ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಗುಣಮಟ್ಟದ ಮೌಲ್ಯಾಧಾರಿತ ಮತ್ತು ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಬದುಕು ಉತ್ತಮವಾಗಿರಲು ಸಾಧ್ಯ ಎಂದು ವಿಶ್ವವಿದ್ಯಾಲಯಗಳ ಸಮಕುಲಾಧಿಪತಿಗಳು ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೆಗೌಡ ಅವರು ಹೇಳಿದರು.
ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೭ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಾಣಿ ಚೆನ್ನಮ್ಮ ವಿವಿಗೆ ಸುಮಾರು ೧೭೦ ಏಕರೆ ಜಾಗ ಅರಣ್ಯ ಇಲಾಖೆಯಿಂದ 15 ದಿನಗಳಲ್ಲಿ ಮಂಜೂರಾಗಲಿದೆ ಎಂದರು.
ವಿಶ್ವವಿದ್ಯಾಲಯದ ಖಾತೆಯಲ್ಲಿ ಈಗಾಗಲೇ ೮೦ ಕೋಟಿ ಹಣವಿದ್ದು ಆಡಿಟೋರಿಯಂ ಹಾಲ್, ಗ್ರಂಥಾಲಯ, ವಸತಿ ನಿಲಯಗಳನ್ನು ಆದಷ್ಟು ಬೇಗನೆ ನಿರ್ಮಾಣ ಮಾಡಲಾಗುವುದು ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ವಾರ್ಥ ತಾಂಡವವಾಡುತ್ತಿದ್ದು, ಅದನ್ನು ಹೊಗಲಾಡಿಸಲು ಉತ್ತಮ ಶಿಕ್ಷಣದ ಅವಶ್ಯಕತೆ ಇದೆ. ಹಾಗಾಗಿ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು.
೧೬ ವಿವಿಯಲ್ಲಿ ಡಾಕ್ಟರೇಟ್ ಪಡೆದ ಹಾಗೂ ವಿಶ್ವದ ಐದು ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ. ಕೆ. ಕಸ್ತೂರಿರಂಗನ್ ಅವರು ಬಂದಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟರು.
ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ ಇಸ್ರೋ ಮಾಜಿ ಅಧ್ಯಕ್ಷರಾದ ಡಾ. ಕೆ. ಕಸ್ತೂರಿರಂಗನ್ ಅವರು ಮಾತನಾಡಿ, ಬೆಳಗಾವಿ ರಾಜ್ಯದ ಅತ್ಯಂತ ಪುರಾತನ ನಗರವಾಗಿದೆ, ಹೆಚ್ಚಿನ ಪ್ರಮಾಣದಲ್ಲಿ ಬಿದಿರು ಬೆಳೆಯುತ್ತಿರುವುದರಿಂದ ವೇಣುಗ್ರಾಮ ಎಂದು ಕರೆಯುತ್ತಿದ್ದರು ಎಂದರು.
ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಮನೋಬಲವನ್ನು, ಸವಾಲುಗಳನ್ನು ಎದುರಿಸುವ ಆತ್ಮಬಲವನ್ನು, ಅವಕಾಶಗಳನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ವಿಶ್ವವಿದ್ಯಾಲಯದಲ್ಲಿ ನೀಡುವ ತರಬೇತಿ ಮತ್ತು ವೃತ್ತಿಪರತೆಯಿಂದ ಅವರನ್ನು ಭವಿಷ್ಯದ ಬದುಕಿಗೆ ಅಣಿಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ, ಶೈಕ್ಷಣಿಕ ನೇತಾರರನ್ನಾಗಿ, ಉದ್ಯಮಿಗಳನ್ನಾಗಿ ರೂಪಿಸುತ್ತಿದೆ ಎಂದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತ ಅಪ್ರತಿಮ ಹೋರಾಟಗಾರರಿಗೆ ಜನ್ಮ ನೀಡಿದ ಸ್ಥಳ ಇದು ಎಂಬುದು ಸಂತೋಷದ ವಿಷಯ. ಅಷ್ಟೇ ಅಲ್ಲದೇ ಬೆಳಗಾವಿಗೆ ಬಾಲಗಂಗಾಧರ ತಿಲಕ, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿದಂತೆ ದೇಶದ ಮಹಾನ್ ವ್ಯಕ್ತಿಗಳು ಭೇಟಿ ನೀಡಿದ್ದು ಸ್ಮರಣೀಯವಾಗಿದೆ ಎಂದರು.
ಬೆಳಗಾವಿ ನಗರವು ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆ ಕೆಲಸವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು.
ಇಬ್ಬರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್:
ಪ್ರಸ್ತುತ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ೭ ನೆಯ ಘಟಿಕೋತ್ಸವದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ವಲಯದಲ್ಲಿ ಸಾಧನೆ ಮಾಡಿದ ವಿಜಯಪುರ ಜಿಲ್ಲೆಯ ಸಿಂದಗಿಯ ಸಾರಂಗ ಮಠದ ಪೀಠಾಧಿಪತಿಗಳಾದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿಯವರಿಗೆ ಹಾಗೂ ಸಾಮಾಜಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಭಾವೇಷ ಭಾಟಿಯಾ ಎನ್ನುವ ಇಬ್ಬರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ವಿಶ್ವ ವಿದ್ಯಾಲಯದ ೭ನೇ ಘಟಿಕೋತ್ಸವದಲ್ಲಿ ಕಲಾ ವಿಭಾಗದಲ್ಲಿ ಆಶಾ ಶಿವಾನಂದ ಮಲಕಪ್ಪನವರ, ವಾಣಿಜ್ಯ ವಿಭಾಗದಲ್ಲಿ ವಿಮಲಕುಮಾರ ತಿಕಮಚಂದ ಬನಸಾಲಿ, ವಿಜ್ಞಾನ ವಿಭಾಗದಲ್ಲಿ ರೆಷ್ಮಾ ತಲಾ ಮೂರು ಬಂಗಾರದ ಪದಕ ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡರು.
ಚಿನ್ನದ ಪದಕ ವಿಜೇತರ ವಿವರ:
ವಿವಿಧ ವಿಭಾಗಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು.
೨೯,೮೨೪ ಸ್ನಾತಕೊತ್ತರ ವಿದ್ಯಾರ್ಥಿಗಳು, ೨,೪೫೭ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ೧೪೧ ಸರ್ಟಿಪಿಕೇಟ್ ಕೋರ್ಸ್ನ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.
೧೦ ಸ್ನಾತಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು, ೨೨ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ೬೭ ಪಿಹೆಚ್.ಡಿ
ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ನೀಡಿ ಪ್ರದಾನ ಮಾಡಲಾಯಿತು.
ಜೊತೆಗೆ ವಿಭಿನ್ನ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ೧೫ ಬಿ.ಎ. ವಿದ್ಯಾರ್ಥಿಗಳಿಗೆ, ೩೩ ಬಿ.ಕಾಂ. ವಿದ್ಯಾರ್ಥಿಗಳಿಗೆ, ಹಾಗೂ ೧೦ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಪದವಿ ಪ್ರದಾನ ಮಾಡಲಾಯಿತು.
ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಡಾ. ಶಿವಾನಂದ ಹೊಸಮನಿ ಅವರು, ೨೦೧೦ ರಿಂದ ಇಲ್ಲಿಯವರೆಗೆ ರಾಚವಿ ಬೆಳೆದು ಬಂದ ಬಗೆಯನ್ನು ವಿವರಿಸಿದರು.
ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಇರುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವ ಪ್ರೊ. ಸಿದ್ದು ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ. ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಶಂಕರಾನಂದ ಬನಶಂಕರಿ, ವಿಟಿಯು ಕುಲಪತಿಗಳಾದ ಡಾ. ಕರಿಸಿದ್ದಪ್ಪ, ಹಾಗೂ ಸಿಂಡಿಕೇಟ್ ಸದಸ್ಯರುಗಳು, ಪಾಲಕರು, ವಿವಿಯ ಎಲ್ಲ ವಿದ್ಯಾರ್ಥಿಗಳು ಸೇರಿದಂತೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ