Kannada NewsKarnataka NewsLatest
*ಆಟವಾಡುತ್ತಿದ್ದಾಗ LED ಬಲ್ಬ್ ನುಂಗಿದ 8 ತಿಂಗಳ ಮಗು*

ಪ್ರಗತಿವಾಹಿನಿ ಸುದ್ದಿ: 8 ತಿಂಗಳ ಮಗುವೊಂದು ಆಟವಾಡುತ್ತಿದ್ದಾಗ ಎಲ್ ಇಡಿ ಬಲ್ಬ್ ನುಂಗಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಎಲ್ ಇಡಿ ಬಲ್ಬ್ ನುಂಗಿದ ಮಗು ವಿಪರೀತ ಅಳುತ್ತಿತ್ತು. ಎಷ್ಟೇ ಸಮಾಧಾನ ಮಾಡಿದರೂ ಅಳುವುದನ್ನು ನಿಲ್ಲಿಸುತ್ತಿರಲಿಲ್ಲ. ಇದರಿಂದ ಗಾಬರಿಯಾದ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಖಾಸಗಿ ಆಸ್ಪತ್ರೆ ಇಎನ್ ಟಿ ತಜ್ಞೆ ರಾಜಶ್ರೀ ಹಾಗೂ ವೈದ್ಯ ಖುಶ್ವಂತ್ ಸ್ಕ್ಯಾನಿಂಗ್ ಮಾಡಿದಾಗ ಗಂಟಲಿನಲ್ಲಿ ಸಿಕ್ಕಿ ಬಿದ್ದಿರುವ ಲೋಹದ ಕಡ್ಡಿ ಪತ್ತೆಯಾಗಿದೆ. ಪಿನ್ ನುಂಗಿರಬಹುದು ಎಂದು ಪೋಷಕರು ಭಾವಿಸಿದ್ದರು.
ಬಳಿಕ ವೈದ್ಯರು ಲ್ಯಾರಿಂಗೋಸ್ಕೋಪ್ ಮಾಡಿದಾಗ ಎಲ್ ಇಡಿ ಬಲ್ಬ್ ಪತ್ತೆಯಾಗಿದೆ. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಲ್ ಇಡಿ ಬಲ್ಬ್ ಹೊರತೆಗೆದಿದ್ದಾರೆ. ಸದ್ಯ ಮಗು ಸುರಕ್ಷಿತವಾಗಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.


