ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿದ ʻಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼರ ಕರಡನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡನೆಮಾಡಿ ಕಾನೂನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದನ್ನು ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ.
ಈ ಕಾನೂನು ಜಾರಿಯಾಗುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರ ಮೂಲಕ ಮುಖ್ಯಮಂತ್ರಿ ಸೇರಿದಂತೆ, ಎಲ್ಲ ಸಚಿವರಿಗೂ ಹಾಗೂ ಎಲ್ಲ ಶಾಸಕರಿಗೂ ವೈಯಕ್ತಿಕವಾಗಿ ಪತ್ರ ಬರೆದು ವಿಧೇಯಕದ ಕುರಿತು ಮನವರಿಕೆ ಮಾಡಿಕೊಟ್ಟು ಕಾನೂನು ಜಾರಿಗೊಳಿಸುವಂತೆ ಒತ್ತಡ ತಂದಿದ್ದು, ರಾಜ್ಯದ ಬಹುತೇಕ ಸಚಿವರು ಹಾಗೂ ಶಾಸಕರು ಪಕ್ಷ ಬೇಧ ಮರೆತು ʻಕನ್ನಡ ಸಮಗ್ರ ಅಭಿವೃದ್ಧಿ ವಿದೇಯಕ-೨೦೨೨ʼವನ್ನು ಬೆಂಬಲಿಸುವುದಾಗಿ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ ತಯಾರು ಮಾಡಲಾದ ಈ ವಿಧೇಯಕದ ಕರಡನ್ನು ಸರಕಾರಕ್ಕೆ ಜಾರಿ ಮಾಡುವ ಅನಿವಾರ್ಯತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಸರಕಾರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದು ಕನ್ನಡ ಭಾಷೆ ಅಭಿವೃದ್ಧಿಗಾಗಿ ಕಾನೂನು ಆಯೋಗ ಹಮ್ಮಿಕೊಂಡಿರುವ ಈ ಕಾರ್ಯ ಶ್ರೇಷ್ಠ ಹಾಗೂ ಸಮಯೋಚಿತವಾಗಿದ್ದು, ಇದರ ಮಹತ್ವವನ್ನು ಅರಿತ ಮುಖ್ಯಮಂತ್ರಿಗಳು ಕಾನೂನು ಜಾರಿ ಮಾಡುವುದಕ್ಕೆ ಮುಂದಾಗಿದ್ದು ಕನ್ನಡ ಭಾಷೆ ಅಭಿವೃದ್ಧಿಗೆ ಜಂಘಾ ಬಲ ಬಂದಂತಾಗಲಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜೊತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಲು ಜಾರಿಗೆ ತರಲಾಗುತ್ತಿರುವ ʻಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨ʼ ದಿಂದ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲವಾಗಲಿದೆ.. ಈಗಾಗಲೇ ವಿಧೇಯಕದ ಕರಡು ಪ್ರತಿಯನ್ನು ಕಾನೂನು ಆಯೋಗವು, ಕಾನೂನು ಇಲಾಖೆ ತಜ್ಞರೊಂದಿಗೆ ಚರ್ಚೆ ಮಾಡಿ ಸಿದ್ಧಪಡಿಸಿದೆ. ಕನ್ನಡದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ ೧೦೭ ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ವಿಧೇಯಕ ಜಾರಿಗೆ ಬರುವುದರಿಂದ ಆನೆ ಬಲ ಬಂದಂತಾಗುವುದು ಎಂದು ಡಾ. ಮಹೇಶ ಜೋಶಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಘಟಕಗಳ ಅಧ್ಯಕ್ಷರ ಮೂಲಕ ವಿಧಾನಸಭೆಯ ಎಲ್ಲ ಸದಸ್ಯರನ್ನು ಸಂಪರ್ಕಿಸಿ ವಿಧೇಯಕದ ಮಹತ್ವ ಮತ್ತು ಅನಿವಾರ್ಯತೆಯನ್ನು ತಿಳಿಯಪಡಿಸಿತ್ತು. ಜೊತೆಗೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ನ್ನು ಸದನದಲ್ಲಿ ಪಕ್ಷಬೇಧ ಮರೆತು ʻʻನಾವೆಲ್ಲಾ ಕನ್ನಡಿಗರುʼʼ ಎನ್ನುವ ಒಂದೇ ಮನೋಭಾವನೆಯಲ್ಲಿ ಒಕ್ಕೊರಲ ಒಪ್ಪಿಗೆ ಸೂಚಿಸಲು ಮನವಿಮಾಡಲಾಗಿತ್ತು. ಸಂವಿಧಾನದ ಅನುಚ್ಛೇದ ೩೪೫ ರಂತೆ ಪ್ರತಿ ರಾಜ್ಯದಲ್ಲಿ ಒಂದು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಿಕೊಳ್ಳಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಅಧಿಕೃತ ಭಾಷೆಯಾಗಿದೆ. ನಮ್ಮ ಆಡಳಿತ ಭಾಷೆಯನ್ನು ಅಭಿವೃದ್ಧಿಪಡಿಸಲು ಸರಕಾರ ರಾಜ್ಯಭಾಷಾ ಅಧಿನಿಯಮ ೧೯೬೩ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ-೧೯೮೧ ಜಾರಿಗೆ ತಂದಿದೆ. ಇದರೊಂದಿಗೆ ಕನ್ನಡಕ್ಕೆ ಇನ್ನಷ್ಟು ಪುಷ್ಟಿ ನೀಡುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-೧೯೯೪ನ್ನು ಸಹ ರೂಪಿಸಲಾಗಿದೆ. ಹೀಗೆ ಅನೇಕ ಕಾನೂನುಗಳಿದ್ದರೂ ಸಹಿತ ಸೂಕ್ತವಾಗಿ ಕನ್ನಡ ಅನುಷ್ಠಾನ ಆಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಾಗಲಿರುವ ಅಧಿನಿಯಮ ದಿಂದ ಕನ್ನಡ ಭಾಷೆಯ ಏಳಿಗೆಗೆ ಒತ್ತು ನೀಡಿದಂತಾಗಲಿದೆ ಎಂದು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು.
ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಗೆ ಸ್ಪಂದಿಸಿದ ಶಾಸಕರುಗಳಾದ ಚಿದಾನಂದ ಎಂ ಗೌಡ, ಸಿ.ಎಮ್ ರಾಜೇಶ್ ಗೌಡ, ಡಾ. ಶಾಮನೂರು ಶಿವಶಂಕರಪ್ಪ, ಡಾ. ವೀರಣ್ಣ ಸಿ. ಚರಂತಿಮಠ, ದೊಡ್ಡನಗೌಡ ಜಿ. ಪಾಟೀಲ್, ಡಾ. ವೈ.ಎ. ನಾರಾಯಣಸ್ವಾಮಿ, ಕೆ. ಶಿವನಗೌಡ ನಾಯಕ, ಶರಣಗೌಡ ಎ.ಪಾಟೀಲ್ ಬಯ್ಯಾಪುರ, ರಾಜಾ ವೆಂಕಟಪ್ಪ ನಾಯಕ, ಡಾ. ಹೆಚ್.ಡಿ.ರಂಗನಾಥ್, ಎಸ್.ಎ.ರವೀಂದ್ರನಾಥ್, ಕೆ. ಮಾಡಾಳ್ ವಿರೂಪಾಕ್ಷಪ್ಪ, ಎಮ್.ಪಿ. ರೇಣುಕಾಚಾರ್ಯ, ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ನಾಡಿನಾಧ್ಯಂತ ಹಲವು ಶಾಸಕರು ಪಕ್ಷ ಬೇದ ಮರೆತು ವಿಧೇಯಕ್ಕೆ ಲಿಖಿತ ರೂಪದಲ್ಲಿ ಬೆಂಬಲ ಸೂಚಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಅನ್ನು ಕಾನೂನಾಗಿ ಜಾರಿಗೆ ತರಲು ಎಲ್ಲಾ ಸದಸ್ಯರು ಸದನದಲ್ಲಿ ಪಕ್ಷಬೇಧ ಮರೆತು, “ನಾವೆಲ್ಲರೂ ಕನ್ನಡಿಗರು” ಎಂಬ ಭಾವದಲ್ಲಿ ಏಕಕಂಠದಲ್ಲಿ ಒಪ್ಪಿಗೆ ಸೂಚಿಸುವ ಅವಶ್ಯಕತೆ ಇದೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಮನವಿಗೆ ಸದನದ ಎಲ್ಲಾ ಸದಸ್ಯರು ಒಪ್ಪಿ, ನಾವೆಲ್ಲಾ ಕನ್ನಡಮ್ಮನ ಮಕ್ಕಳು, ಕನ್ನಡದ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ, ಎನ್ನುವ ಮನೋಭಾವನೆಯಲ್ಲಿ ಕಾನೂನು ಜಾರಿಯಾಗಲಿದೆ ಎಂಬ ಭರವಸೆಯನ್ನು ನಾಡೋಜ ಡಾ. ಮಹೇಶ ಜೋಶಿ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಅನುಚ್ಛೇದ ೩೪೫ ರಂತೆ ಪ್ರತಿ ರಾಜ್ಯದಲ್ಲಿ ಒಂದು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಿಕೊಳ್ಳಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಕನ್ನಡವು ಅಧಿಕೃತ ಭಾಷೆ. ಆಡಳಿತ ಭಾಷೆಯನ್ನು ಅಭಿವೃದ್ಧಿಪಡಿಸಲು ಸರಕಾರ ರಾಜ್ಯಭಾಷಾ ಅಧಿನಿಯಮ ೧೯೬೩ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ-೧೯೮೧ ಜಾರಿಗೆ ತಂದಿದೆ. ಇದರೊಂದಿಗೆ ಕನ್ನಡಕ್ಕೆ ಇನ್ನಷ್ಟು ಬಲ ನೀಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-೧೯೯೪ನ್ನು ಸಹ ರೂಪಿಸಲಾಗಿದೆ. ಹೀಗೆ ಅನೇಕ ಕಾನೂನುಗಳಿದ್ದರೂ ಸೂಕ್ತವಾಗಿ ಕನ್ನಡದ ಅನುಷ್ಠಾನ ಆಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಾಗಲಿರುವ ಕಾನೂನು ಕನ್ನಡ ಭಾಷೆಯ ಅಭಿವೃದ್ಧಿಗೆ ಒತ್ತು ನೀಡಿದಂತಾಗುವುದು.
ಎಸ್.ಎಸ್.ಎಲ್.ಸಿ ತತ್ಸಮಾನ ಪರೀಕ್ಷೆಗಳವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡ ಭಾಷೆ ಬೋಧನೆ. ಉದ್ಯೋಗದಲ್ಲಿ, ನ್ಯಾಯಾಂಗದಲ್ಲಿ, ಸರಕಾರಿ ಅನುದಾನ ಹಾಗೂ ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮದ ಕರಪತ್ರ, ಬ್ಯಾನರ್ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲು ಪ್ರಸಕ್ತ ವಿಧೇಯಕದ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಅಂಗಡಿ ಮಳಿಗೆಗಳು, ಆಸ್ಪತ್ರೆಗಳು, ಕಚೇರಿಗಳು ಸೇರಿದಂತೆ ಎಲ್ಲಾ ಪ್ರಕಾರದ ನಾಮಫಲಕದಲ್ಲಿ ಕಡ್ಡಾಯವಾಗಿ ಅರ್ಧದಷ್ಟು ಬರಹ ಕನ್ನಡದಲ್ಲಿಯೇ ಇರಬೇಕು. ೧೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕಾರ್ಯಾಗಾರ ನಡೆಸುವುದರೊಂದಿಗೆ ಕನ್ನಡಿಗರಿಗೆ ಮೊದಲ ಪ್ರಾಧಾನ್ಯ ನೀಡುವುದು, ಮುಂತಾದ ವಿಷಯಗಳನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರಲ್ಲಿ ಅಳವಡಿಸಲಾಗಿದೆ.
ಅದರಂತೆ ವಿಧೇಯಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಕೀಳರಿಮೆ ಮಾಡಿದರೆ ಅಥವಾ ವಿಧೇಯಕದ ಬಗ್ಗೆ ನಿರ್ಲಕ್ಷ ತೋರಿದರೆ ತೆರಿಗೆ ವಿನಾಯತಿ, ಧನಸಹಾಯ ಸೇರಿದಂತೆ ಸರಕಾರ ನೀಡುವ ಇತರೇ ಸೌಲಭ್ಯಗಳನ್ನು ತಡೆ ಹಿಡಿಯುವ ಮತ್ತು ನಿಯಮಗಳ ಉಲ್ಲಂಘಿಸಿದರೆ ಕಾರಣ ಕೇಳಿ ನೋಟಿಸು ನೀಡಲು ಅವಕಾಶ ಇರುತ್ತದೆ. ತಪ್ಪಿತಸ್ಥರ ವಿರುದ್ಧ ಮೊದಲನೇ ಅಪರಾಧಕ್ಕೆ ೫, ೦೦೦ ರೂ., ಎರಡನೆಯ ಅಪರಾಧಕ್ಕೆ ೧೦,೦೦೦ ರೂ. ನಂತರ ಪ್ರತಿ ಅಪರಾಧಕ್ಕೆ ೨೦,೦೦೦ ರೂ ದಂಡ ವಿಧಿಸುವದರ ಜೊತೆ ಪರವಾನಗಿ ರದ್ದುಪಡಿಸುವ ಕಠಿಣಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದು ಇದು ಕನ್ನಡ ಭಾಷೆ ಉಳಿಸಿ ಬೆಳೆಸಲು ಅನುಕೂಲವಾಗಲಿದೆ.
ಕನ್ನಡದ ಮೇಲೆ ಅಪಾರ ಅಭಿಮಾನ ಹೊಂದಿರುವ ಹಾಗೂ ಕನ್ನಡಿಗರಿಂದ ಚುನಾಯಿತರಾಗಿರುವ ಎಲ್ಲಾ ಜನ ಪ್ರತಿನಿಧಿಗಳಿಗೆ ಇದೊಂದು ಕನ್ನಡದ ಋಣ ತೀರಿಸುವ ಸದಾವಕಾಶವಾಗಿದ್ದು, ʻಕನ್ನಡ-ಕನ್ನಡಿಗ-ಕರ್ನಾಟಕʼ ಇವುಗಳ ಹಿತರಕ್ಷಣೆಗಾಗಿ ಜಾರಿ ತರುತ್ತಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿದೇಯಕ-೨೦೨೨’ ಕ್ಕೆ ಶಾಸಕರುಗಳು ಈಗಾಗಲೇ ಲಿಖಿತ ರೂಪದಲ್ಲಿ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದು ಕನ್ನಡದ ಕೆಲಸಗಳಿಗೆ ಎಲ್ಲಾ ಶಾಸಕರು ಪಕ್ಷ ಬೇಧ ಮರೆತು ಕಟಿಬದ್ಧರಾಗಿದ್ದೀರಿ ಎಂಬ ವಿಶ್ವಾಸ ತಮ್ಮ ಮತದಾರರಲ್ಲಿ ಮೂಡುತ್ತದೆ ಎಂಬ ವಿಶ್ವಾಸ ಬರಲಿದೆ ಎನ್ನುವ ಭಾವನೆ ನನ್ನದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಮಹೇಶ್ ಜೋಶಿ ತಿಳಿಸಿದ್ದಾರೆ.
ED ವಿಚಾರಣೆ ವೇಳೆಯೇ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಶಾಕ್!
https://pragati.taskdun.com/politics/d-k-shivakumarsupreme-courtstayhigh-court-order/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ