ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರತಿಯೊಬ್ಬರೂ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳು ಮನುಷ್ಯನ ದೈಹಿಕ ಆರೋಗ್ಯ ಉತ್ತಮಗೊಳಿಸುವುದಲ್ಲದೆ, ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಭವಿಷ್ಯವು ಉಜ್ವಲವಾಗುತ್ತದೆ ಎಂದು ಖ್ಯಾತ ಖುರಾಷ ಕ್ರೀಡಾಪಟು ಹಾಗೂ 2018ರ ಏಷಿಯನ್ ಗೇಮ್ಸನ ಕಂಚಿನ ಪದಕ ವಿಜೇತೆ ಮಲಪ್ರಭಾ ಜಾಧವ ಹೇಳಿದರು.
ನಗರದ ಅಂಗಡಿ ಇಂಟರನ್ಯಾಷನಲ್ ಸ್ಕೂಲ್ ನಲ್ಲಿ ಸೋಮವಾರ ನಡೆದ ವಾರ್ಷಿಕ ಕ್ರೀಡಾಕೂಟ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇನ್ನೋರ್ವ ಅತಿಥಿ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಹಾಗೂ ಖುರಾಷ ತರಬೇತುದಾರರಾದ ತ್ರಿವೇಣಿ ಜಿತೇಂದ್ರ ಸಿಂಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆಯ ಹಾಗೂ ದೈಹಿಕ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷೆ ಮಂಗಲಾ ಅಂಗಡಿ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸ್ಕೂಲಿನ ಮುಖ್ಯಾಧ್ಯಾಪಕಿ ಆಶಾ ರಜಪೂತ ತಮ್ಮ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಥಸಂಚಲನ ಹಾಗೂ ವಿವಿಧ ರೀತಿಯ ಕ್ರೀಡೆಗಳನ್ನು ಪ್ರದರ್ಶಿಸಿದರು. ಜ್ಯೋತಿ ಪಾಟೀಲ, ಸಂಧ್ಯಾ ಶಾನಭಾಗ, ಗಿರೀಶ ಕುಲಕರ್ಣಿ, ವಿನಾಯಕ ಜ್ಯೋತಿ, ದೈಹಿಕ ಶಿಕ್ಷಕ ಮಹಾದೇವ ಶಿರಗಾಂವಕರ, ದೈಹಿಕ ನಿರ್ದೇಶಕ ವಿಶಾಂತ ದಮೋಣೆ ಉಪಸ್ಥಿತರಿದ್ದರು.
ರಮಾ ದೇಶಪಾಂಡೆ ಸ್ವಾಗತಿಸಿದರು. ಮೋನಿಕಾ ವಿಲ್ಸನ್ ಹಾಗೂ ರೇಖಾ ರಾಜಗೋಳಕರ ನಿರೂಪಿಸಿದರು. ಮಂಗಳಾ ಕಾಳೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ