Latest

ಚಿಂತೆ ಇಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ…; ಪ್ರವಾಹ ಪರಿಶೀಲನೆ ಸಭೆಯ ವೇಳೆಯೇ ನಿದ್ದೆಗೆ ಜಾರಿದ ಸಚಿವ ಆರ್.ಅಶೋಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟಕ್ಕೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ರಣ ಮಳೆಗೆ ಅಕ್ಷರಶ: ಮುಳುಗಡೆಯಾಗಿದೆ. ಬಡಾವಣೆಗಳು, ರಸ್ತೆ, ಮನೆಗಳು ಜಲಾವೃತಗೊಂಡಿದ್ದು, ಜನರ ಸಂಕಷ್ಟ ಹೇಳತೀರದಾಗಿದೆ. ಜನರ ಸಮಸೆ ಬಗೆಹರಿಸಬೇಕಿದ್ದ ಸಚಿವರು, ಸಂಸದರು ಮಾತ್ರ ಬೇಜವಾಬ್ದಾರಿ ಮೆರೆಯುತ್ತಿದ್ದು, ವಿಪಕ್ಷಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಒಂದೆಡೆ ಮಳೆಯಿಂದ ಬೆಂಗಳೂರು ಮುಳುಗುತ್ತಿದ್ದು, ಜನರು ರಕ್ಷಣೆಗಾಗಿ ಮೊರೆಯಿಡುತ್ತಿದ್ದರೆ ಮತ್ತೊಂದೆಡೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೋಟೆಲ್ ನಲ್ಲಿ ಆರಾಮಾಗಿ ಮಸಾಲೆ ದೋಸೆ ಸವಿಯುತ್ತಿದ್ದಾರೆ, ಇನ್ನೊಂದೆಡೆ ಕಂದಾಯ ಸಚಿವ ಆರ್.ಅಶೋಕ್, ಪ್ರವಾಹ ಪರಿಶೀಲನಾ ಸಭೆಯ ವೇಳೆ ಗಡದ್ದಾಗಿ ನಿದ್ದೆ ಮಾಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸಬೇಕಿದ್ದ ಜನಪ್ರತಿನಿಧಿಗಳೇ ಈ ರೀತಿ ಬೇಜವಾಬ್ದಾರಿ ಮೆರೆದರೆ ಜನರು ಸಂಕಷ್ಟ ಹೇಳಿಕೊಳ್ಳುವುದಾದರು ಯಾರ ಬಳಿ? ಎಂದು ವಿಪಕ್ಷಗಳು ಕಿಡಿಕಾರಿವೆ.

ರಾಜ್ಯದ ಜನ ಮಳೆಯಲ್ಲಿ ಮುಳುಗಿದ್ದಾರೆ, ಸಚಿವರು ನಿದ್ದೆಯಲ್ಲಿ ಮುಳುಗಿದ್ದಾರೆ! ಪ್ರವಾಹ ಪರಿಶೀಲನೆಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವ ಆರ್.ಅಶೋಕ್ ಭರ್ಜರಿ ನಿದ್ದೆ. ‘ಹಲಾಲ್ ಕಟ್’ ಎಂದರೆ ಥಟ್‌ನೆ ಎಚ್ಚರಾಗುತ್ತಾರೆ! ‘ಚಿಂತೆ ಇಲ್ಲದವಗೆ ಸಂತೆಲೂ ನಿದ್ದೆ’ ಎಂಬ ಮಾತು ಸಚಿವರಿಗೇ ಹೇಳಿದ್ದೇನೋ! ಎಂದು ಕಾಂಗ್ರೆಸ್ ಟೀಕಿಸಿದೆ.

ಸಿಎಂ ಬಸವರಾಜ್ ಬೊಮ್ಮಾಯಿಯವರು, ಅಧಿಕಾರದಲ್ಲಿದ್ದು ಕಾಂಗ್ರೆಸ್ ದೂಷಣೆ ಮಾಡುವ ಬದಲು ನಿಮ್ಮವರು ಏನು ಮಾಡ್ತಿದಾರೆ ನೋಡಿಕೊಳ್ಳಲಿ. ಒಬ್ಬ ಸಚಿವರು ಪ್ರವಾಹ ಪರಿಹಾರ ಸಭೆಯಲ್ಲಿ ನಿದ್ದೆ ಮಾಡ್ತಿದ್ದಾರೆ, ಮತ್ತೊಬ್ಬ ಸಂಸದರು ಬೆಣ್ಣೆದೋಸೆ ತಿನ್ನುತ್ತಿದ್ದಾರೆ. ಇನ್ನುಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ, ಇದನ್ನೆಲ್ಲ ಮಾಡಲು ಕಾಂಗ್ರೆಸ್ ಹೇಳಿತ್ತಾ? ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರಿನ ಅವಾಂತರಕ್ಕೆ ಕಾಂಗ್ರೆಸ್‌ನ್ನು ದೂಷಿಸುವ ಸಿಎಂ ಮಾತು ‘ಕುಣಿಲಾರದವರು ನೆಲ ಡೊಂಕು’ ಎನ್ನುವಂತಿದೆ. ಬೆಂಗಳೂರಿಗೆ ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ವಿಶೇಷಣಗಳು ಸಿಕ್ಕಿದ್ದು ಕಾಂಗ್ರೆಸ್ ಶ್ರಮದಿಂದ, ಇದ್ದನ್ನು ಸಿಎಂ ಅರ್ಥ ಮಾಡಿಕೊಳ್ಳಲಿ. ಇಂತಹ ಭವ್ಯ ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ್ದು ನಿಮ್ಮ 50% ಕಮಿಷನ್ ದಾಹ ಅಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದೆ.

ಕಳೆದ ವರ್ಷವೇ ರಾಜಕಾಲುವೆ ಅಭಿವೃದಿಗಾಗಿ ₹1500 ಕೋಟಿ ಘೋಷಿಸಿದ್ದಿರಿ, ಆದರೆ ಕೊಟ್ಟಿದ್ದು ₹400 ಕೋಟಿ ಮಾತ್ರ.
ಅದರಲ್ಲೂ ಈಗ ಟೆಂಡರ್ ಪ್ರಕ್ರಿಯೆ ಶುರು ಮಾಡಿದ್ದೀರಿ. ಈ ವಿಳಂಬ ಮಾಡಲು ಕಾಂಗ್ರೆಸ್ ಹೇಳಿತ್ತೆ? ಉಳಿದ ₹1100 ಕೋಟಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ? ರಾಜಕಾಲುವೆ ಅಭಿವೃದ್ಧಿ ನಿಮಗೆ ಬೇಕಿರಲಿಲ್ಲ ಅಲ್ಲವೇ? ಎಂದು ಪ್ರಶ್ನಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button