ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯಲ್ಲಿ ಮಡಿಕೇರಿ ಮೊಟ್ಟೆ ಮಹಾಯುದ್ಧ ಮಾರ್ಧನಿಸಿದ್ದು, ವಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತಾರೂಢ ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೆ ಕಾರಣವಾಯಿತು.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪರಿಶೀಲನೆಗೆ ತೆರಳಿದ್ದ ವೇಳೆ ನನ್ನ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಮೊಟ್ಟೆ ಎಸೆದ ಮಾತ್ರಕ್ಕೆ ನೀವೇನು ವೀರರಾ? ಶೂರರಾ? ಬಿಜೆಪಿ ನಾಯಕರು ಕಾರ್ಯಕರ್ತರಿಗೆ ಹೇಳಿ ಮಾಡಿಸಿದ ಕೃತ್ಯ ಇದು. ನಂತರ ಕೊಡಗಿನ ಜನರು ಮಾಡಿದ್ದು ಎನ್ನುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಶಾಸಕ ಬೋಪಯ್ಯ, ನಾವೂ ಕೊಡಗಿನವರೇ ಎಂದು ಹೇಳಿದರು.
ಇದರಿಂದ ಕೆಂಡಾಮಂಡಲರಾದ ಸಿದ್ದರಾಮಯ್ಯ ಜನರನ್ನು ಕರೆತಂದು ಬಿಜೆಪಿ ಕಾರ್ಯಕರ್ತರಿಂದ ವಿಪಕ್ಷ ನಾಯಕನ ಕಾರಿನಮೇಲೆ ಮೊಟ್ಟೆ ಎಸೆಯುವಂತೆ ಪ್ರಚೋದನೆ ಕೊಟ್ಟು ಮಾಡಿಸಿದ್ದೀರಾ. ಇದನ್ನು ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದೀರಾ? ನಿಮ್ಮನ್ನು ವೀರರು ಎನ್ನಬೇಕಾ? ಮನಸ್ಸು ಮಾಡಿದ್ರೆ ನಾನು ಇಡೀ ರಾಜ್ಯದಲ್ಲಿ ನಿಮ್ಮ ವಿರುದ್ಧ ಮೊಟ್ಟೆ ಎಸೆಯುವಂತೆ ಮಾಡಬಲ್ಲೆ…ಮೊಟ್ಟೆ ಹೊಡೆಸಲು ನನಗೆ ಆಗಲ್ವಾ? ಎಂದು ರೋಷಾವೇಶ ವ್ಯಕ್ತಪಡಿಸಿದರು.
ನನ್ನ ಕಾರಿನ ಮೇಲೆ ಎರಡುಕಡೆ ಮೊಟ್ಟೆ ಎಸೆದಿದ್ದಾರೆ. ಬಳಿಕ ಹಿಂದಗಡೆಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಇಂತಹ ಕೃತ್ಯ ಎಸಗಿದವರನ್ನು ಅರೆಸ್ಟ್ ಮಾಡುವುದನ್ನು ಬಿಟ್ಟು ನಾಟಕವಾಡಿದ್ದೀರಿ. ಇದು ಗೃಹ ಇಲಾಖೆ ವೈಫಲ್ಯ ಎನ್ನುತ್ತಿದ್ದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ನಾವು ಭದ್ರತೆಗಾಗಿಯೇ ಪೊಲಿಸರನ್ನು ನಿಯೋಜಿಸಿದ್ದೆವು. ಮೊಟ್ಟೆ ಎಸೆದ ಆರೋಪಿಯನ್ನು ಬಂಧಿಸಿ ಕ್ರಮವನ್ನು ಕೈಗೊಂಡಿದ್ದೇವೆ ಎನ್ನುತ್ತಿದ್ದಂತೆ ನೀವೆಲ್ಲಿ ಬಂದಿಸಿದ್ದೀರಿ? ನಾನು ಎಸ್ ಪಿಗೆ ಕರೆ ಮಾಡಿ ಹೇಳಿದ ನಂತರ ಬಂಧಿಸಿದ್ರಿ. ಅಲ್ಲಿಯವರೆ ಏನು ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರು.
ಅಂದು ರೆಡ್ಡಿ ಬ್ರದರ್ಸ್ ಬಳ್ಳಾರಿಗೆ ಬನ್ನಿ ಎಂದು ಸವಾಲು ಹಾಕಿದ್ದರು. ಅದೇ ರೀತಿ ಕೊಡಗಿಗೆ ಬನ್ನಿ ನೋಡೋಣ ಎಂದು ಬೊಪಯ್ಯ ಹೇಳಿದ್ದರು ಎನ್ನುತ್ತಿದ್ದಂತೆ ಮತ್ತೆ ಎದ್ದು ನಿಂತ ಶಾಸಕ ಬೋಪಯ್ಯ ಕೊಡಗಿಗೆ ಬನ್ನಿ ನಮ್ಮ ಮನೆ ನಾಯಿ ಮಾತನಾಡಿಸುತ್ತೆ ಎಂದು ಹೇಳಿದ್ದೆ ಎಂದು ಕಿಚಾಯಿಸುತ್ತಿದ್ದಂತೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಸದನದಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು.
PSI ಹುದ್ದೆಗೆ ಶಾಸಕರ ವಿರುದ್ಧ ಲಂಚ ಆರೋಪ; ಯೂಟರ್ನ್ ಹೊಡೆದ ಪರಸಪ್ಪ
https://pragati.taskdun.com/politics/psi-recritment-scammla-basavaraj-dadesuguruaudio-viralparasappau-turn/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ