Latest

89 ವರ್ಷದಿಂದ ಸಿದ್ದಗಂಗಾ ಮಠದ ಆರಾಧ್ಯ ದೈವ ಎನಿಸಿರುವ ಶಿವಕುಮಾರ ಸ್ವಾಮಿಗಳು

 

   ಪ್ರಗತಿವಾಹಿನಿ ಸುದ್ದಿ, ತುಮಕೂರು

ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಕರ್ನಾಟಕ ರತ್ನ, ಪದ್ಮಭೂಷಣ, ಭಕ್ತರ ಪಾಲಿನ ಆರಾಧ್ಯ ದೈವ ಡಾ.ಶಿವಕುಮಾರ ಸ್ವಾಮಿಗಳು ಕಳೆದ 89 ವರ್ಷಗಳಿಂದ ತುಮಕೂರು ಸಿದ್ದಗಂಗಾಮಠವನ್ನು ಮುನ್ನಡೆಸುತ್ತಿದ್ದಾರೆ. 

 

ಶಿವಕುಮಾರ ಸ್ವಾಮಿಗಳು ಮೂಲತಹ ಮಾಗಡಿ ತಾಲೂಕಿನ ವೀರಾಪುರ ಗ್ರಾಮದವರು. ಹೊನ್ನೇಗೌಡ ಮತ್ತು ಗಂಗಮ್ಮನವರ 13ನೇ ಮಗನಾಗಿ ಏಪ್ರಿಲ್ 1, 1908ರಲ್ಲಿ ಶಿವಣ್ಣ ಜನಿಸಿದ್ದಾರೆ. ಹೊನ್ನೆಗೌಡ ದಂಪತಿಗೆ ಎಂಟು ಜನ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು. ಎಲ್ಲರಿಗಿಂತಲೂ ಕಿರಿಯವರಾದ ಶಿವಣ್ಣನವರೆಂದರೆ ತಂದೆ ತಾಯಿಗಳಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠ ದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು. ಅನಂತರ ಪ್ರಾಥಮಿಕ ಶಾಲೆಗಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಶಾಲಾ ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಡ ಶಿವಣ್ಣ ಅನಂತರ  ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದರು. ೧೯೨೨ರಿಂದ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ೧೯೨೬ರಲ್ಲಿ ಮೆಟ್ರಿಕ್ಯುಲೇಷನ್ ಗಳಿಸಿದರು.

೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ  ಉದ್ದಾನ ಶಿವಯೋಗಿಗಳವರ ಪರಿಚಯ ಆಯಿತು. ಇದೇ ವರ್ಷ  ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ‘ರಾವ್ ಬಹದ್ದೂರ್ ಧರ್ಮಪ್ರವರ್ತ ಶ್ರೀ ಗುಬ್ಬಿ ತೋಟದಪ್ಪ ಧರ್ಮ ಛತ್ರ’ ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿವಣ್ಣನವರು ಶಿಸ್ತುಬದ್ಧವಾದ ಕಟ್ಟು ನಿಟ್ಟಾದ ವಿದ್ಯಾರ್ಥಿ ಜೀವನ ನಡೆಸಿದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟ ಮುಂದುವರಿದೇ ಇತ್ತು. ಹಿರಿಯ ಗುರುಗಳಾದ ಶ್ರೀ ಉದ್ಧಾನ ಸ್ವಾಮಿಜಿಗಳ ಹಾಗೂ ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದರು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠಕ್ಕೆ ಬಂದು ಹೋಗಿ ಮಾಡುತ್ತಿದ್ದರು.

 ಡಾ. ಶಿವಕುಮಾರ ಸ್ವಾಮಿಗಳು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿ. ೧೨ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ “ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀಗಳು, ಮಾರ್ಚ್ ೩೧೯೩೦ರಲ್ಲಿ ಇವರು ಶ್ರೀಮಠದ ಜವಾಬ್ದಾರಿಯನ್ನು ಹೊತ್ತು ಅಂದಿನಿಂದ ನಿರಂತರವಾಗಿ ಮಠ, ಯಾವುದೋ ಒಂದು ಧರ್ಮಕ್ಕೆ ಸ್ಥೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿರುವ ಸ್ವಾಮೀಜಿಯವರು  ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಹದಿನೈದು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನ್ನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದಾರೆ.

ಶ್ರೀ ರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಅವರ ಕ್ರಿಯಾ ಸಮಾಧಿ ಕಾರ್ಯಕ್ಕೆ ಆಗಮಿಸಿದ್ದ ಶಿವಣ್ಣನವರ ಕಡೆ ಉದ್ಧಾನ ಸ್ವಾಮಿಜಿಗಳ ದೃಷ್ಟಿ ಹರಿಯುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಎಲ್ಲರ ಸಮ್ಮುಖದಲ್ಲಿ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ. ಎಲ್ಲರಂತೆ ಸಾಮಾನ್ಯರಾಗಿ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣನವರು ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿದ ಸನ್ಯಾಸಿಯಾಗಿ ‘ಶ್ರೀ ಶಿವಕುಮಾರ ಸ್ವಾಮಿಜಿ’ಗಳಾಗಿ ಹಿಂದಿರುಗುತ್ತಾರೆ. ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ವಿದ್ಯಾಭ್ಯಾಸ ಮುಗಿದು  ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗುತ್ತಾರೆ. ಮುಂದೆ ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗ ಕ್ಷೇಮದ ಜವಾಬ್ದಾರಿಯೂ ಶ್ರೀಗಳವರಿಗೆ ಹಸ್ತಾಂತರವಾಗುತ್ತದೆ.

ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆದು ವಿದ್ಯಾರ್ಥಿಗಳ ಸನಿವಾಸ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು  ಶ್ರೀ ಉದ್ಧಾನ ಸ್ವಾಮಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆಗಳನ್ನು, ವಿದ್ಯಾರ್ಥಿ ನಿಲಯಗಳನ್ನು, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.

ಪ್ರತಿದಿನ ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಾರೆ.  ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ಧಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಛೇರಿಗೆ ಧಾವಿಸುವ ಶ್ರೀಗಳು ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಾರೆ. ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಾರಲ್ಲದೆ ಇಳಿವಯಸ್ಸಿನಲ್ಲೂ ಧಣಿವರಿಯದೇ ಕಾರ್ಯನಿರತರಾಗಿ “ಕಾಯಕವೇ ಕೈಲಾಸ” ಎಂದು ನುಡಿಯಲ್ಲಿ ಮಾತ್ರ ಹೇಳದೆ ಹಾಗೆಯೇ ನಡೆಯಲು ತೋರಿಸಿಕೊಟ್ಟಿದ್ದಾರೆ.

ಸ್ವಾಮೀಜಿಯವರ ಜಾತ್ಯಾತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸ್ವಾಮೀಜಿಯವರ ೧೦೦ ನೆ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸ್ವಾಮಿಗಳಿಗೆ ಭಾರತರತ್ನ ನೀಡಬೇಕೆಂದು ಭಕ್ತರಿಂದ ಭಾರೀ ಒತ್ತಡವಿದೆ. ಈಚೆಗೆ ಅವರ ಆರೋಗ್ಯದಲ್ಲಿ ಏರುಪೇರಾದ ನಂತರ ಈ ಒತ್ತಡ ಇನ್ನಷ್ಟು ಹೆಚ್ಚಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button