*ಬೆಳಗಾವಿ ಬೈಪಾಸ್ ಗೆ 800 ಕೋಟಿ ರೂ.* *ಪ್ರಭಾಕರ ಕೋರೆ ಸನ್ಮಾನ ಕಾರ್ಯಕ್ರಮದಲ್ಲಿ ಗಡ್ಕರಿ ಘೋಷಣೆ* *ಇನ್ನು ಮುಂದೆ ಪೆಟ್ರೋಲ್ ಪಂಪ್ ಬದಲು ಎಥೆನಾಲ್ ಪಂಪ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಬೈಪಾಸ್ ಗೆ 800 ಕೋ.ರೂ ನೀಡಲಾಗುವುದು. ಗೋವಾ- ಹೈದರಾಬಾದ್ ರಸ್ತೆ ಅಭಿವೃದ್ಧಿಗೆ ಅನುದಾನವಿದ್ದು, ಯಾವುದೇ ಕ್ಷೇತ್ರ ಹಿಂದೆ ಬೀಳಲು ಬಿಡುವುದಿಲ್ಲ ಎಂದು ಕೇಂದ್ರ ಹೆದ್ದಾರಿ ಹಾಗೂ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ನಿಪ್ಪಾಣಿಯಲ್ಲಿ ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಶಾತಾಯಿ ಅವರಿಗೆ ನಾಗರಿಕ ಸನ್ಮಾನ ನೀಡಿ ಹಾಗೂ ವಿದ್ಯಾಸಂವರ್ಧಕ ಮಂಡಳವು ನೂತನವಾಗಿ ನಿರ್ಮಿಸಿರುವ ಎಂಬಿಎ, ಎಂಸಿಎ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡದಲ್ಲಿ ಎಲ್ಲರಿಗೂ ನಮಸ್ಕರಿಸಿ ಭಾಷಣ ಪ್ರಾರಂಭಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಗಡಕರಿ ಅವರು, ದೇಶದ ಪ್ರತಿಯೊಂದು ಭಾಗದಲ್ಲಿ ಸಂತೋಷವನ್ನು ಉಂಟು ಮಾಡುವುದು ನಮ್ಮ ಉದ್ದೇಶವಾಗಿದ್ದು, ಆರ್ಥಿಕ ಪರಿಸ್ಥಿತಿ ಸುಧಾರಣೆ, ಕುಡಿಯುವ ನೀರು, ಉದ್ಯೋಗ, ಆರೋಗ್ಯ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡುವುದಾಗಿದೆ. ಈ ಭಾಗದಲ್ಲಿ ಕೇವಲ ಕಬ್ಬು ಬೆಳೆಯಿಂದ ಆರ್ಥಿಕ ಸ್ಥಿತಿ ಬದಲಾಗಿದೆ. ರೈತರ ಕಲ್ಯಾಣ ಮಾಡಬೇಕಾಗಿದೆ. ಅಭಿವೃದ್ಧಿ ದರ ದೇಶದಲ್ಲಿ ತಯಾರಿಕಾ ವಲಯದಲ್ಲಿದೆ. ಸೇವಾ ವಲಯದಲ್ಲಿದೆ. ಆದರೆ 14 % ಮಾತ್ರ ಕೃಷಿಯಿಂದ ಬರುತ್ತಿದೆ. ಗಾಂಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿದ್ದಾಗ 70 % ಜನ ಗ್ರಾಮೀಣ ಪ್ರದೇಶದಲ್ಲಿದ್ದರು, ಇಂದು ಇವರಲ್ಲಿ ಶೇ. 30 ರಷ್ಟು ಜನ ನಗರಗಳತ್ತ ವಲಸೆ ಹೋಗಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಆರೋಗ್ಯ ಬಹಳ ಹಿಂದುಳಿದಿದೆ. ಕಟ್ಟಡವಿದ್ದರೆ ಶಿಕ್ಷಕರಿಲ್ಲ, ಮೊದಲ ಬಾರಿಗೆ ಡೈರಿ ಮಾಡಿದಾಗ ಅವಶ್ಯ ಸೌಲಭ್ಯ ಸಿಗದೇ ಬಂದ್ ಆಯಿತು. ಮಾರುಕಟ್ಟೆ ದರ ಹೆಚ್ಚು ಆದರೆ ಉತ್ಪಾದನೆಗೆ ತಕ್ಕಂತೆ ದರವಿಲ್ಲ. ಗ್ರಾಮೀಣದಲ್ಲಿ ಸೌಲಭ್ಯಗಳು ಸಿಗದಿದ್ದರೆ ಇದೆಲ್ಲವೂ ಅಸಾಧ್ಯ. ಆತ್ಮ ನಿರ್ಭರ ಭಾರತದಂತೆ ಭಾರತ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ನಿಮ್ಮ ಜಿಲ್ಲೆಗಳಲ್ಲಿ ಸಮೃದ್ದಿ ಇದೆ. ಬಡತನ ಕಡಿಮೆಯಾಗಿ ಸಮೃದ್ದತೆ ಬರಬೇಕು. ಸಹಕಾರ ಕೃಷಿಯಲ್ಲಿ ಕ್ರಾಂತಿಯಾದರೆ ಆರ್ಥಿಕತೆ ಬೆಳೆಯುತ್ತದೆ ಎಂದು ಗಡ್ಕರಿ ಹೇಳಿದರು.
ಶಿಕ್ಷಣವೂ ಸುಲಭವಾಗಿ ಸಿಗಬೇಕು. ಅದಕ್ಕೆ ಇನ್ನೊವೇಶನ್ ಭವಿಷ್ಯ ರೂಪಿಸಲು ಬುದ್ದಿಮತ್ತೆ ಅವಶ್ಯ. ಕಳೆದ 70 ವರ್ಷಗಳ ಹಿಂದೆ ಎಷ್ಟು ಕಾಲೇಜುಗಳಿದ್ದವು, ಈಗ ಎಷ್ಟಿದೆ? ಒಳ್ಳೆಯ ಶಿಕ್ಷಣ ನೀಡಬೇಕು. ಕೇವಲ ಹಣ ಗಳಿಸುವುದಲ್ಲ. ಅದೇ ಊರಿನಲ್ಲಿ ಇದ್ದು ಉದ್ಯಮಿಯಾಗಬೇಕು. ಬೆಳಗಾವಿ – ಕೊಲ್ಲಾಪುರ ಎಲ್ಲೇ ಇರಲಿ ಅಭಿವೃದ್ಧಿಯಾಗಬೇಕು ಎಂದ ಅವರು, 14 ಲಕ್ಷ ವೈದ್ಯರ ಕೊರತೆ ಭಾರತದಲ್ಲಿದೆ. ಪ್ರಭಾಕರ ಕೋರೆ ಈ ಭಾಗದ ಅಭಿವೃದ್ಧಿಗೆ ಅವಶ್ಯವಿರುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಆರ್ಥಿಕ ಪ್ರಗತಿಗೆ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಭಾರತದಲ್ಲಿ ಇಂಜಿನಿಯಿರಿಂಗ್ ಕಲಿಯುವ ವಿದ್ಯಾರ್ಥಿಗಳು ಗಣಿತದಲ್ಲಿ ಪರಿಣಿತಿ ಹೊಂದಿದ್ದಾರೆ. ಇಲ್ಲಿನ ಯುವಕರು ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಹೆಸರು ಗಳಿಸುತ್ತಾರೆ ಎಂದು ಹೇಳಿದರು.
ಇಂಧನಕ್ಕೆ ಶೇ.25 ರಷ್ಟು ಎಥೆನಾಲ್ ಕೂಡಿಸಿದರೆ, 2.5 ಲಕ್ಷ ಲೀಟರ್ ಎಥೆನಾಲ್ ಅವಶ್ಯವಿದೆ. ಈಗ ಅದು ಸಾಧ್ಯವಾಗುತ್ತಿದೆ. ಗೋದಿ, ಗೊಂಜಾಳ, ಬಾಂಬೂಗಳಿಂದಲೂ ಕೂಡ ಎಥೆನಾಲ್ ತಯಾರಿಸಲಾಗುತ್ತಿದೆ. ನನ್ನ ಹತ್ತಿರವಿರುವ ಟೊಯೋಟಾ ಗಾಡಿ ಸಂಪೂರ್ಣ ಎಥೆನಾಲ್ ನಲ್ಲಿ ಸಂಚರಿಸುತ್ತದೆ. 25 ₹ ಗೆ 1 ಲೀ. ಎಥೆನಾಲ್ ಇದೆ. ಮುಂಬರುವ ಎಲ್ಲ ವಾಹನಗಳು ಎಥೆನಾಲ್ ನಿಂದ ಸಂಚರಿಸಲಿವೆ. ಪೆಟ್ರೋಲ್ ಪಂಪ್ ಬದಲು ಎಥೆನಾಲ್ ಪಂಪ್ ಗಳು ಇನ್ನು ಕೆಲವೇ ವರ್ಷಗಳಲ್ಲಿ ಬರಲಿವೆ. ಗೋವಿನ ಜೋಳದಿಂದ ಎಥೆನಾಲ್ ತಯಾರಿಕೆಯಿಂದ ಅದಕ್ಕೆ ಬೆಲೆ ಬಂದಿದೆ. ರೈತರನ್ನು ಅಭಿವೃದ್ಧಿಗೊಳಿಸುವುದೇ ಇದರ ಉದ್ದೇಶ. ರೈತರ ಹತ್ತಿರ ಹಣವಿದ್ದರೆ ಎಲ್ಲ ಕ್ಷೇತ್ರಗಳಲ್ಲೂ ಆರ್ಥಿಕ ಪ್ರಗತಿ ಆಗಲಿದೆ. 400 ಯುನಿಟ್ ಬಾಯೊ ಸಿಎನ್ ಜಿ ತಯಾರಿಸುತ್ತಿವೆ. ಒಂದು ಕೀ.ಮೀ ಬೈಕ್ ಓಡಿದರೆ ಪೆಟ್ರೋಲ್ 2.5 ರೂ. ಅದೇ ಸಿಎನ್ ಜಿ. ಆದರೆ ಕೇವಲ 1 ರೂ. ಜೈವಿಕ ತಂತ್ರಜ್ಞಾನ ಎನರ್ಜಿಯಾಗಿ ರೂಪಿಸಬೇಕಾಗಿದೆ ಎಂದು ಗಡ್ಕರಿ ಹೇಳಿದರು.
ಡಿಗ್ರಿ ಜೊತೆಗೆ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅದಕ್ಕೆ ಅವಶ್ಯವಿರುವ ತರಬೇತಿ ನೀಡುವ ಕಾರ್ಯವನ್ನು ಮಹಾವಿದ್ಯಾಲಯಗಳು ಮಾಡಬೇಕು. ವಾಯುಮಾಲಿನ್ಯ ಕಡಿಮೆಯಾಗಿ ರೈತರ ಉದ್ದಾರವಾಗಲಿದೆ. ನಾಗಪುರದಲ್ಲಿ ಕಸದಿಂದ ಬಯೋಗ್ಯಾಸ್ ತಯಾರಿಸಲಾಗುತ್ತಿದೆ. 88 ಲಕ್ಷ ಟನ್ ಎವಿಯೇಶನ್ ತಯಾರು ಮಾಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಮತ್ತು ಕೊಲ್ಲಾಪುರ ಎವಿಯೇಶನ್ ಬಯೋಪ್ಯೂಲ್ ತಯಾರಿಸುವ ಜಿಲ್ಲೆಗಳಾಗಿ ಗುರುತಿಸಿಕೊಳ್ಳಲಿವೆ ಎಂದರು.
ಕೇಂದ್ರ ಗಣಿ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸುವರ್ಣ ಪಥ ನಿರ್ಮಾಣ ಶುರುವಾದದ್ದು ಪ್ರಧಾನಿಯಿಂದ. ಆದರೆ, ಗ್ರಾಮ ಸಡಕ್ ಯೋಜನೆ ಗಡ್ಕರಿ ಅವರಿಂದ ಪ್ರಾರಂಭವಾಯಿತು. ಸಿಂಗಲ್ ಪಥದಿಂದ ಅನೇಕ ಜೀವ ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಪ್ರಧಾನಿ ವಾಜಪೇಯಿ ಅವರು ಗಡ್ಕರಿ ಅವರ ಮೇಲೆ ಜವಾಬ್ದಾರಿ ಇಟ್ಟರು. ಮಹಾರಾಷ್ಟ್ರ ಕ್ಕೆ ಹತ್ತಿರವಾಗಿರುವ ಇಲ್ಲಿ ಸಕ್ಕರೆ ಮತ್ತು ಎಥೆನಾಲ್ ಬಗ್ಗೆ ರೈತರು ಆಸಕ್ತಿ ಹೊಂದಿದ್ದು, ಅದಕ್ಕೆ ತಕ್ಕಂತೆ ಇಲ್ಲಿ ಉತ್ಪಾದನೆಯಾಗುತ್ತಿದೆ. ಅನೇಕ ವರ್ಷಗಳಿಂದ ಬ್ರೆಜಿಲ್‌ನಲ್ಲಿ ಎಥೆನಾಲ್ ಸಾಕಷ್ಟು ಬಳಕೆಯಾಗುತ್ತಿದೆ. 2002 ರಲ್ಲಿ ಭಾರತದಲ್ಲಿ ತಯಾರಿಸಲಾಗುತ್ತದೆ. ಆದರೆ 2014 ರ ನಂತರ ಬಹುದೊಡ್ಡ ಕ್ರಾಂತಿಯಾಗಿದೆ. 2024ರ ಪೂರ್ವದಲ್ಲಿ 1523 ಕೋ.ಲೀ.ಎಥೆನಾಲ ತಯಾರಿಸಲಾಗಿದೆ. ಶೇ.13.5ರಷ್ಟು ಇದ್ದದ್ದನ್ನು 2025ರ ಹೊತ್ತಿಗೆ ಶೇ. 20 ರಷ್ಟು ವಾಹನ ಇಂಧನದಲ್ಲಿ ಬೆರೆಸಿದರೆ, ವಾರ್ಷಿಕ 199 ಸಾವಿರ ಕೋಟಿ ವಿದೇಶ ವಿನಿಮಯ ಉಳಿತಾಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ರಸ್ತೆ ಮತ್ತು ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲು ಕೇಂದ್ರ ಸಚಿವರಿಗೆ ಈಗಾಗಲೇ ಒತ್ತಾಯಿಸಿ, ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಡಾ.ಪ್ರಭಾಕರ ಕೋರೆ ಮಾತನಾಡಿ, ನಿಪ್ಪಾಣಿ ಬಗ್ಗೆ ಅಭಿಮಾನ, ಜನ್ಮಭೂಮಿ ಅಂಕಲಿ, ಆದರೆ ಕರ್ಮಭೂಮಿ ನಿಪ್ಪಾಣಿ. ತಂಬಾಕು ಬೆಳೆಗಾರರು ಮತ್ತು ಮಾರಾಟಗಾರರ ಫೆಡರೇಶನ್ ಸ್ಥಾಪಿಸಿ ಇಲ್ಲಿನ ಜನರಿಗೆ ಅನುಕೂಲ ಮಾಡಲಾಗಿದೆ. ರಾಜಕಾರಣದಿಂದ ದೂರ ಉಳಿದ ಕಾರಣ ಸಮಾಜ ಸೇವೆ ಗೈಯಲು ನನಗೆ ಅನುಕೂಲವಾಯಿತು. ಚಂದ್ರಕಾಂತ ಕೋಠಿವಾಲೆ ಅವರು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಪ್ರಜಾಪ್ರಭುತ್ವ ತಳಹದಿಯಲ್ಲಿ ಸಂಸ್ಥೆ ನಡೆಯುತ್ತಿದೆ. ಕಳೆದ 40 ವರ್ಷಗಳಿಂದ ಕಾರ್ಯಾಧ್ಯಕ್ಷನಾಗಿ, ಹಲವು ರಾಜಕೀಯ ಧುರೀಣರನ್ನು ಹುಟ್ಟು ಹಾಕಿದ ಸಂಸ್ಥೆ ಕೆಎಲ್ ಇ ಎಂದರು.
ಮುಂಬಯಿಯಲ್ಲಿ ಅತ್ಯಾಧುನಿಕ ಕಟ್ಟಡದೊಂದಿಗೆ ಮಹಾವಿದ್ಯಾಲಯ ಇನ್ನು ಕೆಲವೇ ದಿನಗಳಲ್ಲಿ ಸೇವೆಗೆ ಅರ್ಪಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ರಾಜಕಾರಣಿ ನಿತಿನ್ ಗಡ್ಕರಿ ಅವರು. ಕಳೆದ ಹತ್ತು ವರ್ಷಗಳಲ್ಲಿ ರಸ್ತೆ ಕ್ರಾಂತಿ ಮಾಡಿದ್ದಾರೆ. ಕೆಲಸವಾಗದಿದ್ದರೆ ರಾಜೀನಾಮೆ ನೀಡಿ ಮನೆಗೆ ನಡೆಯುವೆ ಎನ್ನುವ ವ್ಯಕ್ತಿ. ಗೋಟೂರದಿಂದ ಕಾಗವಾಡ ರಸ್ತೆ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಮುಂದಿನ ವರ್ಷ ಕೃಷ್ಣಾ ನದಿಯಲ್ಲಿ ಸೇತುವೆ ಮುಳುಗದೆ ಸುಗಮ ರಸ್ತೆ ಸಂಚಾರ ಸಾಧ್ಯ. ಚಿಕ್ಕೋಡಿ ಬೈಪಾಸ್ ರಸ್ತೆಗೆ ಅನುಮೋದನೆ, ಹುಬ್ಬಳ್ಳಿ ರಿಂಗ್ ರೋಡ್, ಹುಬ್ಬಳ್ಳಿ – ಗದಗ ರಸ್ತೆ. ಬೆಳಗಾವಿ – ಕೊಲ್ಲಾಪುರ – ಕರಾಡ ರೇಲ್ವೆ ಯೋಜನೆಗೆ ಗಮನ ಕೊಡಿ. ರಸ್ತೆಯೊಂದಿಗೆ ಈ ಭಾಗದ ರೇಲ್ವೆ ಯೋಜನೆಗಳಿಗೆ ಆದ್ಯತೆ ನೀಡಿ. ಪುಣೆಗೆ ಒಳ್ಳೆಯ ರೇಲ್ವೆ ಸಂಪರ್ಕ ಕಲ್ಪಿಸಿ ಎಂದು ಹೇಳಿದರು.
ಶಾಸಕರಾದ ಶಶಿಕಲಾ ಜೋಲ್ಲೆ, ಅರವಿಂದ ಬೆಲ್ಲದ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ಗಣೇಶ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಉತ್ತಮ ಪಾಟೀಲ, ಜಗದೀಶ ಕವಟಗಿಮಠ ಮುಂತಾದವರು ಉಪಸ್ಥಿತರಿದ್ದರು. ಚಂದ್ರಕಾಂತ ಕೋಠಿವಾಲೆ ಸ್ವಾಗತಿಸಿದರು. ಕೆಎಲ್ ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ