ಪ್ರಗತಿವಾಹಿನಿ ಸುದ್ದಿ, ಮೈಸೂರು: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ತಮ್ಮ ಪತಿಯರನ್ನು ಕಳೆದುಕೊಂಡ ಮಹಿಳೆಯರು ಒಟ್ಟಿಗೆ ಸೇರಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪರೋಟ ಕಾರ್ಟ್ನ್ನು ಆರಂಭಿಸಿ ಸ್ವ-ಉದ್ಯೋಗ ಸೃಷ್ಟಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಈ ಕುರಿತಾದ ಮಾಹಿತಿ ಇಲ್ಲಿದೆ.
ಮೈಸೂರು ಸುತ್ತಮುತ್ತ ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿ ಕೋವಿಡ್ ಸೋಂಕಿನಿಂದ ಕುಟುಂಬದ ಆಧಾರವಾಗಿದ್ದ ಗಂಡಂದಿರನ್ನು ಕಳೆದುಕೊಂಡು ದಿಕ್ಕೇ ತೋಚದಂತಾಗಿದ್ದ 12ಕ್ಕೂ ಹೆಚ್ಚು ಮಹಿಳೆಯರಿಗೆ, ಮೈಸೂರಿನ ಕೂಗು ಫೌಂಡೇಶನ್ ನೆರವಿನಿಂದ ಮನೆಯಲ್ಲಿ ಪರೋಟ ಮಾಡಿ, ಮನೆ ಮನೆಗೆ ತಲುಪಿಸುತ್ತ ಸ್ವ-ಉದ್ಯೋಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇನ್ನು, ಇವರ ಉದ್ದಿಮೆಗೆ ಪುಷ್ಟಿ ನೀಡಲು ಕೂಗು ಫೌಂಡೇಶನ್, ತಳ್ಳುಗಾಡಿಗಳನ್ನು ನೀಡಿ ಅದಕ್ಕೆ ಪರೋಟ ಕಾರ್ಟ್ ಎಂದು ಹೆಸರಿಟ್ಟು, ಅವರ ವ್ಯಾಪಾರಕ್ಕೆ ಪ್ರೋತ್ಸಾಹಿಸಿದೆ.
ಈ ಮಹಿಳೆಯರು ಮೊದಲು ತೋಟದ ಮನೆಯಲ್ಲಿ ಪರೋಟ ಮಾಡಿ, ಮನೆ ಮನೆಗೆ ತಲುಪಿಸುತ್ತಿದ್ದರು. ಈಗ ಗಾಡಿ ಮೂಲಕ ನಗರದ ಲೋಯಲ್ ವರ್ಲ್ಡ್ ಸೇರಿದಂತೆ ಹಲವು ಕಡೆ ಪರೋಟಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೋವಿಡ್ನಿಂದಾಗಿ ಗಂಡಂದಿರನ್ನು ಕಳೆದುಕೊಂಡು ಸಂಸಾರದ ನಿರ್ವಹಣೆ ಹಾಗೂ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೋಟದ ಕೆಲಸಗಳಿಗೆ ಹೋಗುತ್ತಿದ್ದವರಿಗೆ ಕೂಗು ಫೌಂಡೇಷನ್ನ ಡಾ. ನಂದಿನಿ ಕೇಶವ್ ಮಹಿಳೆಯರಿಗೆ ಪರೋಟವನ್ನು ಮಾರಾಟ ಮಾಡುವ ಬಗ್ಗೆ ಸಲಹೆ ನೀಡಿದ್ದರು. ಅದರಂತೆ ಈ ಮಹಿಳೆಯರು ಪರೋಟ ತಯಾರಿಸಿ, ಮನೆ ಮನೆಗೆ ಪರೋಟವನ್ನು ಡೆಲಿವರಿ ಮಾಡುತ್ತಿದ್ದಾರೆ.
ಪರೋಟ ಕಾರ್ಟ್ ಆರಂಭಿಸಿದ ಮೈಸೂರಿನ ಮಹಿಳೆಯರು
ಮನೆಯಲ್ಲಿ ಪರೋಟ ಮಾಡಿ ದೂರದಲ್ಲಿರುವ ಮನೆಗಳಿಗೆ ಡೆಲಿವರಿ ಕೊಡುವುದು ಕಷ್ಟಕರವಾಗಿದ್ದರಿಂದ ಇದೀಗ ನಗರದ ಪ್ರಮುಖ ಸ್ಥಳಗಳಲ್ಲಿ ತಳ್ಳುವ ಗಾಡಿಯನ್ನಿಟ್ಟು ಪರೋಟ ಮಾರುತ್ತಿದ್ದಾರೆ. ಈಗ ಒಳ್ಳೆಯ ವ್ಯಾಪಾರ ಆಗುತ್ತಿದೆ ಎಂದು ಹೇಳುತ್ತಾರೆ ಮಹದೇವಮ್ಮ.
ಈ ಪರೋಟ ಗಾಡಿಯಲ್ಲಿ ಐದು ವಿಧದ ಪರೋಟಗಳನ್ನು ಮಾರಾಟ ಮಾಡುತ್ತಿದ್ದು, ಪರೋಟಗಳನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತಿದೆ. ಪರೋಟ ಬೇಕಾದವರು ಪರೋಟ ಗಾಡಿಯ ಮೇಲಿರುವ ಮೊಬೈಲ್ ನಂಬರ್ಗೆ ಕರೆ ಮಾಡಿದರೆ ನೇರವಾಗಿ ಮನೆಗೆ ತಲುಪಿಸುವ ಕೆಲಸವನ್ನೂ ಮಾಡುತ್ತೇವೆ ಅಂತಾರೆ ಮಹದೇವಮ್ಮ.
ಕೋವಿಡ್ ಸಂದರ್ಭದಲ್ಲಿ ತಮ್ಮ ಮನೆಯ ಆಧಾರ ಸ್ತಂಭವಾಗಿದ್ದ ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಎದೆಗುಂದದೆ ದೃಢ ಹೆಜ್ಜೆಯನ್ನಿಟ್ಟು ಪರೋಟ ವ್ಯಾಪಾರವನ್ನು ಆರಂಭಿಸಿವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದು ಸಮಾಜಕ್ಕೆ ಮಾದರಿಯಾಗಿದ್ದಾರೆ.
ತುಳಸಿ ವಿವಾಹ; ಆಚರಣೆ, ವಿಧಾನ, ಹಿನ್ನೆಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ