಾಹಿತಿಯನ್ನು ವಿವಿಧ ಅಭಿವೃಧ್ದಿ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಲು ಮಾತ್ರ ಉಪಯೋಗಿಸಲಾಗುತ್ತಿದ್ದು, ಎಲ್ಲ ಸಂಗ್ರಹಿಸಿದ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.

ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಅವರು ನೇಮಿಸಿದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಜನಸಾಮಾನ್ಯರೊಂದಿಗೆ ಸೌಹಾರ್ದಯುತವಾಗಿ ಸಂವಹನ ನಡೆಸಿ ಅಪೇಕ್ಷಿತ ಮಾಹಿತಿಯನ್ನು ಸಂಗ್ರಹಿಸಲು ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಿದರು.

ಗಣತಿ ಕಾರ್ಯವನ್ನು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಜಿಲ್ಲೆಯಾದ್ಯಂತ ನಿರ್ವಹಿಸಿ ಗುಣಮಟ್ಟದ ಅಂಕಿ ಅಂಶಗಳನ್ನು ನಿಗದಿತ ಅವಧಿಯಲ್ಲಿ ಸಂಗ್ರಹಿಸಲು ಸೂಚಿಸಿದರು.
ಈ ಗಣತಿ ಕಾರ್ಯವು ೧ನೇ ಜನವರಿ-೨೦೨೦ ರಿಂದ ೩೧ನೇ ಮಾರ್ಚ ೨೦೨೦ರ ವರೆಗೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜರುಗುತ್ತಿದ್ದು, ಜನಸಾಮಾನ್ಯರು ಕೂಡ ಸಾಮಾನ್ಯ ಸೇವಾ ಕೇಂದ್ರದಿಂದ ನೀಡಲಾದ ಗುರುತಿನ ಚೀಟಿಯೊಂದಿಗೆ ತಮ್ಮ ಮನೆ ಮತ್ತು ಉದ್ಯಮಗಳಿಗೆ ಆಗಮಿಸುವ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದರು.

ಗಣತಿ ಸಂದರ್ಭದಲ್ಲಿ ಕಂದಾಯ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಹಂತದ ಅಧಿಕಾರಿ, ಸಿಬ್ಬಂದಿಯವರಿಂದ ಸಹ ಈ ಗಣತಿ ಕಾರ್ಯದ ಸಂದರ್ಭದಲ್ಲಿ ಸಿ.ಎಸ್.ಸಿ. ಕೇಂದ್ರದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಸೂಕ್ತ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೇಖಾ ಬಿ. ಶೆಟ್ಟರ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪಿ.ಜಿ. ಕುಲಕರ್ಣಿ, ಸ.ನಿ (ಪ್ರ),. ವಿರೇಶ ಪುರಾಣಿಕ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕರು, ಕಿರಣ ಜೋಶಿ, ಸಾಮಾನ್ಯ ಸೇವಾ ಕೇಂದ್ರದ ಸಂಯೋಜಕರು ಹಾಗೂ ಆರ್ಥಿಕ ಗಣತಿ ನಿರ್ವಹಿಸುವ ವಿ.ಎಲ್.ಇ. ಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button