Kannada NewsKarnataka NewsLatest
ಬೆಳಗಾವಿಗೆ 9 ಹೈಟೆಕ್ ಬಸ್; ಸುವರ್ಣಸೌಧಕ್ಕೆ ಕಚೇರಿ ಸ್ಥಳಾಂತರ ಸಂಬಂಧ ನಾಳೆ ಚರ್ಚೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಸುವರ್ಣ ವಿಧಾನಸೌಧಕ್ಕೆ ವಿವಿಧ ಇಲಾಖೆಗಳ ಕಚೇರಿ ಸ್ಥಳಾಂತರಕ್ಕೆ ಅಗತ್ಯವಿರುವ ಕನಿಷ್ಠ ಕೊಠಡಿಗಳನ್ನು ನೀಡಲು ಸಭಾಧ್ಯಕ್ಷರಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಈಗ ಸ್ವಲ್ಪ ಹೊತ್ತಿನ ಮೊದಲು ಮಾತನಾಡಿದ ಅವರು, ನಾಳೆ ಬೆಂಗಳೂರಿನಲ್ಲಿ ಈ ಸಂಬಂಧ ನಡೆಯಲಿರುವ ಸಭೆಯಲ್ಲಿ ಚರ್ಚಿಸಿ ಇಲಾಖೆಯ ಕಚೇರಿಯ ಸ್ಥಳಾಂತರ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಗಡಿ, ಭಾಷೆ ಹಾಗೂ ಜಲ ವಿವಾದವನ್ನು ಕೆಲವರು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೆಲ-ಜಲ ಹಿತರಕ್ಷಣೆ ರಾಜೀ ಪ್ರಶ್ನೆಯೇ ಇಲ್ಲ. ನಾಡದ್ರೋಹ ಕೆಲಸ ದೇಶದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿವೆ. ಕೆಲವು ವ್ಯಕ್ತಿ ಮತ್ತು ಸಂಘಟನೆಗಳಿಂದ ಗಡಿ ವಿವಾದ ಕೆಣಕುವ ಕೆಲಸ ನಡೆುತ್ತಿದೆ ಎಂದರು.
ಪೌರತ್ವ ಕಾಯ್ದೆ ತಿದ್ದುಪಡಿಯ ಉದ್ಧೇಶ ನೆರೆಯ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವುದಾಗಿದ್ದು, ಈ ವಿಷಯ ಸಂಬಂಧ ನನಗೆ ಬಂದಿರುವ ಜೀವ ಬೆದರಿಕೆಗೆ ಹೆದರುವುದಿಲ್ಲ. ಈಗಾಗಲೇ ದೂರು ನೀಡಲಾಗಿದೆ ಎಂದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ
ಉದ್ಧವ ಠಾಕ್ರೆ ಒಬ್ಬ ಮುಖ್ಯಮಂತ್ರಿಯಾಗಿ ಗಡಿ ವಿವಾದ ಬಗ್ಗೆ ಅವಿವೇಕತನದ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ. ಗಡಿ ವಿವಾದ ಮುಗಿದ ಅಧ್ಯಾಯದ ಬಗ್ಗೆ ವಿನಾಕಾರಣ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಪರಮೋಚ್ಛ ನ್ಯಾಯಾಲಯದಲ್ಲಿ ಪ್ರಕರಣವಿದೆ. ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದೂ ಅವರು ಹೇಳಿದರು.
ಬೆಳಗಾವಿಗೆ ಒಂಬತ್ತು ನೂತನ ಬಸ್
ಹೈಟೆಕ್ ಬಸ್ ನಿಲ್ದಾಣ: ಜೂನ್ ಅಂತ್ಯದೊಳಗೆ ಪೂರ್ಣ
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಬೆಳಗಾವಿಯಲ್ಲಿ ಇಂದು ಒಂಬತ್ತು ನೂತನ ಬಸ್ ಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣ ಆವರಣದಲ್ಲಿ ನೂತನ ಬಸ್ ಗಳಿಗೆ ಪೂಜೆ ನೆರವೇರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿದರು.
ನಂತರ ಬಸ್ ನಿಲ್ದಾಣ ಕಾಮಗಾರಿಯ ಪರಿವೀಕ್ಷಣೆ ಕೈಗೊಂಡ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾಂತೇಶ ದೊಡಗೌಡ್ರ, ಮಹೇಶ್ ಕುಮಠಳ್ಳಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತಿತರರು ಉಪಸ್ಥಿತರಿದ್ದರು.
ವಾಯವ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್.ಮುಂಜಿ ಅವರು, ಬಸ್ ನಿಲ್ದಾಣದ ಕಾಮಗಾರಿ ಕುರಿತು ಮಾಹಿತಿ ನೀಡಿದರು.
ನೂತನ ಬಸ್ ನಲ್ಲಿ ಡಿಸಿಎಂ ಪ್ರಯಾಣ:
ಕಾರ್ಯಕ್ರಮದ ಬಳಿಕ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು, ನೂತನ ಮಲ್ಟಿ ಎಕ್ಸೆಲ್ ಬಸ್ ನಲ್ಲಿ ಸುವರ್ಣ ವಿಧಾನಸೌಧಕ್ಕೆ ಪ್ರಯಾಣಿಸಿದರು.
ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಅತಿಥಿಗಳು ಬಸ್ ನಲ್ಲೇ ಪ್ರಯಾಣಿಸಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಎಲ್ಲ ಶಾಸಕರು ಬಸ್ ನಲ್ಲಿ ಜತೆಗೆ ತೆರಳಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ