Latest

9 ರಂದು ಬೆಳಗಾವಿಯಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸದಾಶಿವ ನಗರದ ಚಿಂದೋಡಿಲೀಲಾ ರಂಗಮಂದಿರದಲ್ಲಿ 9ರಂದು ಸಂಜೆ 5.30ಕ್ಕೆ ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ಕಲಾವಿದರು ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.
ಸಂಸ್ಥೆಯ ದಶಮಾನೋತ್ಸವದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ. ಹಿಮ್ಮೇಳದಲ್ಲಿ ದಂತಳಿಕೆ ಅನಂತ ಹೆಗಡೆ, ಹಂಡ್ರಮನೆ ನರಸಿಂಹ ಭಟ್, ಕಬ್ಬಿನಗದ್ದೆ ಪ್ರಮೋದ ಹೆಗಡೆ ಹಾಗೂ ಮುಮ್ಮೇಳದಲ್ಲಿ ಕೃಷ್ಣಮೂರ್ತಿ ತುಂಗಾ, ರವಿ ಮಡೋಡಿ, ಮನೋಜ ಭಟ್, ಶಶಿರಾಜ್ ಸೋಮಯಾಜಿ, ನರಸಿಂಹ ತುಂಗಾ, ಶಶಾಂಕ ಕಾಶಿ, ಶ್ರೀನಿಧಿ ಹೊಳ್ಳ, ಪ್ರದೀಪ ಮಧ್ಯಸ್ಥ ಮತ್ತಿತರರು ಇದ್ದಾರೆ. ಉಚಿತ ಪ್ರವೇಶವಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಯೋಜಕರು ಕೋರಿದ್ದಾರೆ.
ತಂಡದ ಕಿರು ಪರಿಚಯ: ಯಕ್ಷಗಾನ ಕಲೆಯ ಮೇಲಿನ ಅತೀವ ಪ್ರೀತಿ, ಆಸಕ್ತಿಯಿಂದ ಏನಾದರೂ ಸೇವೆ, ಸಾಧನೆ ಮಾಡಬೇಕೆಂಬ ಸದುದ್ದೇಶದಿಂದ ಹುಟ್ಟಿಕೊಂಡ ಸಂಸ್ಥೆಯೇ ಯಕ್ಷ ಸಿಂಚನ. ಅಚ್ಚ ಕನ್ನಡದ ಹೆಮ್ಮೆಯ ಪರಿಪೂರ್ಣ ಕಲೆಯ ಆರಾಧನೆಯಲ್ಲೊಂದು ಅಳಿಲು ಸೇವೆ ಧ್ಯೇಯವಾಕ್ಯದೊಂದಿಗೆ ಆರಂಭವಾದ ಸಂಸ್ಥೆ ಈಗ 10ನೇ ವರುಷಕ್ಕೆ ಕಾಲಿಟ್ಟಿದೆ. ಸಂಸ್ಥೆಯ ಸದಸ್ಯರು ಹಲವಾರು ವೃತ್ತಿಗಳಲ್ಲಿ ದುಡಿಯುತ್ತಿದ್ದರೂ ಯಕ್ಷಗಾನ ವಿಚಾರದಲ್ಲಿ ಸಮಾನಮನಸ್ಕರು. ಸಾಫ್ಟ್‌ವೇರ್ ಇಂಜಿನಿಯರ್, ಅರ್ಚಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹೀಗೆ ವಿಭಿನ್ನ ಕ್ಷೇತ್ರದಲ್ಲಿ ಇದ್ದು, ಬಿಡುವಿನ ವೇಳೆಯಲ್ಲಿ ಯಕ್ಷಗಾನ ಅಭ್ಯಸಿಸಿ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಯಕ್ಷಗುರು ಕೃಷ್ಣಮೂರ್ತಿ ತುಂಗ ಅವರ ಮಾರ್ಗದರ್ಶನ, ನಿರ್ದೇಶನದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. 9 ವರ್ಷಗಳಲ್ಲಿ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿ, ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ಯಕ್ಷಸಿಂಚನ ವಿಶಿಷ್ಟವಾದ ಸ್ಥಾನವನ್ನು ಗಳಿಸಿದೆ. ವೃತ್ತಿ ರಂಗಭೂಮಿಯಲ್ಲೂ ಕಾಣಸಿಗದ ಬಡಗು ತಿಟ್ಟಿನ ಪೂರ್ವರಂಗ, ಒಡ್ಡೋಲಗಗಳಂತಹ ಅಪರೂಪದ ಸಂಪ್ರದಾಯಗಳನ್ನು ಕಲಿತು ಪ್ರದರ್ಶಿಸುತ್ತ ಬಂದಿದ್ದಾರೆ. ಪೌರಾಣಿಕ ಪ್ರಸಂಗಗಳನ್ನೇ ಪ್ರದರ್ಶಿಸುವುದು ತಂಡದ ವೈಶಿಷ್ಟ್ಯ. ಯಕ್ಷಸಿಂಚನ ಕೇವಲ ಪ್ರದರ್ಶನಗಳಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ಯಕ್ಷಗಾನ ಪದ ರಚನೆ ಕಮ್ಮಟ ಆಯೋಜಿಸಿ ಯಕ್ಷಗಾನ ವಿದ್ವಾಂಸರ ಮೆಚ್ಚುಗೆ ಗಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button